2026ರ ನವೆಂಬರ್ 7ರಂದು ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೊದ ದೃಶ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಚಿತ್ರ: ವಿಡಿಯೊ ಗ್ರ್ಯಾಬ್
ಬೆಂಗಳೂರು: ದೇಶದಲ್ಲಿ ಪ್ರಸ್ತುತ ಪೆಟ್ರೋಲ್‌ಗೆ ಶೇ 20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಇದು ರಾಷ್ಟ್ರೀಯ ಎಥೆನಾಲ್ ಮಿಶ್ರಣ ನೀತಿಗೆ ಅನುಗುಣವಾಗಿದೆ ಹಾಗೂ ಶೇ 19ರಿಂದ ಶೇ 21ರವರೆಗಿನ ಸ್ವೀಕಾರಾರ್ಹ ವ್ಯಾಪ್ತಿಯಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮರ್ಥಿಸಿಕೊಂಡಿದ್ದಾರೆ. ಇದನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ರೈತ ವಿರೋಧಿ ನಿಲುವು ತಳೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಮಿಶ್ರಣ ಪ್ರಮಾಣವನ್ನು ಜಾಗತಿಕವಾಗಿ ಆಟೋಮೊಬೈಲ್ ಉದ್ಯಮ ಅಂಗೀಕರಿಸಿದೆ ಎಂದು ಜೋಶಿ ಶನಿವಾರ ಸಂಜೆ ಹೇಳಿದ್ದಾರೆ. ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುವ ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥೆನಾಲ್ ಇದೆ ಎಂಬ ವಿವಾದದ ಕೇಂದ್ರಬಿಂದು ಕರ್ನಾಟಕವಾಗಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಬಂದಿದೆ.
ಎಥೆನಾಲ್ ಉತ್ಪಾದನೆಯಿಂದ ಕಬ್ಬು ಬೆಳೆಗಾರರಿಗೆ ಬಹಳ ದೊಡ್ಡ ಅನುಕೂಲವಾಗಲಿದೆ ಎಂದು ಜೋಶಿ ಹೇಳಿದ್ದಾರೆ. ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸುವಾಗ ರೈತರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೆಂಬ ನಿಯಮವಿದೆ ಎಂದೂ ಅವರು ತಿಳಿಸಿದ್ದಾರೆ.
ವಿದೇಶಗಳಿಂದ ತರಿಸಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶವನ್ನು ಆತ್ಮನಿರ್ಭರಗೊಳಿಸಲು ಎಥೆನಾಲ್ ಮಿಶ್ರಣ ಒಂದು ಪ್ರಮುಖ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ.
ಎಥೆನಾಲ್ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ನಡೆಸುತ್ತಿರುವ ವಿರೋಧ ಮತ್ತು ಆಂದೋಲನಗಳು ರೈತ ವಿರೋಧಿ ಧೋರಣೆಯಾಗಿದೆ ಎಂದು ಜೋಶಿ ಹೇಳಿದ್ದಾರೆ.
ರಾಜ್ಯದ ಕಾನೂನು ಮಾಪನಶಾಸ್ತ್ರ ಇಲಾಖೆ ನವೆಂಬರ್ 6ರಂದು ಬಿಡುಗಡೆ ಮಾಡಿದ ಪರೀಕ್ಷಾ ಫಲಿತಾಂಶಗಳಲ್ಲಿ ಪಟ್ಟಿ ಮಾಡಲಾದ 14 ಪೆಟ್ರೋಲ್ ಮಾದರಿಗಳ ಪೈಕಿ 11ರಲ್ಲಿ ಶೇ 20ಕ್ಕಿಂತ ಹೆಚ್ಚು ಎಥೆನಾಲ್ ಇತ್ತು ಎಂದು ತಿಳಿಸಿತ್ತು. ಐಒಸಿಎಲ್ ಮಾದರಿಯೊಂದರಲ್ಲಿ ಗರಿಷ್ಠ ಶೇ 31.2ರಷ್ಟು ಎಥೆನಾಲ್ ಕಂಡುಬಂದಿತ್ತು. ಈ ಫಲಿತಾಂಶಗಳ ಬಳಿಕ ರಾಜ್ಯ ಸರ್ಕಾರ ಮಾಹಿತಿ ಬಹಿರಂಗ, ನಿಯಂತ್ರಣ ಕ್ರಮ ಮತ್ತು ಗ್ರಾಹಕರಿಗೆ ಪರಿಹಾರಕ್ಕೆ ಒತ್ತಾಯಿಸಿತ್ತು.
ಎಥೆನಾಲ್ ಮತ್ತು ಕಬ್ಬಿನ ಬೆಲೆ ವಿಚಾರ ರಾಜ್ಯದಲ್ಲಿ ರಾಜಕೀಯ ವಿಷಯವೂ ಆಗಿದೆ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸುವಂತೆ ಮತ್ತು ಎಥೆನಾಲ್ ನೀತಿಯನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಇ20 ಇಂಧನ ಕುರಿತ ಆತಂಕಗಳನ್ನು ಕೇಂದ್ರ ಈ ಹಿಂದೆಯೂ ತಳ್ಳಿಹಾಕಿತ್ತು. ಈ ಇಂಧನವನ್ನು ಜಾಗತಿಕವಾಗಿ ಪರೀಕ್ಷಿಸಲಾಗಿದ್ದು, ವೈಜ್ಞಾನಿಕವಾಗಿ ದೃಢೀಕರಿಸಲಾಗಿದೆ ಎಂದು ಸರ್ಕಾರ ಜುಲೈನಲ್ಲಿ ಹೇಳಿತ್ತು.
