ಕಸವನಹಳ್ಳಿಯಲ್ಲಿ ಹಸಿ ಕಸದಿಂದ ಗೊಬ್ಬರ: ನಿವಾಸಿಗಳ ಸಮುದಾಯ ಕಾಂಪೋಸ್ಟಿಂಗ್‌ಗೆ ಕೆ ಎನ್ ರಮೇಶ್ ಮೆಚ್ಚುಗೆ
ಬೆಂಗಳೂರು: ‘ವಾರ್ಡ್ ಒನ್’ ಅಭಿಯಾನದ ಅಂಗವಾಗಿ ಜೆ.ಪಿ. ನಗರದಲ್ಲಿ ಶನಿವಾರ ಪರಿಶೀಲನೆ ನಡೆಸಿದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಪಾದಚಾರಿ ಮಾರ್ಗದ ಮೇಲಿರುವ ಅನಧಿಕೃತ ಒಎಫ್‌ಸಿ ಕೇಬಲ್‌ಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಪಾಯ ತಂದೊಡ್ಡುವ ಟ್ರಾನ್ಸ್‌ಫಾರ್ಮರ್‌ಗಳ ಕೆಳಗಿನ ವಿದ್ಯುತ್ ಕೇಬಲ್‌ಗಳನ್ನು ತಕ್ಷಣ ತೆರವು ಮಾಡುವಂತೆ ಬೆಸ್ಕಾಂ ಹಾಗೂ ಪಾಲಿಕೆ ಎಂಜಿನಿಯರ್‌ಗಳಿಗೆ ಸೂಚಿಸಿದರು.
ಜೆ.ಪಿ. ನಗರ 4ನೇ ಕ್ರಾಸ್, ವೇಗಾಸಿಟಿ ಮಾಲ್‌ನಿಂದ ಜಯದೇವ ಆಸ್ಪತ್ರೆ ಕಡೆಗೆ ಸಂಪರ್ಕಿಸುವ ರಸ್ತೆ ಹಾಗೂ ಜೆ.ಪಿ. ನಗರದ ಮಿನಿ ಫಾರೆಸ್ಟ್ ಸುತ್ತಮುತ್ತಲಿನ ಪ್ರದೇಶಗಳಿಗೆ ಆಯುಕ್ತರು ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಕಸದ ಬ್ಲ್ಯಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಿ ಆ ಜಾಗವನ್ನು ಸದಾ ಸ್ವಚ್ಛವಾಗಿಡಬೇಕು; ರಾತ್ರಿ ವೇಳೆ ಕಸ ಸುರಿಯದಂತೆ ತೀವ್ರ ನಿಗಾ ವಹಿಸಬೇಕು. ಸಂಗ್ರಹಿಸಿದ ಕಸವನ್ನು ಅದೇ ದಿನ ಟ್ರ್ಯಾಕ್ಟರ್‌ಗಳ ಮೂಲಕ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ತೆರೆದಿರುವ ದೊಡ್ಡ ಗಾತ್ರದ ಕೇಬಲ್‌ಗಳನ್ನು ಸುರಕ್ಷಿತವಾಗಿ ನೆಲದಾಳದಲ್ಲಿ ಅಳವಡಿಸಿ, ಹಳೆಯ ಹಾಗೂ ಬಳಕೆಯಾಗದ ಕೇಬಲ್‌ಗಳನ್ನು ತೆರವುಗೊಳಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಯಿತು. ಹಾಳಾದ ಪಾದಚಾರಿ ಮಾರ್ಗ ಹಾಗೂ ಒಡೆದ ಸ್ಲ್ಯಾಬ್‌ಗಳನ್ನು ತಕ್ಷಣ ದುರಸ್ತಿ ಮಾಡಬೇಕು; ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಕಟ್ಟಡ ತ್ಯಾಜ್ಯ, ಒಡೆದ ಗಾಜು ಮತ್ತಿತರ ವಸ್ತುಗಳಿಂದ ಪಾದಚಾರಿ ಮಾರ್ಗ ಮುಕ್ತವಾಗಿರಬೇಕು ಎಂದರು.
ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗದ ವ್ಯಾಪಾರ ವಲಯಗಳನ್ನು ಪರಿಶೀಲಿಸಿದ ಆಯುಕ್ತರು, ಪಾಲಿಕೆ ನೀಡಿದ ಮಾನ್ಯ ಗುರುತಿನ ಚೀಟಿ ಹೊಂದಿರುವ ನೋಂದಾಯಿತ ಬೀದಿ ಹಾಗೂ ತಳ್ಳುಗಾಡಿ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು. ವ್ಯಾಪಾರಿಗಳು ನಿಗದಿತ ಸ್ಥಳದಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ವ್ಯಾಪಾರ ನಡೆಸಿ, ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು.
ಅಂಜನಾಪುರ, ಹರಿನಗರ, ಕೋಣನಕುಂಟೆ, ಅಬ್ದುಲ್ ಕಲಾಂ ನಗರ, ಜಕ್ಕಸಂದ್ರ, ಪದ್ಮನಾಭನಗರ, ಬೊಮ್ಮನಹಳ್ಳಿ, ಹೊಸಪಾಳ್ಯ ಹಾಗೂ ಎಚ್‌ಎಸ್‌ಆರ್ ಲೇಔಟ್ ವಾರ್ಡ್‌ಗಳಲ್ಲಿ ‘ವಾರ್ಡ್ ಒನ್’ ಅಭಿಯಾನ ಕೈಗೊಳ್ಳಲಾಗಿದೆ. ಪರಿಶೀಲನೆ ವೇಳೆ ಕಾರ್ಯಪಾಲಕ ಅಭಿಯಂತರ ಹರಿಪ್ರಸಾದ್ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.
