ಗಿಡ ನೆಡುವ ವೆಚ್ಚದ ಲೆಕ್ಕ ಕೇಳಿದ ಕೃಷ್ಣ ಬೈರೇಗೌಡ; ಅಕ್ರಮಗಳಿಗೆ ಎಚ್ಚರಿಕೆ, ಬೀದಿ ನಾಯಿಗಳ ಸಂತಾನಹರಣಕ್ಕೆ ಮೂರು ವರ್ಷದ ಕಾರ್ಯಯೋಜನೆ ಸೂಚನೆ
ಬೆಂಗಳೂರು, ಜೂನ್ 30: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಜಿಬಿಎ ವ್ಯಾಪ್ತಿಯ ಅರಣ್ಯ ಇಲಾಖೆ ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಗಿಡ ನೆಡುವ ಕಾಮಗಾರಿಗಳ ವೆಚ್ಚ ಮತ್ತು ಅನುಷ್ಠಾನ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರಿ ಹಣದ ಬಳಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಗಿಡ ನೆಡುವ ವೆಚ್ಚದ ಕುರಿತು ಪ್ರಶ್ನಿಸಿದ ಸಚಿವರು, ಒಂದು ಗಿಡ ನೆಡಲು ಸುಮಾರು ₹3,300 ವೆಚ್ಚವಾಗುತ್ತಿದೆ ಎಂದು ದಾಖಲಾಗಿದ್ದು, ಅದರಲ್ಲಿ ಗುಂಡಿ ತೋಡಲು ₹300 ಖರ್ಚು ತೋರಿಸಲಾಗಿದೆ. ಆದರೆ ಹಲವೆಡೆ ಸರಿಯಾಗಿ ಗುಂಡಿಯನ್ನೇ ತೋಡದೆ ಗಿಡಗಳನ್ನು ರಸ್ತೆ ಡಿವೈಡರ್ ಹಾಗೂ ಫುಟ್ಪಾತ್ಗಳಲ್ಲಿ ಇಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ತಮ್ಮ ಕ್ಷೇತ್ರದಲ್ಲಿಯೇ ಅನೇಕ ಕಡೆ ಸರಿಯಾದ ರೀತಿಯಲ್ಲಿ ಗುಂಡಿ ತೋಡದೆ ಗಿಡಗಳನ್ನು ನೆಟ್ಟಿರುವುದಾಗಿ ಹೇಳಿದ ಅವರು, “ನಾನು ಇದನ್ನು ಸಾಬೀತುಪಡಿಸಲು ಸಿದ್ಧನಿದ್ದೇನೆ. ಒಂದೇ ಒಂದು ಗಿಡಕ್ಕೂ ಸರಿಯಾಗಿ ಗುಂಡಿ ತೋಡಿಲ್ಲ. ಹಾಗಿದ್ದರೆ ಗುಂಡಿ ತೋಡಲು ಖರ್ಚು ತೋರಿಸಿರುವ ₹300 ಎಲ್ಲಿಗೆ ಹೋಗಿದೆ?” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಭೆಯಲ್ಲಿ ಗಿಡ ನೆಡುವ ಕಾರ್ಯಕ್ರಮದ ಪ್ರಗತಿ ವರದಿಯ ಬಗ್ಗೆಯೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಸುಮಾರು 20 ಲಕ್ಷ ಗಿಡಗಳನ್ನು ನೆಟ್ಟಿದ್ದೇವೆ ಎಂದು ಹೇಳುತ್ತಿದ್ದರೆ, ವಾಸ್ತವದಲ್ಲಿ ಸುಮಾರು 9 ಲಕ್ಷ ಗಿಡಗಳಷ್ಟೇ ಕಂಡುಬರುತ್ತಿವೆ. ಉಳಿದ ಗಿಡಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಗಿಡ ನೆಡುವ ಕಾಮಗಾರಿಗಳಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಹಣದ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ ಸಚಿವರು, ಸಾರ್ವಜನಿಕರ ಹಣವನ್ನು ಜವಾಬ್ದಾರಿಯಿಂದ ಬಳಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೀದಿ ನಾಯಿಗಳ ಸಂತಾನಹರಣಕ್ಕೆ ಮೂರು ವರ್ಷದ ಕಾರ್ಯಯೋಜನೆ
ಇದೇ ಸಭೆಯಲ್ಲಿ ಜಿಬಿಎ ವ್ಯಾಪ್ತಿಯ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳೊಂದಿಗೆ ಬೀದಿ ನಾಯಿಗಳ ಸಂತಾನಹರಣ ಮತ್ತು ಚಿಕಿತ್ಸೆ ಕಾರ್ಯಕ್ರಮಗಳ ಪ್ರಗತಿಯನ್ನೂ ಸಚಿವರು ಪರಿಶೀಲಿಸಿದರು.
ನಗರದಲ್ಲಿ ಪ್ರತಿ ವರ್ಷ ಸುಮಾರು 90 ಸಾವಿರದಿಂದ ಒಂದು ಲಕ್ಷದವರೆಗೆ ಬೀದಿ ನಾಯಿಗಳಿಗೆ ಚಿಕಿತ್ಸೆ ಮತ್ತು ಸಂತಾನಹರಣ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಒಂದು ವರ್ಷದಲ್ಲೇ ಶೇ.100 ಗುರಿ ಸಾಧಿಸುವುದು ಸಾಧ್ಯವಾಗದಿದ್ದರೂ, ಮುಂದಿನ ಮೂರು ವರ್ಷಗಳೊಳಗೆ ಎಲ್ಲ ಬೀದಿ ನಾಯಿಗಳನ್ನು ಹಂತ ಹಂತವಾಗಿ ಸಂತಾನಹರಣ ಹಾಗೂ ಚಿಕಿತ್ಸೆಗೆ ಒಳಪಡಿಸುವಂತೆ ಸಮಗ್ರ ಕಾರ್ಯಯೋಜನೆ ರೂಪಿಸಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ನಗರದ ಪರಿಸರ ಸಂರಕ್ಷಣೆ, ಸಾರ್ವಜನಿಕ ಸುರಕ್ಷತೆ ಹಾಗೂ ಪ್ರಾಣಿಗಳ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.