ಜುಲೈ 1ರಿಂದ ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಆರಂಭ; ದಾಖಲೆಗಳೊಂದಿಗೆ ಸಹಕರಿಸಲು ಇಂಧನ ಇಲಾಖೆಯ ಮನವಿ
ಬೆಂಗಳೂರು, ಜೂನ್ 30: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ (GJY) ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯವನ್ನು ರಾಜ್ಯದ ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಜುಲೈ 1ರಿಂದ ಆರಂಭಿಸಲಿದ್ದಾರೆ.
2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯ ಪುನರ್ಪರಿಶೀಲನಾ ಕಾರ್ಯದ ಅಂಗವಾಗಿ, ಎಸ್ಕಾಂಗಳ ಮೀಟರ್ ರೀಡರ್ಗಳು ಹಾಗೂ ಸಿಬ್ಬಂದಿ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಬಳಿಕ ಮೊಬೈಲ್ ಆ್ಯಪ್ ಹಾಗೂ ಘೋಷಣಾ ಪತ್ರದ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ.
ಮನೆ-ಮನೆ ಪರಿಶೀಲನೆ ವೇಳೆ ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರ (ಅನ್ವಯಿಸುವಲ್ಲಿ ಮಾತ್ರ), ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಬೆಸ್ಕಾಂ ಮನವಿ ಮಾಡಿದೆ.
ಇಂಧನ ಇಲಾಖೆ ನೀಡಿರುವ ಮಾಹಿತಿಯಂತೆ, ಮೀಟರ್ ರೀಡರ್ ಮೂಲಕ ಸ್ಥಳದಲ್ಲಿಯೇ ನಡೆಸುವ ಪರಿಶೀಲನೆಯೇ ಫಲಾನುಭವಿಗಳ ಮರುಪರಿಶೀಲನೆಗೆ ಅನುಸರಿಸಲಾಗುತ್ತಿರುವ ಏಕೈಕ ವಿಧಾನವಾಗಿದೆ. ಆದ್ದರಿಂದ ಗ್ರಾಹಕರು ಹಾಗೂ ಫಲಾನುಭವಿಗಳು ಎಸ್ಕಾಂ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡಿ ಪರಿಶೀಲನಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ.
ರಾಜ್ಯದ ಐದು ಎಸ್ಕಾಂಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕ್ ವ್ಯಾಪ್ತಿಯಲ್ಲಿ ಈ ಮನೆ-ಮನೆ ಪರಿಶೀಲನಾ ಅಭಿಯಾನ ನಡೆಯಲಿದೆ.