‘ಸರಳ ಕಾವೇರಿ’ ಯೋಜನೆ ವಿಸ್ತರಣೆ: ಇಎಂಐ ಮೂಲಕ ನೀರಿನ ಸಂಪರ್ಕ – ನಾಗರಿಕರಿಗೆ ಮತ್ತೊಂದು ಸುವರ್ಣಾವಕಾಶ
ಬೆಂಗಳೂರು, ಏಪ್ರಿಲ್ 29: ಬೆಂಗಳೂರಿನ ನಾಗರಿಕರಿಗೆ ಆರ್ಥಿಕ ಹೊರೆ ಕಡಿಮೆ ಮಾಡಿ ಶುದ್ಧ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ‘ಸರಳ ಕಾವೇರಿ’ ಯೋಜನೆಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ “ಪ್ರತಿ ಮನೆಗೂ ಶುದ್ಧ ನೀರು” ಎಂಬ ಸಂಕಲ್ಪದ ಭಾಗವಾಗಿ ಈ ಯೋಜನೆ ಮುಂದುವರಿಸಲಾಗಿದ್ದು, ನಾಗರಿಕರಿಗೆ ಸುಲಭ ಕಂತು (EMI) ವ್ಯವಸ್ಥೆಯ ಮೂಲಕ ನೀರಿನ ಸಂಪರ್ಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಮೇ 2025ರಲ್ಲಿ ಪ್ರಾರಂಭವಾದ ಈ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆ, ಬಡ ಮತ್ತು ಮಧ್ಯಮ ವರ್ಗದವರು, ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಸಂಘಗಳಿಗೆ ಇದು ಹೆಚ್ಚಿನ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರಳ ಕಾವೇರಿ ಯೋಜನೆಯ ಮುಖ್ಯಾಂಶಗಳು:
- ಸಣ್ಣ ನಿವೇಶನದಾರರಿಗೆ ಅನುಕೂಲ: 600 ಚದರ ಅಡಿ ವರೆಗೆ ಇರುವ ಮನೆಗಳ ಮಾಲೀಕರು ಕೇವಲ ₹1,000 ಪಾವತಿಸಿ ಕಾವೇರಿ ನೀರಿನ ಸಂಪರ್ಕ ಪಡೆಯಬಹುದು. ಉಳಿದ ಮೊತ್ತವನ್ನು ಇಎಂಐ ಮೂಲಕ ಪಾವತಿಸಲು ಅವಕಾಶ ಇದೆ.
- ಅಪಾರ್ಟ್ಮೆಂಟ್ಗಳಿಗೆ ಇಎಂಐ ಸೌಲಭ್ಯ: ಡಿಮ್ಯಾಂಡ್ ನೋಟಿಸ್ (DN) ಮೊತ್ತವನ್ನು ಒಮ್ಮೆಗೆ ಪಾವತಿಸಲು ಸಾಧ್ಯವಾಗದ ಅಪಾರ್ಟ್ಮೆಂಟ್ ಅಸೋಸಿಯೇಷನ್ಗಳು ಮೊದಲು 20% ಪಾವತಿಸಿ, ಉಳಿದ 80% ಮೊತ್ತವನ್ನು 12 ತಿಂಗಳ ಅವಧಿಯಲ್ಲಿ ಕಂತುಗಳಲ್ಲಿ ಪಾವತಿಸಬಹುದು.
- ವಾಣಿಜ್ಯ ಬಳಕೆದಾರರಿಗೂ ವಿಸ್ತರಣೆ: ಮನೆಗಳಿಗೆ ಮಾತ್ರವಲ್ಲದೆ, ವಾಣಿಜ್ಯ ಕಟ್ಟಡಗಳು ಮತ್ತು ನಾನ್-ಡೊಮೆಸ್ಟಿಕ್ ಗ್ರಾಹಕರಿಗೂ ಈ ಯೋಜನೆ ಅನ್ವಯವಾಗಲಿದೆ.
- ಜನಾರೋಗ್ಯದ ಮೇಲಿನ ಒತ್ತು: ಪ್ರತಿಯೊಬ್ಬರಿಗೂ ಶುದ್ಧ ಮತ್ತು ಸುರಕ್ಷಿತ ಕಾವೇರಿ ನೀರು ತಲುಪಿಸುವ ಮೂಲಕ ನಗರದಲ್ಲಿ ಆರೋಗ್ಯ ಮಟ್ಟವನ್ನು ಸುಧಾರಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಕುರಿತು ಮಾತನಾಡಿದ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್, “ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಜಲಮಂಡಳಿ ಸದಾ ಜನಪರ ಯೋಜನೆಗಳಿಗೆ ಆದ್ಯತೆ ನೀಡುತ್ತಿದೆ. ಸಂಚಾರಿ ಕಾವೇರಿ, ಮಳೆನೀರು ಕೊಯ್ಲು ಹಾಗೂ SCADA ತಂತ್ರಜ್ಞಾನಗಳಂತೆ ‘ಸರಳ ಕಾವೇರಿ’ ಕೂಡ ಗ್ರಾಹಕ ಸ್ನೇಹಿ ಯೋಜನೆಯಾಗಿದೆ. ಇಎಂಐ ಸೌಲಭ್ಯದಿಂದ ಅಪಾರ್ಟ್ಮೆಂಟ್ ಹಾಗೂ ವಾಣಿಜ್ಯ ಬಳಕೆದಾರರಿಗೆ ಹೆಚ್ಚಿನ ಸಹಾಯವಾಗಲಿದೆ,” ಎಂದು ತಿಳಿಸಿದ್ದಾರೆ.
ನಗರದಲ್ಲಿ ಸಮರ್ಪಕ ನೀರು ಸರಬರಾಜು ಮಾಡಲು ಜಲಮಂಡಳಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದು, ಈ ಯೋಜನೆಯ ವಿಸ್ತರಣೆಯಿಂದ ನಾಗರಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ.
