ಬೆಂಗಳೂರು:
ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಮೇಲೆ ಸುಳ್ಳು ಕೇಸು ಹಾಕಿಸಿ, ದೌರ್ಜನ್ಯ ನಡೆಸುತ್ತಿದೆ. ಇದನ್ನು ಖಂಡಿಸಿ ಇದೇ 13ರಂದು ‘ಶಿವಮೊಗ್ಗ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ಕೊರೋನಾ ಹಾಗೂ ನಂತರದ ಸಮಯದಲ್ಲಿ ಬಿಜೆಪಿ ನಾಯಕರು ಶಾಂತಿಭಂಗದ ಹೇಳಿಕೆ ಕೊಟ್ಟಿದ್ದರೂ ಈ ಸರಕಾರ ಯಾರ ಮೇಲೂ ಕೇಸು ದಾಖಲಿಸಲಿಲ್ಲ. ಆಗಲೂ ಅಧಿಕಾರ ದುರುಪಯೋಗ ಮಾಡಿಕೊಂಡು ಸರ್ಕಾರದ ಪದಾರ್ಥವನ್ನು ತಮ್ಮ ಪದಾರ್ಥ ಎಂಬಂತೆ ಹಂಚಿದ್ದನ್ನು ನಾವು ಬಯಲು ಮಾಡಿದರೂ ಕ್ರಮ ಕೈಗೊಳ್ಳಲಿಲ್ಲ. ಆದರೆ ನಮ್ಮ ಶಾಸಕರು, ಮುಖಂಡರು, ಕಾರ್ಯಕರ್ತರ ಮೇಲೆ ನೂರಾರು ಕೇಸ್ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.
ಇದರ ವಿರುದ್ಧ ಪ್ರತಿಭಟನೆ ಮಾಡಲು ನಾವು ನಿರ್ಧರಿಸಿದ್ದೇವೆ. ಈ ಬಗ್ಗೆ ಸದನದಲ್ಲಿ ಹಾಗೂ ಇತರೆ ಕಡೆಗಳಲ್ಲಿ ಚರ್ಚೆ ಮಾಡಿದ್ದೇವೆ. ಈ ಮಧ್ಯೆ ನಮ್ಮ ಪಕ್ಷದ ಶಾಸಕ ಸಂಗಮೇಶ್, ಅವರ ಕುಟುಂಬ ಸದಸ್ಯರು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಲಾಗಿದೆ.
ಅವರನ್ನು ಬಿಜೆಪಿಗೆ ಸೆಳೆಯಲು ಬಹಳ ಒತ್ತಡ ಹೇರಿದ್ದರು. ಆದರೂ ಇವರು ಆಪರೇಷನ್ ಕಮಲಕ್ಕೆ ಬಲಿಯಾಗಲಿಲ್ಲ ಎಂಬ ಕಾರಣಕ್ಕೆ ಈ ರೀತಿ ಕಿರುಕುಳ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಬ್ಬ ಕಾಂಗ್ರೆಸ್ ಶಾಸಕ ಇದ್ದಾನೆ ಎಂದು ಪೊಲೀಸರ ಕೈಯಲ್ಲಿ ಎಫ್ಐಆರ್ ಹಾಕಿಸಿ, ತೊಂದರೆ ನೀಡುತ್ತಿದ್ದಾರೆ. ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಲು ಅವಕಾಶ ಕೊಡಿ ಎಂದು ಕೇಳಿದರೆ ಅವರಿಗೆ ಅವಕಾಶ ನೀಡಲಿಲ್ಲ. ಆಗ ನೋವಿನಿಂದ ನಮ್ಮ ಶಾಸಕ ತಮ್ಮ ಶರ್ಟ್ ಬಿಚ್ಚಿ ಮೈಮೇಲಾಗಿರುವ ಗಾಯ ತೋರಿಸಲು ಮುಂದಾದಾಗ, ಅದನ್ನು ಅಸಭ್ಯ ವರ್ತನೆ ಎಂದು ಹೇಳಿ ಅವರನ್ನು ಒಂದು ವಾರಕ್ಕೂ ಹೆಚ್ಚು ಕಾಲ ವಿಧಾನಸಭೆ ಕಲಾಪದಿಂದ ಅಮಾನತು ಮಾಡಲಾಗಿದೆ. ಆ ಮೂಲಕ ಅವರ ಹಕ್ಕಿಗೆ ಧಕ್ಕೆ ತರಲಾಗಿದೆ. ಈ ಬಗ್ಗೆ ನಾವು ಪ್ರತಿಭಟನೆಯನ್ನೂ ಮಾಡಿದ್ದೇವೆ.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ 13ರಂದು ವಿರೋಧ ಪಕ್ಷ ನಾಯಕರ ಸಮ್ಮುಖದಲ್ಲಿ ಎಲ್ಲ ನಾಯಕರು, ಶಾಸಕರು, ಸಂಸದರು, ಕಾರ್ಯಕರ್ತರು ಶಿವಮೊಗ್ಗ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾವು ಶಿವಮೊಗ್ಗಕ್ಕೆ ತೆರಳಿ ನಮ್ಮ ಪ್ರತಿಭಟನೆ ನಡೆಸುತ್ತೇವೆ.
ಎಲ್ಲರ ಸಮ್ಮತಿಯೊಂದಿಗೆ ಅಶೋಕ್ ಮನಗೂಳಿ ಪಕ್ಷ ಸೇರ್ಪಡೆ
ಮಾಜಿ ಮಂತ್ರಿಗಳಾದ ಮನಗೂಳಿ ಅವರು ದೈವಾಧೀನರಾಗುವ ಮುಂಚಿತವಾಗಿ ನನ್ನನ್ನು, ನಮ್ಮ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ, ಮುಂದಿನ ದಿನಗಳಲ್ಲಿ ನನ್ನ ಮಗನನ್ನು ನಿಮ್ಮ ತೆಕ್ಕೆಗೆ ನೀಡುತ್ತಿದ್ದೇನೆ ಎಂದಿದ್ದರು. ಅವನನ್ನು ಬೆಳೆಸುವುದು, ಬಿಡುವುದು ನಿಮಗೆ ಬಿಟ್ಟ ವಿಚಾರ ಎಂದು ನೋವಿನಿಂದ ಹೇಳಿದ್ದರು.
ಅಶೋಕ್ ಅವರು ಕೂಡ ನಮ್ಮ ಬಳಿ ಬಂದು ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರಲು ಅರ್ಜಿ ನೀಡಿದ್ದರು. ಈ ಅರ್ಜಿಯನ್ನು ನಮ್ಮ ಸಮಿತಿಯು ಪರಿಶೀಲಿಸಿ ಒಪ್ಪಿಗೆ ಸೂಚಿಸಿತ್ತು. ಪಕ್ಷದ ನಾಯಕರು, ಕಾರ್ಯಕರ್ತರ ಜತೆ ಚರ್ಚೆ ಮಾಡಿ ಅವರನ್ನು ಸೇರಿಸಿಕೊಂಡಿದ್ದೇವೆ.
ಯಾವಾಗ ಬೇಕಾದರೂ ಉಪಚುನಾವಣೆ ಎದುರಾಗಬಹುದು. ಈ ನಿಟ್ಟಿನಲ್ಲಿ ಇವರ ಸೇರ್ಪಡೆ ಪಕ್ಷಕ್ಕೆ ಅನುಕೂಲವಾಗಲಿದೆ. ಆ ಜಿಲ್ಲೆಗೆ ಸಂಬಂಧಿಸಿದ ಎಲ್ಲ ನಾಯಕರ ಜತೆ ಚರ್ಚಿಸಿ, ಸಾಮೂಹಿಕವಾಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ.’
ಅಶೋಕ್ ಮನಗೂಳಿ ಅವರು ಮಾತು…
ಇಂದು ಇಷ್ಟು ದೊಡ್ಡ ನಾಯಕರು, ಸಿಂಧಗಿ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತೋಷ ತಂದಿದೆ. ಸಿದ್ದರಾಮಯ್ಯನವರು ಹೇಳಿದಂತೆ ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸವಿದೆ. ಆ ಇತಿಹಾಸ ನೋಡುವ ಮೂಲಕ ಪಕ್ಷದ ಸಿದ್ಧಾಂತ, ಕಾರ್ಯವೈಖರಿ, ವಿಚಾರ ಗಮನದಲ್ಲಿಟ್ಟುಕೊಂಡು, ಪಕ್ಷವನ್ನು ಸಿಂಧಗಿ ಕ್ಷೇತ್ರದಲ್ಲಿ ಬಲಿಷ್ಠವಾಗಿ ಕಟ್ಟುವ ಇಚ್ಛಾಶಕ್ತಿಯೊಂದಿಗೆ ಪಕ್ಷ ಸೇರುತ್ತಿದ್ದೇನೆ.
ಸಿಂಧಗಿ ಶಾಸಕರು ಹಾಗೂ ನನ್ನ ತಂದೆ ಮನಗೂಳಿ ಅವರ ಅಕಾಲಿಕ ನಿಧನದಿಂದ ಈಗ ಉಪಚುನಾವಣೆ ಎದುರಾಗುತ್ತಿದೆ. ನಾನು ಬೇಷರತ್ತಿನಿಂದ ಪಕ್ಷ ಸೇರುತ್ತಿದ್ದೇನೆ. ವರಿಷ್ಠರು ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಕೇವಲ ವಿಧಾನಸಭೆ ಉಪಚುನಾವಣೆ ಮಾತ್ರವಲ್ಲ, ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲೂ ಪಕ್ಷಕ್ಕಾಗಿ ದುಡಿಯುತ್ತೇನೆ.
ಜಿಲ್ಲೆ ಹಾಗೂ ತಾಲೂಕಿನ ಎಲ್ಲ ನಾಯಕರ ಸಲಹೆ ಸೂಚನೆ ಮೇರೆಗೆ ಕಾರ್ಯಕರ್ತನಾಗಿ ಪಕ್ಷ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ತಂದೆ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತೇನೆ. ನಮ್ಮನ್ನು ಆತ್ಮೀಯವಾಗಿ ಪಕ್ಷಕ್ಕೆ ಸೇರಿಸಿಕೊಂಡ ಎಲ್ಲರಿಗೂ ಧನ್ಯವಾದಗಳು.