ಕೈದಿಗಳ ಉತ್ಪನ್ನಗಳಿಗೆ ಆಕರ್ಷಕ ಪ್ಯಾಕೇಜಿಂಗ್ ಮತ್ತು ವಿಶಾಲ ಮಾರುಕಟ್ಟೆ: ಪ್ರಿಯಾಂಕ್ ಖರ್ಗೆ ಸೂಚನೆ
ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳು ತಯಾರಿಸುವ ಉತ್ಪನ್ನಗಳ ಉತ್ಪಾದನೆ ವಿಸ್ತರಿಸಿ, ಆಕರ್ಷಕ ಪ್ಯಾಕೇಜಿಂಗ್ ಮತ್ತು ಸ್ಥಿರ ಮಾರುಕಟ್ಟೆ ವ್ಯವಸ್ಥೆ ರೂಪಿಸುವಂತೆ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿಯ ಐದನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಉತ್ಪನ್ನಗಳ ಮಾರಾಟ ಹೆಚ್ಚಿಸಿ ಮಂಡಳಿಯ ಆದಾಯ ವೃದ್ಧಿಸುವ ಹಾಗೂ ಅದನ್ನು ಸ್ವಾವಲಂಬಿಯಾಗಿಸುವ ಯೋಜನೆ ರೂಪಿಸಲು ನಿರ್ದೇಶಿಸಿದರು.
ಕಾರಾಗೃಹಗಳಲ್ಲಿ ಕಲಾ ಚಿಕಿತ್ಸೆ, ಕೈದಿಗಳ ಮಾನಸಿಕ ಪರಿವರ್ತನೆ ಮತ್ತು ಪುನರ್ವಸತಿಗಾಗಿ ಸ್ವಯಂಸೇವಾ ಸಂಸ್ಥೆಗಳ ಸಹಕಾರ, ವ್ಯಸನಮುಕ್ತ ಕೇಂದ್ರಗಳ ಸ್ಥಾಪನೆ ಮತ್ತು ಮಾರಾಟ ವ್ಯವಸ್ಥೆ ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕಾರಾಗೃಹ ಮೂಲಸೌಕರ್ಯ, ಆಧುನಿಕ ವೃತ್ತಿಪರ ತರಬೇತಿ ಮತ್ತು ವಿವಿಧ ಕಾರಾಗೃಹಗಳಲ್ಲಿ ಉತ್ಪಾದನೆ ಹಾಗೂ ಮಾರಾಟ ಚಟುವಟಿಕೆ ವಿಸ್ತರಣೆಯನ್ನೂ ಪರಿಶೀಲಿಸಲಾಯಿತು.
ಆರೋಗ್ಯ, ಪಶುಸಂಗೋಪನೆ, ಕೃಷಿ, ತೋಟಗಾರಿಕೆ ಮತ್ತು ಕೈಗಾರಿಕೆ ಸೇರಿದಂತೆ ಹಲವು ಇಲಾಖೆಗಳ ಮುಖ್ಯಸ್ಥರು ಸಭೆಗೆ ಗೈರಾಗಿ ಕಿರಿಯ ಅಧಿಕಾರಿಗಳನ್ನು ಕಳುಹಿಸಿದ್ದಕ್ಕೆ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖಾ ಮುಖ್ಯಸ್ಥರು ಸಭೆಯ ಮಹತ್ವ ಅರಿತು ಖುದ್ದಾಗಿ ಭಾಗವಹಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
