ಬೆಂಗಳೂರಿನ ಕೇಂದ್ರ ನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ದಾಖಲೆಯೊಂದನ್ನು ಹಸ್ತಾಂತರಿಸುತ್ತಿರುವ ಕ್ಷಣ; ಪಾಲಿಕೆ ಹಂಚಿಕೊಂಡ ಚಿತ್ರ. ಚಿತ್ರ: ಬೆಂಗಳೂರು ಕೇಂದ್ರ ನಗರ ಪಾಲಿಕೆ
ಬೆಂಗಳೂರು: ಆಸ್ತಿ ತೆರಿಗೆ ಬಾಕಿ ವಸೂಲಾತಿಯನ್ನು ಚುರುಕುಗೊಳಿಸಿರುವ ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ, ಯು.ಬಿ ಸಿಟಿ ಕಟ್ಟಡದ 21 ಸ್ವತ್ತುಗಳ ಆಸ್ತಿ ತೆರಿಗೆಗಾಗಿ ಒಟ್ಟು ₹2,65,52,991 ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ಗಳನ್ನು (ಡಿ.ಡಿ.) ಬುಧವಾರ ಸಲ್ಲಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ ನೇಮಿಸಿರುವ M/s United Breweries (Holdings) Limited (in Liquidation) ಸಂಸ್ಥೆಯ ಅಧಿಕೃತ ಲಿಕ್ವಿಡೇಟರ್ ಅವರು, ಶಾಂತಿನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ವ್ಯಾಪ್ತಿಗೆ ಬರುವ ವಿಠಲ್ ಮಲ್ಯ ರಸ್ತೆಯ ಯು.ಬಿ ಸಿಟಿ ಕಟ್ಟಡದ 21 ಸ್ವತ್ತುಗಳ ಆಸ್ತಿ ತೆರಿಗೆಗಾಗಿ ಈ ಡಿ.ಡಿ.ಗಳನ್ನು ಸಲ್ಲಿಸಿದ್ದಾರೆ. ಎಂ.ಜಿ. ರಸ್ತೆಯ ಪಿಯುಬಿ ಕಟ್ಟಡದಲ್ಲಿರುವ ಕಚೇರಿಯಲ್ಲಿ ಆಯುಕ್ತ ಜಗದೀಶ್ ಜಿ ಅವರಿಗೆ ಡಿ.ಡಿ.ಗಳನ್ನು ನೀಡಲಾಯಿತು ಎಂದು ಪಾಲಿಕೆ ತಿಳಿಸಿದೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳನ್ನು ಗುರುತಿಸಿ, ಬಾಕಿದಾರರಿಗೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡುವಂತೆ ಹಾಗೂ ಬಾಕಿ ತೆರಿಗೆಯನ್ನು ಆದ್ಯತೆಯ ಮೇರೆಗೆ ವಸೂಲಿ ಮಾಡುವಂತೆ ಜಗದೀಶ್ ಅವರು ಮಂಗಳವಾರ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಕಟ್ಟುನಿಟ್ಟಿನ ಆದೇಶ ನೀಡಿದ್ದರು ಎಂದು ಪಾಲಿಕೆ ತಿಳಿಸಿದೆ. ಅದರಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಸೂಲಾತಿ ಕಾರ್ಯವನ್ನು ಚುರುಕುಗೊಳಿಸಿದ್ದು, ಡಿಮ್ಯಾಂಡ್ ನೋಟಿಸ್ ಜಾರಿ ಮಾಡುವುದರ ಜೊತೆಗೆ ತೆರಿಗೆ ವಸೂಲಾತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಆಸ್ತಿ ಮಾಲೀಕರು ತಕ್ಷಣ ತಮ್ಮ ಬಾಕಿ ತೆರಿಗೆ ಪಾವತಿಸುವಂತೆ ಆಯುಕ್ತರು ವಿನಂತಿಸಿದ್ದಾರೆ. ಅಂತಹ ಸ್ವತ್ತುಗಳನ್ನು ಗುರುತಿಸಿ ಮಾಲೀಕರಿಗೆ ನಿಯಮಾನುಸಾರ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸದಿದ್ದರೆ ಅಂತಹ ಸ್ವತ್ತುಗಳ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಗದೀಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಂದಾಯ ಅಪರ ಆಯುಕ್ತ ಲಕ್ಮಮ್ಮ, ಜಂಟಿ ಆಯುಕ್ತ ಹೇಮಂತ್ ಶರಣ್, ಸಹಾಯಕ ಕಂದಾಯ ಅಧಿಕಾರಿ ರೂಪ, ಕಂದಾಯ ಪರಿವೀಕ್ಷಕರು ಸೇರಿದಂತೆ ಇತರ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಬುಧವಾರ ಪಾಲಿಕೆ ವಿಶೇಷ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ₹36,700 ದಂಡ ವಿಧಿಸಿತ್ತು.
