ಖಾಸಗಿ ನೀರಿನ ಟ್ಯಾಂಕರ್ ನೆರವಿನಿಂದ ಭಾರೀ ಅಗ್ನಿ ಅವಘಡ ತಪ್ಪಿಸಿದ ವಿಲ್ಸನ್ ಗಾರ್ಡನ್ ಪೊಲೀಸರು; ₹1 ಕೋಟಿ ಮೌಲ್ಯದ ಆಸ್ತಿ ರಕ್ಷಣೆ
ಬೆಂಗಳೂರು, ಜೂನ್ 8: ಖಾಸಗಿ ನೀರಿನ ಟ್ಯಾಂಕರ್ ಅನ್ನು ತುರ್ತುವಾಗಿ ಸ್ಥಳಕ್ಕೆ ಕರೆಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ ವಿಲ್ಸನ್ ಗಾರ್ಡನ್ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಸುಧಾಮನಗರದ ಸಾರಿಗೆ ಗೋದಾಮೊಂದರಲ್ಲಿ ಸಂಭವಿಸಿದ್ದ ಭಾರೀ ಅಗ್ನಿ ಅವಘಡ ತಪ್ಪಿದ್ದು, ಸುಮಾರು ₹1 ಕೋಟಿ ಮೌಲ್ಯದ ಆಸ್ತಿ ರಕ್ಷಿಸಲಾಗಿದೆ.
ಜೂನ್ 5ರಂದು ಸಂಜೆ ಸುಮಾರು 4.30 ಗಂಟೆಗೆ ಸುಧಾಮನಗರದಲ್ಲಿರುವ ಎ-1 ಎಕ್ಸ್ಪ್ರೆಸ್ ಟ್ರಾನ್ಸ್ಪೋರ್ಟ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಸಾರ್ವಜನಿಕರೊಬ್ಬರು ಗಮನಿಸಿ ತಕ್ಷಣ ನಮ್ಮ 112 ತುರ್ತು ಸಹಾಯವಾಣಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ನಮ್ಮ 112 ಸಿಬ್ಬಂದಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಸೇರಿದ ಹೊಯ್ಸಳ-20 ಮತ್ತು ಹೊಯ್ಸಳ-21 ಸಿಬ್ಬಂದಿಗೆ ಮಾಹಿತಿ ರವಾನಿಸಿದರು. ಎಎಸ್ಐಗಳಾದ ಶ್ರೀಕಂಠಯ್ಯ ಹಾಗೂ ಅಲ್ತಾಫ್ ಹುಸೇನ್ ದಖಾನಿ, ಪೊಲೀಸ್ ಕಾನ್ಸ್ಟೇಬಲ್ ನಾಗಪ್ಪ ಅವರೊಂದಿಗೆ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಗೋದಾಮಿನ ಒಳಭಾಗದಲ್ಲಿ ಬೆಂಕಿ ವೇಗವಾಗಿ ಹರಡುತ್ತಿರುವುದು ಕಂಡುಬಂದಿತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಹೊಯ್ಸಳ ಸಿಬ್ಬಂದಿ ಅಗ್ನಿಶಾಮಕ ದಳ ಆಗಮಿಸುವ ಮುನ್ನವೇ ಖಾಸಗಿ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದರು. ಈ ತ್ವರಿತ ಕ್ರಮದಿಂದ ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲು ಸಾಧ್ಯವಾಯಿತು.
ಅಗ್ನಿಗೆ ಆಹುತಿಯಾಗುವ ಸಾಧ್ಯತೆಯಿದ್ದ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ಸಹ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಬಳಿಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಪೊಲೀಸ್ ಇಲಾಖೆಯ ಅಂದಾಜಿನ ಪ್ರಕಾರ ಸುಮಾರು ₹1 ಕೋಟಿ ಮೌಲ್ಯದ ಸರಕುಗಳು ಬೆಂಕಿಯಿಂದ ರಕ್ಷಿಸಲ್ಪಟ್ಟಿವೆ.
ವಿಲ್ಸನ್ ಗಾರ್ಡನ್ ಪೊಲೀಸರ ಕ್ಷಿಪ್ರ ಸ್ಪಂದನೆ, ಹೊಯ್ಸಳ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಅಗ್ನಿಶಾಮಕ ದಳದ ಸಮನ್ವಯದಿಂದ ಸಂಭವಿಸಬಹುದಾಗಿದ್ದ ಭಾರೀ ಆಸ್ತಿ ನಷ್ಟ ತಪ್ಪಿದ್ದು, ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ತುರ್ತು ಪ್ರತಿಕ್ರಿಯಾ ವ್ಯವಸ್ಥೆಯ ಪರಿಣಾಮಕಾರಿತ್ವ ಮತ್ತೊಮ್ಮೆ ಸಾಬೀತಾಗಿದೆ.
