ಹಾಸನಾಂಬ ಮಹೋತ್ಸವಕ್ಕೆ ಅಕ್ಟೋಬರ್ 29ರಿಂದ ವಿಶೇಷ ರೈಲುಗಳು
ಬೆಂಗಳೂರು: ಹಾಸನಾಂಬ ಮಹೋತ್ಸವ 2026ಕ್ಕೆ ತೆರಳುವ ಭಕ್ತರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಹಾಸನಕ್ಕೆ ವಿಶೇಷ ರೈಲುಗಳನ್ನು ಓಡಿಸಲಿದೆ.
ಕೆಎಸ್ಆರ್ ಬೆಂಗಳೂರು–ಹಾಸನ ದೈನಂದಿನ ಎಕ್ಸ್ಪ್ರೆಸ್ ವಿಶೇಷ ರೈಲು ಎರಡೂ ದಿಕ್ಕಿನಲ್ಲಿ ತಲಾ 14 ಟ್ರಿಪ್ಗಳನ್ನು ನಡೆಸಲಿದೆ. ರೈಲು ಸಂಖ್ಯೆ 06573 ಕೆಎಸ್ಆರ್ ಬೆಂಗಳೂರಿನಿಂದ ಬೆಳಿಗ್ಗೆ 7.30ಕ್ಕೆ ಹೊರಟು ಯಶವಂತಪುರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಿ.ಜಿ. ನಗರ, ಶ್ರವಣಬೆಳಗೊಳ ಮತ್ತು ಚನ್ನರಾಯಪಟ್ಟಣ ಮಾರ್ಗವಾಗಿ ಬೆಳಿಗ್ಗೆ 11.30ಕ್ಕೆ ಹಾಸನ ತಲುಪಲಿದೆ.
ರೈಲು ಸಂಖ್ಯೆ 06574 ಹಾಸನದಿಂದ ಮಧ್ಯಾಹ್ನ 3.15ಕ್ಕೆ ಹೊರಟು ಸಂಜೆ 7ಕ್ಕೆ ಕೆಎಸ್ಆರ್ ಬೆಂಗಳೂರು ತಲುಪಲಿದೆ.
ಈ ರೈಲಿನಲ್ಲಿ ಒಂದು ಎಸಿ ಪ್ರಥಮ ದರ್ಜೆ, ಒಂದು ಎಸಿ ಎರಡು ಹಂತದ, ನಾಲ್ಕು ಎಸಿ ಮೂರು ಹಂತದ, ಒಂಬತ್ತು ಸ್ಲೀಪರ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ ದಿವ್ಯಾಂಗ ಸ್ನೇಹಿ ಲಗೇಜ್-ಕಮ್-ಬ್ರೇಕ್ ವ್ಯಾನ್ ಇರಲಿದೆ.
ಅರಸೀಕೆರೆ–ಹಾಸನ ನಡುವೆ ಕಾಯ್ದಿರಿಸದ ಮೆಮು ವಿಶೇಷ ರೈಲುಗಳನ್ನೂ ಓಡಿಸಲಾಗುತ್ತದೆ. ರೈಲು ಸಂಖ್ಯೆ 06291 ಮತ್ತು 06292 ಭಾನುವಾರಗಳನ್ನು ಹೊರತುಪಡಿಸಿ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಎರಡೂ ದಿಕ್ಕಿನಲ್ಲಿ ತಲಾ 12 ಟ್ರಿಪ್ಗಳನ್ನು ನಡೆಸಲಿದೆ.
