ಬೆಂಗಳೂರು: ಹಲವು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಳಿಸಲಾಗಿದ್ದ ಪಿಂಚಣಿಯನ್ನು ಮರುಜಾರಿಗೊಳಿಸಲಾಗಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 52,632 ಅರ್ಜಿಗಳಿಗೆ ಮರುಮಂಜೂರಾತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್. ನವೆಂಬರ್ 7ರಂದು ತಿಳಿಸಿದರು.
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಅವರು ಮಾತನಾಡಿದರು.
ವಾರ್ಷಿಕ ಆದಾಯ ಮಿತಿಯ ಕಾರಣಕ್ಕೆ ಸ್ಥಗಿತಗೊಳಿಸಲಾಗಿದ್ದ ಆನೇಕಲ್ ತಾಲ್ಲೂಕಿನ ಸುಮಾರು 6,700 ಪಿಂಚಣಿಗಳಿಗೆ ಮರುಮಂಜೂರಾತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ತಹಶೀಲ್ದಾರ್ಗಳ ಕೆಲಸದ ಮೇಲೆ ನಿಗಾ ವಹಿಸಲಾಗುವುದು, ಮುತುವರ್ಜಿಯಿಂದ ಕೆಲಸ ಮಾಡುವಂತೆ ಈಗಾಗಲೇ ಸೂಚಿಸಲಾಗಿದೆ; ಶೀಘ್ರದಲ್ಲೇ ತಾಲ್ಲೂಕು ಕಚೇರಿಗಳಿಗೆ ಪರಿಶೀಲನಾ ಭೇಟಿ ನೀಡಲಾಗುವುದು ಎಂದರು. ಪ್ರಜಾಸೇವಾ ಆಂದೋಲನದಲ್ಲಿ ಬಂದಿರುವ ಎಲ್ಲ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಒಟ್ಟು 846 ಕೆರೆಗಳ ಪೈಕಿ ಆನೇಕಲ್ ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು. ಕೈಗಾರಿಕೆಗಳಿಗಾಗಿ ರೈತರ ಫಲವತ್ತಾದ ಭೂಮಿ ಸ್ವಾಧೀನ ಪ್ರಕ್ರಿಯೆ ಕುರಿತು ದೂರುಗಳು ಬಂದಿದ್ದು, ಸ್ವಾಧೀನ ಪ್ರಕ್ರಿಯೆ ನಿಲ್ಲಿಸುವ ಬಗ್ಗೆ ಕೈಗಾರಿಕಾ ಇಲಾಖೆ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ನೋಂದಣಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.
ಸರ್ಕಾರದ ಸೌಲಭ್ಯಗಳು ಹಾಗೂ ಆಡಳಿತವನ್ನು ನೇರವಾಗಿ ಜನರ ಮನೆಬಾಗಿಲಿಗೆ ತಲುಪಿಸುವುದು ಪ್ರಜಾಸೇವಾ ಅಭಿಯಾನದ ಉದ್ದೇಶ; ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯಿಂದ ಸುಮಾರು 150 ಜನರಿಗೆ ಇಂದಿರಾಗಾಂಧಿ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ವೇತನ, ಪಶುಪಾಲನಾ ಇಲಾಖೆಯಿಂದ 20 ರೈತರಿಗೆ ಮೇವಿನ ಬೀಜದ ಕಿಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಭಾಗ್ಯಲಕ್ಷ್ಮಿ ಯೋಜನೆಯ ಪಾಸ್ಬುಕ್ಗಳನ್ನು ವಿತರಿಸಲಾಯಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಸುಮಾರು 20 ಪೌರಕಾರ್ಮಿಕರಿಗೆ ಜಿಲ್ಲಾಧಿಕಾರಿಗಳು ಆಹಾರ ಕಿಟ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 60 ಅರ್ಜಿಗಳು ಸ್ವೀಕೃತವಾಗಿದ್ದು, ಕಂದಾಯ ಇಲಾಖೆಗೆ 16, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 15, ವಸತಿ 11, ಆಹಾರ, ಅಲ್ಪಸಂಖ್ಯಾತರ ಹಾಗೂ ನಗರಾಭಿವೃದ್ಧಿ ಇಲಾಖೆಗಳಿಗೆ ತಲಾ 2 ಹಾಗೂ ಇತರ ಇಲಾಖೆಗಳಿಗೆ 12 ಅರ್ಜಿಗಳು ಬಂದಿವೆ ಎಂದು ಆನೇಕಲ್ ತಹಶೀಲ್ದಾರ್ ಮುನಿವೆಂಕಟಪ್ಪ ಮಾಹಿತಿ ನೀಡಿದರು.
ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ಉಪವಿಭಾಗಾಧಿಕಾರಿ ವಿಶ್ವನಾಥ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
