ಕೇಂದ್ರಸರ್ಕಾರ ಅಭದ್ರಗೊಳಿಸಲು ಪೆಗಾಸಿಸ್ ಅಸ್ತ್ರ

    52
    0
    Prakash Sesharaghavachar

    2017-18ರ ಅವಧಿಯಲ್ಲಿ ಭಾರತೀಯ ಪತ್ರಕರ್ತರ ಮತ್ತು ಮಾನವ ಹಕ್ಕು ಕಾರ್ಯಕರ್ತರ ಸ್ಮಾರ್ಟ್ ಫೋನ್ ಗಳ ಮೇಲೆ ಪೆಗಾಸಿಸ್ ಬಳಸಿ ಸರ್ಕಾರ ಕಣ್ಗಾವಲು ನಡೆಸುತ್ತಿದೆ ಎಂದು 2019 ರಲ್ಲಿ ಈ ಸಂಗತಿಯು ಬಯಲಾಗಿ ದೊಡ್ಡ ವಿವಾದವಾಗಿತ್ತು. ವಾಟ್ಸಪ್ ದೇಶಾದ್ಯಂತ್ಯ 1400 ಫೋನ್ ಗಳು ಪೆಗಾಸಿಸ್ ಹ್ಯಾಕ್ ಆಗಿದೆ ಎಂದು ತಿಳಿಸಿತು. ಆದರೆ ಮುಂದಿನ ದಿನಗಳಲ್ಲಿ ಯಾವುದೇ ಪುರಾವೆಗಳಿಲ್ಲದೆ ಈ ವಿವಾದವು ತಣ್ಣಗಾಯಿತು.

    2017ರಲ್ಲಿ ಎನ್ ಎಸ್ ಓ ಎಂಬ ಇಸ್ರೇಲಿ ಸಂಸ್ಥೆಯು ಈ ಕಣ್ಗಾವಲು ತತ್ರಾಂಶವನ್ನು ಪೆಗಾಸಿಸ್ ಹೆಸರಿನಲ್ಲಿ ಅಭಿವೃದ್ಧಿ ಪಡಿಸಿದೆ.ತತ್ರಾಂಶವನ್ನು ಸರ್ಕಾರಿ ಬೇಹುಗಾರಿಕೆ ಸಂಸ್ಥೆ, ಕಾನೂನು ಜಾರಿ ಮಾಡುವ ಇಲಾಖೆಗಳಿಗೆ ಕೇವಲ ಅಪರಾಧ ಮತ್ತು ಭಯೋತ್ಪಾದನೆ ತಡೆಯುವ ಉದ್ದೇಶದ ಬಳಕೆಗೆ ಮಾತ್ರ ಮಾರಾಟ ಮಾಡುವುದು ಎಂದು ಸಂಸ್ಥೆ ಹೇಳಿಕೊಳ್ಳುತ್ತದೆ. ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ತನ್ನ ಗ್ರಾಹಕರ ಪಟ್ಟಿಯನ್ನು ಬಹಿರಂಗ ಪಡಿಸಲು ನಿರಾಕರಿಸಿದೆ

    ಈ ತತ್ರಾಂಶವನ್ನು ಅತ್ಯಂತ ಸುಲಭವಾಗಿ ಫೋನ್ ಗಳಲ್ಲಿ ಅಳವಡಿಸಬಹುದು. ಫೋನ್ ಗಳಿಗೆ ಲಿಂಕ್ ಕಳುಹಿಸಿದಾಗ ಅದರ ಮೇಲೆ ಕ್ಲಿಕ್ ಮಾಡಿದರೆ ಅಥವಾ ವಿಡೀಯೊ ಕರೆ ಮಾಡುವ ಮೂಲಕ ಇದನ್ನು ಅಳವಡಿಸಬಹುದಾಗಿದೆ. ಫೋನ್ ತಂತ್ರಜ್ಞಾನ ಬದಲಾದ ಹಾಗೆ ಕಣ್ಗಾವಲು ತಂತ್ರಾಂಶದ ಅಳವಡಿಕೆಯಲ್ಲಿಯೂ ಅದಕ್ಕೆ ತಕ್ಕಹಾಗೆ ಬದಲಾವಣೆಯಾಗಿರುವುದು. ಒಮ್ಮೆ ಪೆಗಾಸಿಸ್ ಅಳವಡಿಸಿದರೆ ನಿಮ್ಮ ಮೊಬೈಲ್ ನ ಸಮಸ್ತ ಮಾಹಿತಿಯು ಸುಲಭವಾಗಿ ಕೈ ವಶವಾಗುತ್ತದೆ. ನಿಮ್ಮ ಪಾಸ್ ವರ್ಡ್ ಕೂಡಾ ಇದಕ್ಕೆ ಹೊರತಾಗಿಲ್ಲ .

    ಪೆಗಾಸಿಸ್ ಕಣ್ಗಾವಲು ತತ್ರಾಂಶವು ಜೀ ಮೇಲ್ ಫೇಸ್ ಬುಕ್, ಫೇಸ್ ಟೈಂ, ವಾಟ್ಸ್ಅಪ್, ಟೆಲಿಗ್ರಾಮ್ ಮುಂತಾದ ಆಪ್ ಗಳನ್ನು ಯಶಸ್ವಿಯಾಗಿ ಪ್ರವೇಶಿಸಿ ಸುಲಭವಾಗಿ ದತ್ತಾಂಶವನ್ನು ಸಂಗ್ರಹಿಸಿ ಖಾಸಗಿತನವನ್ನು ಸಂಪೂರ್ಣವಾಗಿ ಅಳಸಿ ಹಾಕುತ್ತದೆ. ಎನ್ ಎಸ್ ಓ ಪ್ರಕಾರ ಈ ತತ್ರಾಂಶವನ್ನು ಸರ್ಕಾರಗಳಿಗೆ ವಿನಹ ಇತರರಿಗೆ ಮಾರಾಟ ಮಾಡುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಇದರ ಸತ್ಯಾಸತ್ಯತೆಗಳು ದೃಢಪಡಿಸಲಾಗದು.

    ಪೆಗಾಸಿಸ್ ತತ್ರಾಂಶವನ್ನು ಖರೀದಿಸಲು 5ಲಕ್ಷ ಡಾಲರ್ ತೆರಬೇಕಂತೆ ಮತ್ತು 10 ಐಫೋನ್ ಗಳಲ್ಲಿ ಅಳವಡಿಸಲು ಮತ್ತೆ 6.5ಲಕ್ಷ ಡಾಲರ್ ನೀಡಬೇಕು. ಇದಲ್ಲದೆ ವಾರ್ಷಿಕ ನಿವರ್ಹಣಾ ವೆಚ್ಚವನ್ನು ಪ್ರತ್ಯೇಕವಾಗಿ ನೀಡಬೇಕು. ಈ ತತ್ರಾಂಶವನ್ನು ಅತ್ಯಂತ ದುಬಾರಿ ದರದಲ್ಲಿ ಖರೀದಿಸಬೇಕು ಎಂದು ನ್ಯೂಯಾರ್ಕ್ ಟೈಂಸ್ 2019ರಲ್ಲಿ ವರದಿ ಮಾಡಿತ್ತು.

    2021 ರಲ್ಲಿ ಪೆಗಾಸಿಸ್ ಕಣ್ಗಾವಲು ಮತ್ತೆ ಸದ್ದು ಮಾಡುತ್ತಿದೆ. ಈ ಬಾರಿ ಫ್ರಾನ್ಸ್ ನ ಫಾರ್ ಬಿಡನ್ ಸ್ಟೋರಿಸ್ ಎಂಬ ಎನ್ ಜಿಒ ಮತ್ತು ಆಮ್ನೆಸ್ಟಿ ಇಂಟರನ್ಯಾಷನಲ್ , ಅಂರ್ತಜಾಲ ಸುದ್ದಿ ಮಾಧ್ಯಮ ದಿ ವೈರ್ ಮಾಧ್ಯಮ ಸಂಸ್ಥೆಗಳ ಸಹಯೋಗದಿಂದ “ ಪ್ರಾಜೆಕ್ಟ್ ಪೆಗಾಸಿಸ್ “ ಹೆಸರಲ್ಲಿ ಎನ್ ಎಸ್ ಒ ಕಣ್ಗಾವಲು ತತ್ರಾಂಶವನ್ನು ಅಳವಡಿಸಿರುವ ಕುರಿತು ತನಿಖೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ವಿಶ್ವಾದ್ಯಂತ್ಯ 50 ಸಾವಿರ ಫೋನ್ ಗಳಲ್ಲಿ ಈ ತತ್ರಾಂಶವನ್ನು ಅಳವಡಿಸಿರುವುದು ಪತ್ತೆಯಾಗಿದೆ ಅದರಲ್ಲಿ ಭಾರತದ 300 ದೂರವಾಣಿಗಳಲ್ಲಿಯೂ ಅಳವಡಿಸಿದೆ ಎಂದು ಹೇಳಿದೆ. ಇದರ ವಿವರಗಳನ್ನು ವಿಶ್ವದ 15 ಮಾಧ್ಯಮ ಸಂಸ್ಥೆಗಳೊಂದಿಗೆ ಇವರು ಹಂಚಿಕೊಂಡಿದ್ದಾರೆ.

    Pegasus Spyware

    ಭಾರತವನ್ನು ಗುರಿಯಾಗಿಸಿ ಈ ಸುದ್ದಿಯನ್ನು ದಿ ಗಾರ್ಡಿಯನ್ , ವಾಷಿಂಗ್ಟನ್ ಪೋಸ್ಟ್ , ನ್ಯೂಯಾರ್ಕ್ ಟೈಂಸ್ ಮತ್ತು ಮೋದಿ ಸರ್ಕಾರದ ವಿರುದ್ದ ದಿನಬೆಳಗಾದರೆ ಹತ್ತಾರು ಲೇಖನಗಳ ಮೂಲಕ ವಿಷಕಾರುವ ಸುದ್ದಿಜಾಲ ದಿ ವೈರ್ ಪ್ರಕಟ ಮಾಡಿದೆ. ಸಂಸ್ಸತ್ ಅಧಿವೇಶನದ ಆರಂಭದ ಹಿಂದಿನ ದಿನ ಈ ಸುದ್ದಿಯು ಪ್ರಕಟ ಮಾಡಿರುವುದು ಗಮನಾರ್ಹ ಸಂಗತಿಯು.

    ದಿ ಗಾರ್ಡಿಯನ್ ಪತ್ರಿಕೆಯು ಮೋದಿಯವರ ಭಾವಚಿತ್ರವನ್ನು ಹಾಕಿ ಪೆಗಾಸಿಸ್ ಬಳಕೆಯ ಸುದ್ದಿ ವಿವರ ನೀಡಿದೆ ಆದರೆ ಅಮೆರಿಕಾ ಸಹಿತ ಅನೇಕ ದೇಶಗಳಲ್ಲಿ ಇದನ್ನು ಉಪಯೋಗಿಸುತ್ತಿರುವಾಗ ಕೇವಲ ಮೋದಿವರೊಬ್ಬರನ್ನು ದೋಷಿ ಮಾಡುವ ಇವರ ಕುತಂತ್ರದ ಹಿಂದೆ ಇರಬಹುದಾದ ಅಂತರಾಷ್ಟ್ರೀಯ ಪಿತೂರಿಯತ್ತ ಕೈ ತೋರಿಸುತ್ತದೆ.

    ಇದರ ಪ್ರಕಾರ ರಾಹುಲ್ ಗಾಂಧಿ ಪ್ರಮುಖ ರಾಜಕಾರಣಿಗಳು ಇಬ್ಬರು ಕೇಂದ್ರ ಸಚಿವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು 40 ಜನ ಪತ್ರಕರ್ತರು ಹೀಗೆ ಪಟ್ಟಿ ಬೆಳಸಿದ್ದಾರೆ. ಸಿದ್ದರಾಮಯ್ಯ ಸಹಾಯಕ ವೆಂಕಟೇಶ್ ಮತ್ತು ಕುಮಾರ ಸ್ವಾಮಿ ಆಪ್ತ ಸಹಾಯಕರ ಫೋನಿನಲ್ಲಿಯೂ ತತ್ರಾಂಶ ಅಳವಡಿಸಲಾಗಿತ್ತು ಎಂದು ಹೇಳಿಕೊಂಡಿದೆ.

    ಎನ್ ಎಸ್ ಒ ಸಂಸ್ಥೆಯು ಈ ಪಟ್ಟಿಯಲ್ಲಿನ ಸಂಖ್ಯೆಗಳು ತಮ್ಮ ಯಾವುದೆ ಗ್ರಾಹಕರಿಗೆ ಸೇರಿರುವುದಲ್ಲ ಎಂದು ಸ್ಪಷ್ಟೀಕರಣ ನೀಡಿದೆ.ಈಗ ಪೆಗಾಸಿಸ್ ಕಣ್ಗಾವಲು ನಡೆಯುತ್ತಿದೆ ಎಂದು ಆರೋಪಿಸಿರುವ ಸಂಸ್ಥೆಗಳು ಸಾಕ್ಷ್ಯಾಧಾರ ಸಮೇತ ರುಜುವಾತು ಪಡಿಸಬೇಕಾದ ಹೊಣೆಗಾರಿಕೆಯು ಅವರ ಮೇಲಿದೆ.

    ತನಿಖೆಯ ಮೂಲಕ 300 ದೂರವಾಣಿಗಳಲ್ಲಿ ಪೆಗಾಸಿಸ್ ಅಳವಡಿಸಿದೆ ಎಂದು ಖಚಿತವಾಗಿ ಹೇಳುತ್ತಿರುವವರು ಇದನ್ನು ಹೇಗೆ ಪತ್ತೆ ಮಾಡಲಾಯಿತು ಎಂಬುದಕ್ಕೆ ಉತ್ತರವಿಲ್ಲ. ಇವರ ತನಿಖೆಯಲ್ಲಿ ನಿರ್ದಿಷ್ಟ ಸಂಖ್ಯೆಯು ದೊರತಿರುವಾಗ ಈ ಸಂಖ್ಯೆಯಲ್ಲಿ ಯಾವ ಮಾಹಿತಿ ಸಂಗ್ರಹಿಸಲಾಗಿದೆ ಎಂಬುದನ್ನು ಅರಿಯಬಹುದು ಆದರೆ ಇವರು ವಿವರಗಳನ್ನು ನೀಡುತ್ತಿಲ್ಲ.

    ವಿಧಿ ವಿಜ್ಞಾನ ಸಂಸ್ಥೆಗೆ ಕೊಟ್ಟು ಪರಿಕ್ಷೀಸಿದರೆ ಪೆಗಾಸಿಸ್ ಅಳವಡಿಕೆಯಾದ ಬಗ್ಗೆ ಪತ್ತೆಯಾಗುವುದು ಎಂದು ದಿ ವೈರ್ ಹೇಳಿದೆ. ಹಾಗಿದ್ದರೆ ಆ ಎಲ್ಲಾ 300 ನಂಬರ್ ಗಳಲ್ಲಿ ಪೆಗಾಸಿಸ್ ಇರುವುದನ್ನು ಪರೀಕ್ಷಿಸಲಾಗಿರುವುದಾ? ಉತ್ತರವಿಲ್ಲ.

    ಕಡೆಯ ಪಕ್ಷ ಈಗಾಗಲೇ ಯಾರ ಹೆಸರಿನ ದೂರವಾಣಿಗಳಲ್ಲಿ ಅಳವಡಿಸಲಾಗಿದೆ ಎಂದು ತಿಳಿದಿರುವಾಗ ಆ ಸಂಬಂಧಪಟ್ಟವರು ವಿಧಿ ವಿಜ್ಞಾನ ಸಂಸ್ಥೆಗೆ ತಮ್ಮ ಮೊಬೈಲ್ ಕೊಟ್ಟು ತಪಾಸಣೆ ಮಾಡಿಸಬಹುದಿತ್ತಲ್ಲವಾ?

    ಆಮ್ನೆಸ್ಟಿ ಮತ್ತು ದಿ ವೈರ್ ಮೋದಿ ಸರ್ಕಾರದ ಬದ್ಧ ವೈರಿಗಳು. ಆಮ್ನೆಸ್ಟಿ ಭಾರತ ವಿರೋಧಿ ಕಾರ್ಯಸೂಚಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದಾಗ ತಮ್ಮ ಅಂಗಡಿಯನ್ನು ಮುಚ್ಚಿಕೊಂಡು ದೇಶದಿಂದ ಪೇರಿ ಕಿತ್ತಿದ್ದರು

    ದಿ ವೈರ್ ಸಂಪಾದಕ ವರದರಾಜ್ ರವರು ಅಮಿತ್ ಶಾ ಮಗನ ವಿರುದ್ದ ಗಂಭೀರ ಆರೋಪ ಮಾಡಿ 100ಕೋಟಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ಜಾರೆ. ದಿ ವೈರ್ ನಲ್ಲಿ ಸುದ್ದಿಗಳು ಕೇವಲ ಮೋದಿ ವಿರೋಧಿ ಮತ್ತು ಬಲಪಂಥೀಯರ ಮೇಲೆ ದಿನನಿತ್ಯ ಒಂದಲ್ಲಾ ಒಂದು ಅಪ್ರಪಚಾರ ಕೈಗೊಳ್ಳುತ್ತಿರುವ ಸುದ್ದಿಜಾಲವಿದು.

    ದೂರವಾಣಿ ಕದ್ದಾಲಿಕೆಯು ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆಯ ಕಾರಣಗಳಿಗೆ ಹಾಗೂ ಗಂಭೀರ ಅಪರಾಧಗಳನ್ನು ತಡೆಯಲು ಎಲ್ಲಾ ಸರ್ಕಾರಗಳು ಈ ಚೇಷ್ಟೆಯನ್ನು ನಡೆಸುತ್ತವೆ. 2011ರಲ್ಲಿ ರಿಲೆಯನ್ಸ್ ಕಮ್ಯುನಿಕೇಷನ್ ರವರು ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿ ಯುಪಿಎ ಸರ್ಕಾರದ ಅವಧಿಯಲ್ಲಿ 2006 ರಿಂದ 2011 ರೊಳಗೆ 1.5 ಲಕ್ಷ ಮೊಬೈಲ್ ಟ್ಯಾಪ್ ಮಾಡಲಾಗಿತ್ತು ಎಂದು ತಿಳಿಸಿತ್ತು. ಕೇವಲ ಒಂದು ಟೆಲಿಕಾಂ ಸೇವೆ ನೀಡುವ ಸಂಸ್ಥೆಯಲ್ಲಿ ಈ ಪಾಡಾಗಿದ್ದರೆ ಇತರ ಸಂಸ್ಥೆಗಳ ಲೆಕ್ಕ ಹಾಕಿದರೆ ವರ್ಷಕ್ಕೆ ಒಂದು ಲಕ್ಷ ಫೋನ್ ಗಳ ಕದ್ದಾಲಿಕೆ ನಡೆಯುತ್ತಿತ್ತು ಎಂದು ಅಂದಾಜಿಸಲಾಗಿದೆ.

    ಪ್ರಸಕ್ತ ಪ್ರಕರಣದಲ್ಲಿ ತನಿಖೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಸಂಸ್ಥೆಗಳು ಯಾವುದೆ ಆಧಾರವನ್ನು ತಮ್ಮ ಆರೋಪವನ್ನು ಸಮರ್ಥಿಸಿಕೊಳ್ಳಲು ಒದಗಿಸಿಲ್ಲ. ಅವರು ಇಂತಹ ಮೊಬೈಲ್ ನಲ್ಲಿ ಪೆಗಾಸಿಸ್ ಅಳವಡಿಸಲಾಗಿದೆ ಎಂದು ಮಾತ್ರ ಹೇಳಿದ್ದಾರೆ ಆದರ ಸತ್ಯಾಸತ್ಯಗಳ ಬಗ್ಗೆ ಅವರಿಗೆೇ ಗೊಂದಲವಿದೆ.

    ಕಳೆದ 7 ವರ್ಷದಿಂದ ಮೋದಿ ಸರ್ಕಾರಕ್ಕೆ ಮಸಿ ಬಳೆಯಲು ಅನೇಕ ಪಿತೂರಿಯನ್ನು ಮೋದಿ ವಿರೋಧಿಗಳು ಒಂದಲ್ಲಾ ಒಂದು ರೀತಿಯಲ್ಲಿ ನಡೆಸುತ್ತಲೆ ಬಂದಿವೆ. ರೈತ ಹೋರಾಟದ ಸಂದರ್ಭದಲ್ಲಿ ಹೊರ ಬಂದ ಟೂಲ್ ಕಿಟ್ ಹಾಗೆಯೇ ಕಾಂಗ್ರೆಸ್ ಪಾರ್ಟಿಯು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೂಡಿದ್ದ ಷಡ್ಯಂತರದ ಟೂಲ್ ಕಿಟ್ ಗಳು ಸಾಕ್ಷಿಯಾಗಿವೆ. ಆದರೆ ಪ್ರತಿ ಬಾರಿಯು ಈ ಶಕ್ತಿಗಳು ಮೋದಿ ಸರ್ಕಾರಕ್ಕೆ ಮಸಿ ಬಳೆಯುವುದರಲ್ಲಿ ವಿಫಲವಾಗಿ ಮುಖಭಂಗಿತರಾಗುತ್ತಿದ್ದಾರೆ.

    ಈಗ ಪೆಗಾಸಿಸ್ ವಿವಾದವನ್ನು ಹುಟ್ಟು ಹಾಕಿರುವ ಆಮ್ನೆಸ್ಟಿಯವರೇ ಯಾವ ಯಾವ ಮೊಬೈಲ್ ಗೆ ಪೆಗಾಸಿಸ್ ಅಳವಡಿಸಿದೆ ಎಂದು ಪಟ್ಟಿಯನ್ನು ಕೊಡುತ್ತಿರುವುದು. ಅವರು ಕೊಟ್ಟ ಸಂಖ್ಯೆಯನ್ನು ಒಪ್ಪಿಕೊಳ್ಳಬೇಕು. ಇವರ ತನಿಖಾ ವರದಿಯ ವಿಶ್ವಾಸಾರ್ಹತೆ ತಿಳಿಯಲು ಸಾಧ್ಯವಿಲ್ಲವಾಗಿದೆ.

    ಡ್ಯಾನಿಶ್ ಸಿದ್ದಕ್ಕಿ ಸಾವಿನ ನಂತರ ಯಾವ ಎಡಚರ ಗ್ಯಾಂಗ್ ಬಲಪಂಥೀಯರ ಮೇಲೆ ಸಾಮಾಜಿಕ ತಾಣದಲ್ಲಿ ಹರಿಹಾಯ್ದ ಶಕ್ತಿಗಳೇ ಇಂದು ಮತ್ತೆ ದಿ ವೈರ್ ನಲ್ಲಿ ಮಾಡಿರುವ ಆರೋಪವನ್ನು ಬಲವಾಗಿ ಸರ್ಮರ್ಥಿಸಿಕೊಂಡು ಮೋದಿ ಸರ್ಕಾರದ ವಿರುದ್ದ ವಿಷ ಕಾರುತ್ತಿದ್ದಾರೆ.

    ಪತ್ರಕರ್ತೆ ಸಾಗರೀಕ ಘೋಷ್ ಈ ಕಪೋಲಕಲ್ಪಿತ ಆರೋಪವನ್ನು 1988ರಲ್ಲಿ ರಾಮಕೃಷ್ಣ ಹೆಗ್ಡೆ ಕೈಗೊಂಡಿದ್ದ ದೂರವಾಣಿ ಕದ್ದಾಲಿಕೆಗೆ ಹೋಲಿಸಿ ಪ್ರಧಾನಿಯವರು ರಾಜಿನಾಮೆ ಕೊಡಬೇಕು ಎಂದು ಫರ್ಮಾನ್ ಹೊರಡಿಸುತ್ತಾರೆ.

    ಸರ್ಕಾರ ಈ ಎಲ್ಲಾ ಆರೋಪಗಳನ್ನು ಬಲವಾಗಿ ತಳ್ಳಿ ಹಾಕಿದೆ. ಸರ್ಕಾರದ ಪರಿಸ್ಥಿತಿಯು ಇಂತಹ ಸಂದರ್ಭದಲ್ಲಿ ಸೂಕ್ಷ್ಮವಾಗುತ್ತದೆ. ಕಣ್ಗಾವಲು ದೇಶದ ಭದ್ರತೆ ದೃಷ್ಟಿಯಿಂದ ನಡದೆ ನಡೆಯುತ್ತಿರುತ್ತದೆ ಅದು ಕಾನೂನಿನ ಪರಿಮಿತಿಯಲ್ಲಿ ನಡೆಯುವುದು. ಯಾವ ಸರ್ಕಾರವು ಅದನ್ನು ಅಧಿಕೃತವಾಗಿ ಒಪ್ಪಿಕೊಳ್ಳುವುದಿಲ್ಲ.

    ಮಾಡಿರುವ ಆರೋಪಗಳು ಬೆಂಬಲಿತವಾಗಿಲ್ಲ ಮತ್ತು ಯಾವುದೇ ಪಾರದರ್ಶಕತೆ ಇಲ್ಲದಿರುವುದರಿಂದ, ವಿರೋಧ ಪಕ್ಷಗಳು ಮತ್ತು ಮೋದಿಯ ವಿರೋಧಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅನಿಶ್ಚಿತತೆ ಹಾಗೂ ಸರ್ಕಾರದ ಸಂದಿಗ್ದತೆಯನ್ನು ಬಳಸಿಕೊಳ್ಳುತ್ತಿದ್ದಾರೆ.

    ವಿರೋಧ ಪಕ್ಷಗಳು ಪೆಗಾಸಿಸ್ ಕಣ್ಗಾವಲು ಕುರಿತು ಪ್ರಶ್ನೆ ಕೇವಲ ಸರ್ಕಾರಕ್ಕೆ ಮಾತ್ರವಲ್ಲ ಇದರ ಬಗ್ಗೆ ಆರೋಪ ಮಾಡಿರುವ ಸಂಸ್ಥೆಗಳನ್ನು ಉತ್ತರ ಕೇಳಬೇಕು. ಆದರೆ ಈ ಎಲ್ಲಾ ಶಕ್ತಿಗಳಿಗೆ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸುವುದು ಮುಖ್ಯವಾಗಿದೆಯೇ ಹೊರತು ಸತ್ಯ ಹೊರ ಬರುವುದಲ್ಲ.

    ಕೇಂದ್ರ ಸರ್ಕಾರವನ್ನು ಅಭದ್ರಗೊಳಿಸುವ ಷಡ್ಯಂತರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಶಕ್ತಿಗಳಿಂದ ಅನೂಚಾನೂಚವಾಗಿ ಕಳೆದ 7 ವರ್ಷದಿಂದ ಒಂದಲ್ಲಾ ಒಂದು ವಿಷಯದಲ್ಲಿ ನಡೆದುಕೊಂಡು ಬಂದಿದೆ ಈಗ ಆ ಪಟ್ಚಿಗೆ “ಪ್ರಾಜೆಕ್ಟ್ ಪೆಗಾಸಿಸ್” ಕಣ್ಗಾವಲು ತನಿಖೆಯು ಸೇರ್ಪಡೆಯಾಗಿದೆ.

    ಪ್ರಕಾಶ್ ಶೇಷರಾಘವಾಚಾರ್
    sprakashbjp@gmail.com

    Prakash Sesharaghavachar is a Joint Spokesperson of Karnataka BJP

    Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.

    LEAVE A REPLY

    Please enter your comment!
    Please enter your name here