Home ರಾಮನಗರ ಕೂಡಿಟ್ಟ ಹಣವನ್ನೂ ಶ್ರೀರಾಮ ಮಂದಿರಕ್ಕೆ ಅರ್ಪಿಸಿದ ಚಿಣ್ಣರು, ಭಾವುಕರಾದ ಹಿರಿಯರು

ಕೂಡಿಟ್ಟ ಹಣವನ್ನೂ ಶ್ರೀರಾಮ ಮಂದಿರಕ್ಕೆ ಅರ್ಪಿಸಿದ ಚಿಣ್ಣರು, ಭಾವುಕರಾದ ಹಿರಿಯರು

13
0

ರಾಮನಗರದಲ್ಲಿ ನಿಧಿ ಸಮರ್ಪಣಾ ಅಭಿಯಾನ ನಡೆಸಿದ ಉಪ ಮುಖ್ಯಮಂತ್ರಿ

ರಾಮನಗರ:

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕಾಗಿ ರಾಮನಗರದಲ್ಲಿಂದು ನಡೆದ ನಿಧಿ ಸಮರ್ಪಣಾ ಅಭಿಯಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮನೆಮನೆಗೂ ತೆರಳಿ ನಿಧಿ ಸಂಗ್ರಹ ಮಾಡಿದರು.

ಜಿಲ್ಲಾ ಕೇಂದ್ರದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ, ನಗರದ ವಿವಿಧ ಭಾಗಗಳಲ್ಲಿ ಡಿಸಿಎಂ ಸಂಚರಿಸಿದರಲ್ಲದೆ, ಸಾರ್ವಜನಿಕರು ಶ್ರದ್ಧೆ-ಭಕ್ತಿಯಿಂದ ತಮ್ಮ ಕೈಲಾದ ಮಟ್ಟಿಗೆ ದೇಣಿಗೆಯನ್ನು ನೀಡಿದರು.

ಚಾಮುಂಡೇಶ್ವರಿ ಬಡಾವಣೆ, ಎಂ.ಜಿ.ರಸ್ತೆ, ನಗರಸಭೆ ಎದುರಿನ ಪ್ರದೇಶ, ಕೆಂಪೇಗೌಡ ವೃತ್ತ, ಪಂಚಮುಖಿ ಆಂಜನೇಯಸ್ವಾಮಿ ರಸ್ತೆ, ರೆಡ್ಡಿ ಸಾಮಿಲ್‌, ರಾಯರ ದೊಡ್ಡಿ ಪ್ರದೇಶಗಳಲ್ಲಿ ಸುಮಾರು 21ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದ ಡಿಸಿಎಂ ಅವರಿಗೆ ಜನರು ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡಿದರು.

ತಮ್ಮ ಮನೆಗೆ ಬಂದ ಉಪ ಮುಖ್ಯಮಂತ್ರಿಯನ್ನು ಆದರದಿಂದ ಬರಮಾಡಿಕೊಂಡ ಜನರು, ಮಂದಿರ ನಿರ್ಮಾಣ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮುಖ್ಯವಾಗಿ ಹಿರಿಯ ನಾಗರೀಕರೂ, ಅದರಲ್ಲೂ ಮಹಿಳೆಯರು, ಅಯೋಧ್ಯೆಯಲ್ಲಿ ಮಂದಿರ ಸಾಕ್ಷಾತ್ಕಾರವಾಗುತ್ತಿರುವುದಕ್ಕೆ ಭಾವುಕರಾಗಿ ಪ್ರತಿಕ್ರಿಯಿಸಿದರು. ತಮ್ಮ ಉಳಿತಾಯದಲ್ಲಿದ್ದ ಹಣವನ್ನೂ ಅವರು ಡಿಸಿಎಂ ಅವರಿಗೆ ಹಸ್ತಾಂತರ ಮಾಡಿದರು.

ಪಾಕೆಟ್‌ ಮನಿ ಕೊಟ್ಟ ಚಿಣ್ಣರು

ವಿಶೇಷವೆಂದರೆ; ಚಿಣ್ಣರು ಕೂಡ ಅಪ್ಪ-ಅಮ್ಮ ತಮ್ಮ ಖರ್ಚಿಗಾಗಿ ನೀಡಿದ್ದ ಹಣವನ್ನೂ ಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಿ ಸಾರ್ಥಕತೆ ಮೆರೆದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ; “ರಾಮ ಮಂದಿರ ನಿರ್ಮಾಣಕ್ಕೆ ಹಣ ಕೊಡಿ ಎಂದು ಯಾರನ್ನು ಯಾರೂ ಕೇಳುತ್ತಿಲ್ಲ. ಆದರೆ ಜನರೇ ಸ್ವ-ಇಚ್ಛೆಯಿಂದ ಅಯೋಧ್ಯೆ ರಾಮನಿಗೆ ಮಂದಿರ ನಿರ್ಮಿಸಲು ಕೈಜೋಡಿಸುತ್ತಿದ್ದಾರೆ. ಅದರಲ್ಲೂ ಪುಟ್ಟ ಮಕ್ಕಳು ತಮ್ಮ ಖರ್ಚಿನ ಕಾಸನ್ನೂ ರಾಮರ ಸೇವೆಗೆ ಅರ್ಪಿಸಿದ್ದು ನನ್ನ ಮನಸ್ಸು ಉಕ್ಕಿ ಬರುವಂತೆ ಮಾಡಿತು” ಎಂದರು.

ದೇಣಿಗೆ ನೀಡುವ ಸಂದರ್ಭದಲ್ಲಿ ಭಾವುಕರಾದ ಹಿರಿಯ ನಾಗರೀಕರೊಬ್ಬರು; “ನಾನು ಬದುಕಿರುವಾಗಲೇ ಅಯೋಧ್ಯೆಯಲ್ಲಿ ನಮ್ಮ ರಾಮನಿಗೆ ಮಂದಿರ ನಿರ್ಮಾಣವಾಗುತ್ತಿದೆ. ನಮ್ಮ ಪಾಲಿಗೆ ಇದು ಅತ್ಯಂತ ಸಂತೋಷದ ಸಂಗತಿ. ಇದು ಆಗುವುದಿಲ್ಲವೇನೋ ಎಂಬ ಆತಂಕವಿತ್ತು. ಆದರೆ, ಎಲ್ಲವೂ ನಿರಾತಂಕವಾಗಿ ನಡೆಯುತ್ತಿದೆ” ಎಂದು ಡಿಸಿಎಂ ಅವರ ಕೈಹಿಡಿದು ಹೇಳಿದಾಗ ಸ್ವತಃ ಅಶ್ವತ್ಥನಾರಾಯಣ ಅವರೂ ಕ್ಷಣಕಾಲ ಭಾವುಕರಾದರು. ನಿಮ್ಮೆಲ್ಲರ ಅಭಿಲಾಶೆಯಂತೆ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದು ಆ ಹಿರಿಯರಿಗೆ ಡಿಸಿಎಂ ಹೇಳಿದರು.

ನಿಧಿ ಸಮರ್ಪಣಾ ಯಾತ್ರೆಯ ವೇಳೆ ಕೆಲ ಮನೆಗಳಲ್ಲಿ ರಾಮಪೂಜೆಯನ್ನು ಏರ್ಪಡಿಸಲಾಗಿತ್ತು. ಡಿಸಿಎಂ ಅವರು ಪೂಜೆಯಲ್ಲಿ ಭಾಗಿಯಾದರು. ಪಕ್ಷದ ಜಿಲ್ಲಾ ಮುಖಂಡರು, ಹಿರಿಯರು ಈ ಸಂದರ್ಭದಲ್ಲಿ ಡಿಸಿಎಂ ಜತೆಯಲ್ಲಿದ್ದರು.

LEAVE A REPLY

Please enter your comment!
Please enter your name here