Home ಮೈಸೂರು ಮೈಸೂರಿನಲ್ಲಿ ಬಿಜೆಪಿ ಪ್ರಚಾರದ ರಥದ ಮೇಲೆ ಕಲ್ಲು ತೂರಾಟ: ಹಲವರಿಗೆ ಗಾಯ, ಸಚಿವ ಸೋಮಣ್ಣ, ಸಂಸದ...

ಮೈಸೂರಿನಲ್ಲಿ ಬಿಜೆಪಿ ಪ್ರಚಾರದ ರಥದ ಮೇಲೆ ಕಲ್ಲು ತೂರಾಟ: ಹಲವರಿಗೆ ಗಾಯ, ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಪಾರು

62
0
Stone pelting on BJP campaign chariot in Mysore Many injured, Minister Somanna, MP Pratap Simha escaped

ಮೈಸೂರು:

ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿದ್ದು, ಬಿಜೆಪಿ ಪ್ರಚಾರ ರಥದ ಮೇಲೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ರಥದ ಮೇಲಿದ್ದ ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹಲವು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಸಿದ್ದರಾಮನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಣ್ಣನ ಮನೆ ಮುಂದೆ ಪ್ರಚಾರ ಮಾಡುವಾಗ ಘಟನೆ ನಡೆದಿದೆ.

ಮೈಸೂರಿನ ವರಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಚಿವ ವಿ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆಯಾದ ಆರೋಪ ಕೇಳಿಬಂದಿದ್ದು, ನಾಗೇಶ್ ಕಾಲಿಗೆ ಪೆಟ್ಟಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಸಿದ್ದರಾಮಯ್ಯ ಸಂಬಂಧಿಕರಿಂದ ಗಲಾಟೆ: ಇನ್ನು ಘಟನೆ ಕುರಿತು ಮಾಹಿತಿ ನೀಡಿರುವ ಬಿಜೆಪಿ ಕಾರ್ಯಕರ್ತ ರವಿಶಂಕರ್, ‘ಸಿದ್ದರಾಮಯ್ಯ ಸಂಬಂಧಿಕರು ನಮ್ಮ ಜೊತೆ ಗಲಾಟೆ ಮಾಡಿದರು. ಏಕಾಏಕಿ ಸಿದ್ದರಾಮಯ್ಯಗೆ ಜೈ, ಸೋಮಣ್ಣಗೆ ಧಿಕ್ಕಾರ ಎಂದು ಕೂಗಿದರು. ಕಲ್ಲು ತೂರಾಟ ನಡೆಸಿ ಕಾರುಗಳನ್ನು ಜಖಂಗೊಳಿಸಿದರು. ಕಲ್ಲು ತೂರಾಟ ನಡೆಸಿದ್ದಲ್ಲದೇ ದೊಣ್ಣೆಯಿಂದ ಹಲ್ಲೆ ಮಾಡಿದರು ಎಂದು ಹೇಳಿದರು.

ಮೂವರು ವಶಕ್ಕೆ: ಘಟನೆ ಸಂಬಂಧ ಮೂವರನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಸಿದ್ದರಾಮಯ್ಯ ಆಪ್ತರು ಪೊಲೀಸರಿಗೆ ಕರೆ ಮಾಡಿದ ನಂತರ ಬಿಡುಗಡೆ ಮಾಡಲಾಗಿದೆ. ಘಟನೆ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇವೆ. ನಾವು ಪ್ರಚಾರ ನಡೆಸಲು ಕಷ್ಟವಾಗಿದೆ, ಆದರೂ ಪ್ರಚಾರ ಮಾಡುತ್ತೇವೆ ಎಂದು ಬಿಜೆಪಿ ಕಾರ್ಯಕರ್ತರಾದ ರವಿಶಂಕರ್, ಶಿವಪ್ರಕಾಶ್ ಹೇಳಿದರು.

LEAVE A REPLY

Please enter your comment!
Please enter your name here