ಐಐಎಸ್ಸಿ ಬೆಂಗಳೂರಿನಲ್ಲಿ ಸೇವಾ ಫಸ್ಟ್ ಇನ್ನೋವೇಶನ್ ಚಾಲೆಂಜ್ ನೋಂದಣಿ ಪೋರ್ಟಲ್ಗೆ ಪ್ರಲ್ಹಾದ್ ಜೋಶಿ ಚಾಲನೆ
ಬೆಂಗಳೂರು: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಸೇವಾ ಫಸ್ಟ್ ಇನ್ನೋವೇಶನ್ ಚಾಲೆಂಜ್ನ ವೆಬ್ಸೈಟ್ ಮತ್ತು ನೋಂದಣಿ ಪೋರ್ಟಲ್ಗೆ ಚಾಲನೆ ನೀಡಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ಜೋಶಿ, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಯುವ ನವೋದ್ಯಮಿಗಳು, ಅಧ್ಯಾಪಕರು, ಸ್ಟಾರ್ಟ್ಅಪ್ಗಳು ಮತ್ತು ಉದ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾಗಿ ಹೇಳಿದ್ದಾರೆ. ನೈಜ ಜೀವನದ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಾವೀನ್ಯತೆಗೆ ಒತ್ತು ನೀಡಬೇಕೆಂದು ಅವರು ಹೇಳಿದರು.
ನಾವೀನ್ಯತಾ ವ್ಯವಸ್ಥೆಯನ್ನು ಬಲಪಡಿಸುವ ಸರ್ಕಾರದ ಪ್ರಯತ್ನಗಳ ಕುರಿತು ಪ್ರಸ್ತಾಪಿಸಿದ ಜೋಶಿ, 10,000ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್ಗಳು, 17,300ಕ್ಕೂ ಹೆಚ್ಚು ಇನ್ಸ್ಟಿಟ್ಯೂಷನ್ಸ್ ಇನ್ನೋವೇಶನ್ ಕೌನ್ಸಿಲ್ಗಳು ಮತ್ತು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ನಂತಹ ಉಪಕ್ರಮಗಳನ್ನು ಉಲ್ಲೇಖಿಸಿದರು. ಯುವ ನವೋದ್ಯಮಿಗಳಿಗೆ ಮಾರ್ಗದರ್ಶನ ನೀಡಿ, ಭರವಸೆಯ ಮಾದರಿಗಳನ್ನು ನೈಜ ಬಳಕೆಯ ಪರಿಹಾರಗಳಾಗಿ ರೂಪಿಸಲು ಸ್ಟಾರ್ಟ್ಅಪ್ಗಳು ಮತ್ತು ಉದ್ಯಮದ ಪಾಲುದಾರರು ನೆರವಾಗಬೇಕೆಂದು ಅವರು ಕರೆ ನೀಡಿದರು.
