Home ಸಿನಿಮಾ ಹಿರಿಯ ನಟಿ, ಅಭಿನವ ಶಾರದೆ ಜಯಂತಿ ಇನ್ನಿಲ್ಲ

ಹಿರಿಯ ನಟಿ, ಅಭಿನವ ಶಾರದೆ ಜಯಂತಿ ಇನ್ನಿಲ್ಲ

263
0
Veteran actress Jayanti is no more

ಬೆಂಗಳೂರು:

ಹಿರಿಯ ನಟಿ ಅಭಿನವ ಶಾರದೆ ಜಯಂತಿ (76) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಕನ್ನಡ,ತೆಲಗು,ತಮಿಳು,ಮಲಯಾಳಂ,ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಕರೆಯಲ್ಪಡುವ ಜಯಂತಿ ದಕ್ಷಿಣ ಭಾರತ ಚಿತ್ರರಂಗದ ಮೇರು ನಟಿ.

1950 ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಜನಿಸದ ಜಯಂತಿಯ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ. ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಚೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್‌ನಲ್ಲಿ ಬೆಳೆದರು.

ಕನ್ನಡದಲ್ಲಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ ಇವರು ಡಾ.ರಾಜ್ ಜೊತೆ ದಾಖಲೆಯ 45 ಚಿತ್ರಗಳಲ್ಲಿ ನಟಿಸಿದ್ದಾರೆ.

ಮುಖ್ಯಮಂತ್ರಿ ಸಂತಾಪ

ಹಿರಿಯ ನಟಿ ಜಯಂತಿ ಅವರ ನಿಧನಕ್ಕೆ ಮುಖ್ಯಮಂತ್ರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಲವು ಭಾಷೆಗಳ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು ಅಭಿನಯ ಶಾರದೆ ಎಂಬ ಬಿರುದಿಗೆ ಅನ್ವರ್ಥವಾಗಿದ್ದರು.
ಎಡಕಲ್ಲು ಗುಡ್ಡದ ಮೇಲೆ, ಮಿಸ್ ಲೀಲಾವತಿ, ಜೇನು ಗೂಡು, ಬಹದ್ದೂರ್ ಗಂಡು ಮೊದಲಾದ ಚಿತ್ರಗಳಲ್ಲಿನ ಅವರ ಅಭಿನಯ ಜನಮನ ಸೂರೆ ಗೊಂಡಿತ್ತು. ಎಲ್ಲ ವಿಧವಾದ ಪಾತ್ರಗಳಲ್ಲೂ ಲೀಲಾಜಾಲವಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಅವರ ನಿಧನದಿಂದ ನಾಡು ಅದ್ಭುತ ಕಲಾವಿದೆಯನ್ನು ಕಳೆದುಕೊಂಡಿದೆ.


ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸು ವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಸಂತಾಪ

ಬಹುಭಾಷಾ ನಟಿ, ಕನ್ನಡ ಚಿತ್ರರಂಗದ ಮೇರು ಕಲಾವಿದೆ ಜಯಂತಿ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ತಮ್ಮ ಮನೋಜ್ಞ ನಟನೆಯಿಂದ ‘ಅಭಿನಯ ಶಾರದೆ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ನಟಿ ಜಯಂತಿ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ತಾವು ಅಭಿನಯಿಸುತ್ತಿದ್ದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುತ್ತಿದ್ದ ಜಯಂತಿ ಅವರು ಬೆಳ್ಳಿ ತೆರೆಯ ಸ್ವರ್ಣ ಕಮಲದಂತಿದ್ದರು ಎಂದು ಶಿವಕುಮಾರ್ ಅವರು ಬಣ್ಣಿಸಿದ್ದಾರೆ.

1960ರ ದಶಕದಿಂದ ಕನ್ನಡ, ತೆಲುಗು, ತಮಿಳು, ಮರಾಠಿ ಸೇರಿದಂತೆ ಹಲವು ಭಾಷೆಗಳ ಸುಮಾರು 500 ಚಿತ್ರಗಳಲ್ಲಿ ಅಭಿನಯಿಸಿದ ಜಯಂತಿ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಕನ್ನಡ ಚಿತ್ರರಂಗದಲ್ಲಂತೂ ತಮ್ಮದೇ ಆದ ಶೈಲಿಯಿಂದ ಬೆರಗು ಮೂಡಿಸಿದ್ದರು. ಜೇನುಗೂಡು, ಮಂತ್ರಾಲಯ ಮಹಾತ್ಮೆ, ಬಹದ್ದೂರ್ ಗಂಡು, ನಾಗರಹಾವು, ಎಡಕಲ್ಲು ಗುಡ್ಡದ ಮೇಲೆ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿನ ಅವರ ಪಾತ್ರ ಅಚ್ಚಹಸುರಾಗಿದೆ.

ಡಾ. ರಾಜಕುಮಾರ್ ಅವರಿಂದ ಹಿಡಿದು ತಮಿಳಿನ ಎಂ.ಜಿ. ರಾಮಚಂದ್ರನ್, ತೆಲುಗಿನ ಎನ್.ಟಿ. ರಾಮರಾವ್ ಸೇರಿದಂತೆ ದಕ್ಷಿಣ ಭಾರತದ ಮಹಾನ್ ನಟರಿಗೆ ನಾಯಕಿಯಾಗಿ ಮಿಂಚು ಹರಿಸಿದ್ದವರು ನಟಿ ಜಯಂತಿ ಅವರು. ತಮ್ಮ ಕಲಾ ಸೇವೆಯಿಂದ ರಾಜ್ಯ ಪ್ರಶಸ್ತಿ ಸೇರಿದಂತೆ, ಫಿಲಂ ಫೇರ್, ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಯಂತಿ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗದ ಮತ್ತೊಂದು ಧ್ರುವತಾರೆ ಮರೆಯಾಗಿದೆ. ಅವರು ನಮ್ಮನ್ನು ಅಗಲಿದ್ದರೂ ಅವರ ಚಿತ್ರಗಳ ಮೂಲಕ ಸದಾ ಜೀವಂತವಾಗಿರುತ್ತಾರೆ.

ಜಯಂತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಶಿವಕುಮಾರ್ ಅವರು ತಮ್ಮ ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here