ದೊಡ್ಡಬಳ್ಳಾಪುರ: ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸರ್ಕಾರವೇ ಜನರ ಬಳಿ ಬಂದು ಅಹವಾಲು ಸ್ವೀಕರಿಸಿ ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ಶನಿವಾರ ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ನವೆಂಬರ್ 7ರಂದು ಹೇಳಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಆವರಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ; ಜಿಲ್ಲೆಯ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳೊಂದಿಗೆ ಇದನ್ನು ಆಯೋಜಿಸಲಾಗಿದೆ ಎಂದರು. ಸಚಿವರು, ಶಾಸಕರು ಮತ್ತು ಅಧಿಕಾರಿಗಳು ತಾಲ್ಲೂಕು ಹಾಗೂ ಹೋಬಳಿ ಮಟ್ಟಕ್ಕೆ ತೆರಳಿ ಜನರ ಅಹವಾಲು ಆಲಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದು, ಅದರಂತೆ ಜಿಲ್ಲೆಯಾದ್ಯಂತ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಅರ್ಜಿ ನೀಡಿ ಸ್ವೀಕೃತಿ ಪಡೆದುಕೊಳ್ಳಬೇಕು. ಅರ್ಜಿಗಳನ್ನು ಆನ್ಲೈನ್ನಲ್ಲಿ ದಾಖಲಿಸಲಾಗುವುದು; ಕಾನೂನು ವ್ಯಾಪ್ತಿಯ ಅರ್ಜಿಗಳನ್ನು ಹೊರತುಪಡಿಸಿ ಉಳಿದವುಗಳನ್ನು 30 ದಿನಗಳಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಸಚಿವರು ಹೇಳಿದರು.
ತೂಬಗೆರೆಯಲ್ಲಿ ಕೆಪಿಎಸ್ ಶಾಲೆ ನಿರ್ಮಾಣ ಈ ಭಾಗದ ಹಲವರ ಒತ್ತಾಯವಾಗಿದ್ದು, ಶೀಘ್ರದಲ್ಲೇ ₹2 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು. ಪ್ರತಿ ಹಳ್ಳಿಯಲ್ಲೂ ರಸ್ತೆ, ಚರಂಡಿ ಅಭಿವೃದ್ಧಿ, ನಿವೇಶನ ಮತ್ತು ಮನೆ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುವುದು ಎಂದು ಮುನಿಯಪ್ಪ ತಿಳಿಸಿದರು.
ಅನೇಕ ಸಭೆಗಳಲ್ಲಿ ಸಾರ್ವಜನಿಕರು ನೀಡುವ ಅರ್ಜಿಗಳಲ್ಲಿ ಸಹಿ, ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿ ಇರುವುದಿಲ್ಲ; ಇದರಿಂದ ಸಮಸ್ಯೆಯ ಶೀಘ್ರ ಪರಿಹಾರಕ್ಕೆ ತೊಡಕಾಗುತ್ತದೆ. ಹೀಗಾಗಿ ಅರ್ಜಿಗಳಲ್ಲಿ ಸಂಪೂರ್ಣ ಮಾಹಿತಿ ಮತ್ತು ಸಹಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್. ಅನುರಾಧ ಮನವಿ ಮಾಡಿದರು.
ಸೆಪ್ಟೆಂಬರ್ 1ರಂದು ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ತೂಬಗೆರೆ ಹೋಬಳಿಯಲ್ಲಿ ನಡೆದದ್ದು 17ನೇ ಸಭೆ. ಪೋಡಿ, ನಿವೇಶನ, ಮನೆ, ಸ್ಮಶಾನ ಹದ್ದುಬಸ್ತು, ಜಮೀನು ಮತ್ತು ರಸ್ತೆ ಕುರಿತ ಅಹವಾಲುಗಳನ್ನು ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ನಂತರ ದೊಡ್ಡ ತಿಮ್ಮನಹಳ್ಳಿ ಬಳಿ ತೂಬಗೆರೆ ಕ್ರಾಸ್ನಿಂದ ಮುಕ್ಕಡಿಘಟ್ಟ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು. ಇದಕ್ಕೂ ಮುನ್ನ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ, ರಸ್ತೆ ಅಗಲೀಕರಣ, ದಾಸೋಹ ಭವನ ಮತ್ತು ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಾಣದ ರೂಪುರೇಷೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಪಂಚಾಯತ್ ಸಿಇಒ ಡಾ. ವಾಸಂತಿ ಅಮರ್, ಹೆಚ್ಚುವರಿ ಜಿಲ್ಲಾಧಿಕಾರಿ ರಂಗನಾಥ್, ಉಪವಿಭಾಗಾಧಿಕಾರಿ ಮಂಜುನಾಥ್ ಸೇರಿದಂತೆ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

1 thought on “ತೂಬಗೆರೆ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಅಹವಾಲು ಆಲಿಸಿದ ಸಚಿವ ಮುನಿಯಪ್ಪ; ₹2 ಕೋಟಿ ವೆಚ್ಚದ ಕೆಪಿಎಸ್ ಶಾಲೆ ಕಾಮಗಾರಿ ಶೀಘ್ರ ಆರಂಭ”
Comments are closed.