Soon notification for recruitment of 660 PSI posts: Home Minister G Parameshwara| 660 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ: ಗೃಹ ಸಚಿವ ಜಿ ಪರಮೇಶ್ವರ್
ಬೆಂಗಳೂರು:
ಶೀಘ್ರದಲ್ಲೇ 660 ಪಿಎಸ್ಐ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
545 ಪಿಎಸ್ಐ ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯನ್ನು 54 ಸಾವಿರ ಅಭ್ಯರ್ಥಿಗಳು ಬರೆಯಬೇಕಿತ್ತು. ಕೆಲವರು ಗೈರಾಗಿದ್ದು, ಶೇ.65ರಿಂದ 70ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಇದರ ಬಳಿಕ 403 ಪಿಎಸ್ಐ ಹುದ್ದೆಗಳಿಗೆ ಪರೀಕ್ಷೆ ಮಾಡಬೇಕು. ಇದಕ್ಕೆ ಈಗಾಗಲೇ ದೈಹಿಕ ಪರೀಕ್ಷೆ ನಡೆದಿದೆ. ತದನಂತರ 660 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪಿಎಸ್ಐ ಮರುಪರೀಕ್ಷೆಯನ್ನು ಸುಗಮವಾಗಿ ನಡೆಸಿರುವುದಕ್ಕೆ ಕೆಇಎಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ನೇಮಕಾತಿ ಪರೀಕ್ಷೆ ಜವಾಬ್ದಾರಿಯನ್ನು ಕೂಡ ಕೆಇಎ ಅವರಿಗೇ ವಹಿಸಬೇಕು ಎಂದುಕೊಂಡಿದ್ದೇವೆ. 660 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ಸದ್ಯ ಎರಡೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡರೆ 948 ಸಬ್ ಇನ್ಸ್ಪೆಕ್ಟರ್ಗಳು ಲಭ್ಯವಾಗುತ್ತಾರೆ. ಇದಾದ ಮೇಲೆ 660 ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆಯ್ಕೆ ನಡೆಯಬೇಕಿದೆ. ಒಟ್ಟಾರೆ ಇನ್ನೆರಡು ವರ್ಷದಲ್ಲಿ ಇವೆಲ್ಲವನ್ನು ಕೂಡ ಮಾಡಬೇಕಾಗುತ್ತದೆ. ಈಗ ಅಭ್ಯರ್ಥಿಗಳನ್ನು ಸೆಲೆಕ್ಷನ್ ಮಾಡಿ ಟ್ರೈನಿಂಗ್ಗೆ ಒಂದು ವರ್ಷ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.