ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು. ಇದು ಕಡತ ಚಿತ್ರ, ಇಂದಿನದಲ್ಲ. ಚಿತ್ರ: ಕಡತ
ಬೆಂಗಳೂರು: ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಹೆಸರು ಬದಲಿಸಲು ಕರ್ನಾಟಕ ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಒಪ್ಪಿಗೆ ನೀಡಿದೆ. ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವಾಲಯ ನವೆಂಬರ್ 11ರ ಪತ್ರದಲ್ಲಿ ತಿಳಿಸಿದೆ.
ಐಐಎಂಬಿ ನಿಲ್ದಾಣಕ್ಕೆ ಬಿಳೇಕಹಳ್ಳಿ – ಐಐಎಂಬಿ, ಜೆಪಿ ನಗರ 4ನೇ ಹಂತ ನಿಲ್ದಾಣಕ್ಕೆ ಎನ್‌ಎಸ್ ಪಾಳ್ಯ – ಜೆಪಿ ನಗರ 4ನೇ ಹಂತ ಹಾಗೂ ತಾವರೆಕೆರೆ ನಿಲ್ದಾಣಕ್ಕೆ ಎಸ್‌ಜಿ ಪಾಳ್ಯ (ಸುದ್ದಗುಂಟೆ ಪಾಳ್ಯ) ಎಂದು ಹೆಸರಿಡಲಾಗುತ್ತದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋ ಎರಡನೇ ಹಂತದ ನಾಲ್ಕನೇ ಕಾರಿಡಾರ್‌ನ ಮೂರು ನಿಲ್ದಾಣಗಳ ಹೆಸರು ಬದಲಿಸಲು ಕರ್ನಾಟಕ ನಗರಾಭಿವೃದ್ಧಿ ಇಲಾಖೆ ನವೆಂಬರ್ 10ರಂದು ಕೋರಿತ್ತು. ಆ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕಿರುವುದನ್ನು ಸಚಿವಾಲಯದ ಪತ್ರ ದೃಢಪಡಿಸಿದೆ. ನಿಲ್ದಾಣಗಳ ಹೆಸರುಗಳನ್ನು ಸೂರ್ಯ ತಿಳಿಸಿದ್ದಾರೆ.
ವಿಶೇಷವಾಗಿ ಐಐಎಂಬಿ ನಿಲ್ದಾಣದ ಹೆಸರು ಬದಲಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮದ ಮೂಲಕ ಸಚಿವಾಲಯಕ್ಕೆ ಔಪಚಾರಿಕ ಮನವಿ ಸಲ್ಲಿಸಿದ್ದಾಗಿ ಸೂರ್ಯ ತಿಳಿಸಿದ್ದಾರೆ. ಇದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಿವಾಸಿಗಳ ಬಹುಕಾಲದ ಬೇಡಿಕೆಯಾಗಿತ್ತು ಎಂದಿದ್ದಾರೆ.
ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಅವರು ನವೆಂಬರ್ 9ರಂದು ಮೂರು ನಿಲ್ದಾಣಗಳ ಹೆಸರು ಬದಲಿಸಲು ಸಮಿತಿ ಸಲ್ಲಿಸಿದ್ದ ಮನವಿಯ ವಿವರ ನೀಡಿದ್ದರು.
