Karnataka proposes to purchase under PDPS in wake of falling onion prices: ಈರುಳ್ಳಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಪಿಡಿಪಿಎಸ್ ಅಡಿ ಖರೀದಿಗೆ ರಾಜ್ಯದ ಪ್ರಸ್ತಾಪ – ಕೇಂದ್ರಕ್ಕೆ ಪತ್ರ: ಸಚಿವ ಶಿವಾನಂದ ಪಾಟೀಲ
ಬೆಂಗಳೂರು: ರಾಜ್ಯದಲ್ಲಿ ಈರುಳ್ಳಿ ಬೆಲೆ ಕುಸಿತ ಉಂಟಾದ ಹಿನ್ನೆಲೆ, ಪಿಡಿಪಿಎಸ್ (ಪ್ರೈಸ್ ಡಿಫಿಷಿಯನ್ಸಿ ಪ್ರೊಕ್ಯೂರ್ಮೆಂಟ್ ಸ್ಕೀಮ್) ಅಡಿಯಲ್ಲಿ ಈರುಳ್ಳಿ ಖರೀದಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಕೇಂದ್ರ ಸರ್ಕಾರಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
“ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಕಟಾವಿಗೆ ಬಂದ ಈರುಳ್ಳಿ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಳೆದ ಸಾಲಿನ ಸರಾಸರಿ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ, ಈ ಬಾರಿ ಮಾರಾಟದ ದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿದೆ. ರೈತರಿಗೆ ನಷ್ಟ ತಡೆಯಲು ಪಿಡಿಪಿಎಸ್ ಅಡಿ ಖರೀದಿ ಅಗತ್ಯವಾಗಿದೆ,” ಎಂದು ಸಚಿವರು ಹೇಳಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಸೇರಿ ಒಟ್ಟು 2.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಉತ್ಪಾದನೆ ಸುಮಾರು 27 ಲಕ್ಷ ಮೆಟ್ರಿಕ್ ಟನ್ಗಳಷ್ಟಿದೆ.
ಮುಖ್ಯವಾಗಿ ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ವಿಜಯನಗರ, ಬೆಳಗಾವಿ, ಧಾರವಾಡ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ.
ಅತಿಯಾದ ಮಳೆಯಿಂದಾಗಿ ಬೆಳೆ ಹಾನಿಯಾಗಿ, ಮಾರುಕಟ್ಟೆ ಬೆಲೆಗಳು ಕುಸಿದಿವೆ. ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಭೆ ಸೇರಿ ಚರ್ಚೆ ನಡೆಸಿದ್ದು, ಪ್ರಾರಂಭದಲ್ಲಿ ಎಂಐಎಸ್ (ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ) ಅಡಿಯಲ್ಲಿ ಖರೀದಿಸಲು ಶಿಫಾರಸು ಮಾಡಿದ್ದರು.
ಆದರೆ, ಪರಿಸ್ಥಿತಿಯ ವಿಶ್ಲೇಷಣೆಯ ನಂತರ ಪಿಡಿಪಿಎಸ್ ಅಡಿಯಲ್ಲಿ ಖರೀದಿ ಹೆಚ್ಚು ಸೂಕ್ತ ಎನ್ನುವ ಅಭಿಪ್ರಾಯಕ್ಕೆ ಬಂದು, ಕೇಂದ್ರ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಪಾಟೀಲ ಸ್ಪಷ್ಟಪಡಿಸಿದರು.
