ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಬೃಹತ್ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ; ಸಾರ್ವಜನಿಕರು, ವ್ಯಾಪಾರಿಗಳಿಗೆ ಸ್ವಯಂಪ್ರೇರಿತ ತೆರವಿಗೆ ಮನವಿ
ಬೆಂಗಳೂರು, ಜುಲೈ 1: ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ “ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ”ದ ಅಂಗವಾಗಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ಬುಧವಾರದಿಂದ ಆರಂಭಗೊಂಡಿದೆ. ಸಾರ್ವಜನಿಕರಿಗೆ ಸುರಕ್ಷಿತ, ಸುಗಮ ಹಾಗೂ ಅಡೆತಡೆಯಿಲ್ಲದ ಪಾದಚಾರಿ ಸಂಚಾರ ಕಲ್ಪಿಸುವ ಉದ್ದೇಶದಿಂದ ನಗರ ಪಾಲಿಕೆವಾರು ಪ್ರಮುಖ ರಸ್ತೆಗಳಲ್ಲಿ ಬೃಹತ್ ಮಟ್ಟದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರ ಮಾರ್ಗದರ್ಶನದಂತೆ ಐದು ನಗರ ಪಾಲಿಕೆಗಳ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಅಡೆತಡೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಪಾದಚಾರಿ ಮಾರ್ಗಗಳು ಸಾರ್ವಜನಿಕರ ಆಸ್ತಿಯಾಗಿದ್ದು, ಅವುಗಳ ಮೇಲಿನ ಅತಿಕ್ರಮಣದಿಂದ ನಾಗರಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಸಂಪೂರ್ಣವಾಗಿ ಮುಕ್ತಗೊಳಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪೊಲೀಸ್ ಭದ್ರತೆಯೊಂದಿಗೆ ಜೆಸಿಬಿ, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳನ್ನು ಬಳಸಿ ಪಾದಚಾರಿ ಮಾರ್ಗಗಳ ಮೇಲಿನ ಅನಧಿಕೃತ ನಾಮಫಲಕಗಳು, ಮೆಟ್ಟಿಲುಗಳು, ಓಎಫ್ಸಿ ಕೇಬಲ್ಗಳು, ಅಂಗಡಿಗಳ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಶೀಟ್ಗಳು, ಕಟ್ಟಡ ತ್ಯಾಜ್ಯ, ತಳ್ಳುಗಾಡಿಗಳು, ಶಾಶ್ವತ ಪೆಟ್ಟಿಗೆಗಳು, ತಾತ್ಕಾಲಿಕ ಶೆಡ್ಗಳು, ಕಬ್ಬಿಣದ ರಚನೆಗಳು ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದ್ದ ವಿವಿಧ ರೀತಿಯ ಅತಿಕ್ರಮಣಗಳನ್ನು ತೆರವುಗೊಳಿಸಿದರು.
ಅಂಗಡಿ ಮಾಲೀಕರು, ವಾಣಿಜ್ಯ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಹಾಗೂ ಬೀದಿಬದಿ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸ್ವಯಂಪ್ರೇರಿತವಾಗಿ ತೆರವುಗೊಳಿಸದಿದ್ದಲ್ಲಿ ನಿಯಮಾನುಸಾರ ಕಾರ್ಯಾಚರಣೆ ನಡೆಸಿ, ಅಗತ್ಯವಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಮಡಿವಾಳ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ವಿಶೇಷ ಜಾಗೃತಿ ಮೂಡಿಸಲಾಗಿದ್ದು, ಪಾದಚಾರಿ ಮಾರ್ಗಗಳ ಮೇಲೆ ನಿಗದಿಪಡಿಸಿದ ಮಿತಿಯೊಳಗೆ ಮಾತ್ರ ವ್ಯಾಪಾರ ನಡೆಸುವಂತೆ ಸೂಚಿಸಲಾಗಿದೆ. ಕಸವನ್ನು ನಿಗದಿತ ಸ್ಥಳದಲ್ಲೇ ವಿಲೇವಾರಿ ಮಾಡಬೇಕು ಎಂದು ತಿಳಿಸಲಾಗಿದೆ. ಮುಂದಿನ ಶುಕ್ರವಾರದಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ತೆರವು ಕಾರ್ಯಾಚರಣೆಯೊಂದಿಗೆ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ವ್ಯಾಪಾರ ನಡೆಸಿದರೆ ₹5,000 ದಂಡ ವಿಧಿಸುವುದರ ಜೊತೆಗೆ ಪಾದಚಾರಿ ಮಾರ್ಗದಲ್ಲಿರುವ ವಸ್ತುಗಳನ್ನು ಜಪ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತ ರಮೇಶ್ ಡಿ. ಅವರ ನೇತೃತ್ವದಲ್ಲಿ ಮಾರತಹಳ್ಳಿ–ಇಬ್ಲೂರು ಜಂಕ್ಷನ್, ಹೋಪ್ ಫಾರ್ಮ್–ವರ್ತೂರು ರಸ್ತೆ, ಐಟಿಪಿಎಲ್ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ, ಟಿನ್ ಫ್ಯಾಕ್ಟರಿ, ರಾಮಮೂರ್ತಿನಗರ ಮುಖ್ಯ ರಸ್ತೆ, ಕುಂದಲಹಳ್ಳಿ ಹಾಗೂ ಹೂಡಿ ರಸ್ತೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತ ಜಿ. ಜಗದೀಶ್ ಅವರ ನೇತೃತ್ವದಲ್ಲಿ ಟ್ರಿನಿಟಿ ಜಂಕ್ಷನ್ನಿಂದ ಎಂಜಿ ಉದ್ಯಾನವರೆಗೆ, 100 ಅಡಿ ಇಂದಿರಾನಗರ ರಸ್ತೆ–ದೊಮ್ಮಲೂರು ಮೇಲ್ಸೇತುವೆ, ವಿವೇಕಾನಂದ ಮೆಟ್ರೋ ನಿಲ್ದಾಣ–ಬೆನ್ನಿಗನಹಳ್ಳಿ ರೈಲ್ವೆ ಸೇತುವೆ, ಅಶೋಕ್ ಪಿಲ್ಲರ್–ಮಾಧವನ್ ಪಾರ್ಕ್, ಕನಕನಪಾಳ್ಯ ರಸ್ತೆ–ಜಯನಗರ 15ನೇ ಅಡ್ಡರಸ್ತೆ, ಆರ್.ವಿ. ರಸ್ತೆ, ಓಕಳೀಪುರಂ ಹಾಗೂ ಮೆಜೆಸ್ಟಿಕ್ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತ ರಮೇಶ್ ಕೆ.ಎನ್. ಅವರ ನೇತೃತ್ವದಲ್ಲಿ ಉತ್ತರಹಳ್ಳಿ, ಆರ್.ವಿ. ಇನ್ಸ್ಟಿಟ್ಯೂಟ್ 80 ಅಡಿ ರಸ್ತೆ, ಕೊತ್ತನೂರು, ವಿಶ್ವಪ್ರಿಯ ಲೇಔಟ್, ಪದ್ಮನಾಭನಗರ ಗುರುರಾಜ ಲೇಔಟ್, ಜಯನಗರ, ಜೆ.ಪಿ.ನಗರ, ಎಚ್.ಎಸ್.ಆರ್. ಲೇಔಟ್, ಕೋರಮಂಗಲ, ಬಿಟಿಎಂ 2ನೇ ಹಂತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಿಗಳು ಹಾಗೂ ಅಂಗಡಿಗಳಿಂದ ಉಂಟಾಗಿದ್ದ ಅತಿಕ್ರಮಣಗಳನ್ನು ತೆರವುಗೊಳಿಸಲಾಯಿತು.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಯಲಹಂಕ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಹೆಬ್ಬಾಳ ಮುನಿರೆಡ್ಡಿಪಾಳ್ಯ ರಸ್ತೆ, ವಿದ್ಯಾರಣ್ಯಪುರ ಮುಖ್ಯ ರಸ್ತೆ, ಸಹಕಾರನಗರ (ರೈಲ್ವೆ ಪರ್ಯಾಯ ರಸ್ತೆ), ಕ್ಲಾರ್ಕ್ ರಸ್ತೆ ಹಾಗೂ ಬಾಣಸವಾಡಿ ಮುಖ್ಯ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಯಿತು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಅವರ ನೇತೃತ್ವದಲ್ಲಿ ತುಮಕೂರು ಮುಖ್ಯ ರಸ್ತೆ, ಮೈಸೂರು ರಸ್ತೆ, ಹೊರ ವರ್ತುಲ ರಸ್ತೆ, ಮಾಗಡಿ ಮುಖ್ಯ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಎಂ.ಇ.ಐ. ರಸ್ತೆ, ಎಂ.ಕೆ.ಕೆ. ರಸ್ತೆ, ದಾಸರಹಳ್ಳಿ ಲೇಕ್ ರಸ್ತೆ, ಚಂದ್ರ ಲೇಔಟ್, ಗೋವಿಂದರಾಜನಗರ, ಪಾಲಿಕೆ ಬಜಾರ್, ಸಂಪಿಗೆ ರಸ್ತೆ, ರಾಜಾಜಿನಗರ, ಡಿವಿಜಿ ರಸ್ತೆ, ಬುಲ್ ಟೆಂಪಲ್ ರಸ್ತೆ, ಕತ್ರಿಗುಪ್ಪೆ ರಸ್ತೆ ಹಾಗೂ ಭುವನೇಶ್ವರಿ ನಗರ ರಸ್ತೆಗಳಲ್ಲೂ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಈ ವಿಶೇಷ ಅಭಿಯಾನವನ್ನು ಐದು ನಗರ ಪಾಲಿಕೆಗಳಲ್ಲೂ ನಿರಂತರವಾಗಿ ಮುಂದುವರಿಸಲಾಗುವುದು ಎಂದು ತಿಳಿಸಿದೆ. ಸಾರ್ವಜನಿಕರಿಂದ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ಪಾದಚಾರಿ ಮಾರ್ಗಗಳನ್ನು ಸಂಪೂರ್ಣ ಒತ್ತುವರಿರಹಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರಿನ ಪ್ರತಿಯೊಬ್ಬ ನಾಗರಿಕನಿಗೂ ಸುರಕ್ಷಿತ ಮತ್ತು ಅಡೆತಡೆರಹಿತ ಪಾದಚಾರಿ ಮಾರ್ಗ ಬಳಸುವ ಹಕ್ಕಿದೆ ಎಂದು ಹೇಳಿದ್ದಾರೆ. ಪಾದಚಾರಿ ಮಾರ್ಗಗಳನ್ನು ಒತ್ತುವರಿರಹಿತವಾಗಿಡಲು ಸಾರ್ವಜನಿಕರು, ವ್ಯಾಪಾರಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು ನಗರಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇದು ಕೇವಲ ಸರ್ಕಾರದ ಅಭಿಯಾನವಾಗಿರದೆ ನಾಗರಿಕರ ಸಹಭಾಗಿತ್ವದ ಜನಾಂದೋಲನವಾಗಬೇಕು ಎಂದು ಕರೆ ನೀಡಿರುವ ಅವರು, ಬೀದಿಬದಿ ವ್ಯಾಪಾರಿಗಳ ಜೀವನೋಪಾಯಕ್ಕೂ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ಯತೆಯ ಸುಮಾರು ಶೇ.20ರಷ್ಟು ರಸ್ತೆಗಳನ್ನು ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಪಾದಚಾರಿಗಳಿಗೆ ತೊಂದರೆಯಾಗದ ರೀತಿಯಲ್ಲಿ ವ್ಯಾಪಾರ ನಡೆಸುವಂತೆ ವ್ಯಾಪಾರಿಗಳಿಗೆ ಅವರು ಮನವಿ ಮಾಡಿದ್ದಾರೆ.