Home ರಾಮನಗರ ಕಾದು ನೋಡಿ, ನವೆಂಬರ್ ವೇಳೆಗೆ ರಾಜ್ಯ ರಾಜಕೀಯದಲ್ಲಿ ಮಹತ್ವ ಬದಲಾವಣೆ: ಕುಮಾರಸ್ವಾಮಿ

ಕಾದು ನೋಡಿ, ನವೆಂಬರ್ ವೇಳೆಗೆ ರಾಜ್ಯ ರಾಜಕೀಯದಲ್ಲಿ ಮಹತ್ವ ಬದಲಾವಣೆ: ಕುಮಾರಸ್ವಾಮಿ

42
0

ರಾಮನಗರ:

ನವೆಂಬರ್ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಬಾರಿ ಬದಲಾವಣೆಗಳು ಆಗಲಿವೆ, ಕಾದು ನೋಡಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸ್ವಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಭೆ ನಡೆಸಿ ಮಾತನಾಡಿದ ಅವರು, ಬಹುಮತದ ಸರ್ಕಾರ ಬಂದಿದೆ ಎಂದು ಭಾವಿಸಬೇಡಿ. ಲೋಕಸಭಾ ಚುನಾವಣೆ ಬಳಿಕ ಏನು ಬೆಳವಣಿಗೆ ಆಗುತ್ತದೆ ಎಂದು ನೋಡೋಣ. ಈಗಿನ ರಾಜಕೀಯ ಬೆಳವಣಿಗೆ ಬಗ್ಗೆ ಯಾವುದೇ ಅಂಜಿಕೆ ಬೇಡ ಎಂದರು.

ಬಿಜೆಪಿಯವರು ಲೂಟಿ ಮಾಡಿದ ರೀತಿಯಲ್ಲೆ ಕಾಂಗ್ರೆಸ್ ನವರು ಲೂಟಿಗೆ ಇಳಿಯಲಿದ್ದಾರೆ ಅದರಲ್ಲೇನು ಹೊಸತಿಲ್ಲ, ಯಾರನ್ನು ಎಲ್ಲಿ ಹಿಡಿಯಬೇಕೆಂದು ನನಗೆ ಚೆನ್ನಾಗಿ ತಿಳಿದಿದೆ. ನಾನು ಹೋರಾಟ ಮಾಡಲು ಸಿದ್ದನಿದ್ದೇನೆ, ಯಾವುದೇ ಕಾರಣಕ್ಕೂ ಈ ಸರ್ಕಾರದ ಮಂತ್ರಿಗಳ ಬಳಿ ಕೈ ಚಾಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿ ಸೇರಿದಂತೆ ಯಾವುದೇ ಯೋಜನೆಯನ್ನು ಜಾರಿಗೆ ತರುವುದು ಸುಲಭವಲ್ಲ. ಈ ಹಿಂದೆ ಜಾರಿಯಲ್ಲಿರುವ ಕಾರ್ಯಕ್ರಮಗಳೇ ಮುಂದುವರಿಯುವ ಅನುಮಾನವಿದೆ. ಅವರ ಯೋಜನೆಗಳಿಗೆ 60 ರಿಂದ 70 ಸಾವಿರ ಕೋಟಿ ರೂ. ಬೇಕು. ಅವರು ಎಲ್ಲಿಂದ ಅನುದಾನ ತರುತ್ತಾರೆ.ಯಾವುದೇ ಕಾರಣಕ್ಕೂ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದರು.

ಜೆಡಿಎಸ್ ಈ ಬಾರಿ 60 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕಿತ್ತು. ಆದರೆ, ಕೆಲವರ ಪಿತೂರಿ ಮತ್ತು ಸುಳ್ಳು ಆರೋಪಗಳಿಂದ ಎರಡು ಮೂರು ಸಮಾಜದ ಮತಗಳು ನಮ್ಮ ಪಕ್ಷಕ್ಕೆ ಬರಲಿಲ್ಲ. ಜೆಡಿಎಸ್ ಬಿಜೆಪಿ ಜೊತೆ ಹೋಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು.

ಬಿಜೆಪಿ ರಾಷ್ಟ್ರೀಯ ನಾಯಕರು ಏನೇನು ಮಾಡಿದ್ದಾರೆ ಗೊತ್ತು, ನಮ್ಮನ್ನು ಮುಗಿಸಲು ಹೋಗಿ ಇದೀಗ ಅವರೇ ಮುಗಿದಿದ್ದಾರೆ. ನಮ್ಮ ಕುಟುಂಬ ಇದಕ್ಕಿಂತ ಹೆಚ್ಚಿನ ಆಘಾತವನ್ನು ಎದುರಿಸಿ ನಂತರ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೇವೆ. ದೇವರ ಹಾಗೂ ಜನರ ಅನುಗ್ರಹ ನಮ್ಮ ಪಕ್ಷದ ಮೇಲಿದ್ದು, ಸೋಲಿ ಗೆಲ್ಲಲಿ ಸಂಘಟನೆ ಮುಂದುವರೆಸಲಿದ್ದೇವೆ. ಮುಂದೆ ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here