ಕಾಫಿನಾಡು ಚಿಕ್ಕಮಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ ಎಐಟಿ(AIT)ಯ ವಿದ್ಯಾರ್ಥಿಯೋರ್ವ ಕಾಲೇಜಿನ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದೆ. ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ ಎಐಟಿ(AIT)ಯ ವಿದ್ಯಾರ್ಥಿಯೋರ್ವ ಕಾಲೇಜಿನ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದೆ.
A.I.T ಕಾಲೇಜಿನ ಹಾಸ್ಟೆಲ್ ರೂಮಿನಲ್ಲಿ ದ್ವೀತಿಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿಧ್ಯಾರ್ಥಿ ಕಿಶೋರ್ ನ ಶವ ಹಾಸ್ಟೆಲ್ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಠಡಿಯಲ್ಲಿ ಕೊಳೆತ ವಾಸನ ಬಂದು ಕಳೆದ ಶನಿವಾರ ರೂಮಿನ ಬಾಗಿಲು ತೆರೆದ ವೇಳೆ ಶವ ಪತ್ತೆಯಾಗಿದೆ.
ಮೃತ ಕಿಶೋರ್ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮೂಲದ ಈಶ ಯಮುನಾ ದಂಪತಿಯ ಪುತ್ರನಾಗಿದ್ದು, ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಮಾರ್ಕ್ಸ್ ತೆಗೆದುಕೊಂಡಿದ್ದ. ಚನ್ನರಾಯಪಟ್ಟಣಕ್ಕೆ ಹತ್ತಿರವಿರುವ ಚಿಕ್ಕಮಗಳೂರು ನಗರದ ಪ್ರತಿಷ್ಠಿತ A.I.T ಇಂಜಿನಿಯರಿಂಗ್ ಕಾಲೇಜಿನಲ್ಲಿ (A.I.T Engineering College) ಇಂಜಿನಿಯರಿಂಗ್ ಕೋರ್ಸ್ಗೆ ಸೀಟ್ ಕೂಡ ಸಿಕ್ಕಿತ್ತು. ವೃತ್ತಿಯಲ್ಲಿ ಆಟೋ ಚಾಲಕನಾದ ಈಶ ಬಡತನದ ಮಧ್ಯೆಯೂ ಮಗನ ವಿದ್ಯಾಭ್ಯಾಸಕ್ಕಾಗಿ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದ್ದರು. ನಿನ್ನೆ ಕಾಲೇಜು ಹಾಸ್ಟೆಲ್ನಿಂದ ಬಂದ ಕರೆಯಿಂದ ಈಶ ದಂಪತಿಯ ಬಾಳಿನಲ್ಲಿ ಬರಸಿಡಿಲಿನಂತೆ ಅಪ್ಪಳಿಸಿತು.
ಆಗಿದ್ದೇನು?: ಕಳೆದ ಶನಿವಾರ ಹಾಸ್ಟೆಲ್ ರೂಮಿನ ಒಳ ಹೋಗಿದ್ದ ಕಿಶೋರ್ ಸೋಮವಾರ ಮಧ್ಯಾಹ್ನ ಶವವಾಗಿ ಹಾಸ್ಟೆಲ್ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ.
ಪೋಷಕರು ಏನು ಹೇಳುತ್ತಾರೆ?: ಕಿಶೋರ್ ಮೈತುಂಬ ಸಾಲ ಮಾಡಿಕೊಂಡಿದ್ದ. ಇತರ ಸಹಪಾಠಿಗಳ ಜೊತೆಗೂ ಸಾಲ ಕೇಳಿದ್ದನಂತೆ, ವಿದ್ಯಾರ್ಥಿಗಳಿಗೆ ಸಾಲ ಯಾಕೆ ಬೇಕು, ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಒಳಗೆ ಏನು ನಡೆಯುತ್ತಿದೆ, ಅಕ್ರಮ ಏನಾದರೂ ನಡೆಯುತ್ತಿದೆಯೇ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಕಾಲೇಜಿನ ಮೇಲೆ ಸಾಕಷ್ಟು ಆರೋಪ ಬಂದಿತ್ತು, ನಾವು ಈ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಜಯರಾಮ್ ಹೇಳುತ್ತಾರೆ.
ಡ್ರಗ್ ಮಾಫಿಯಾ ಸುತ್ತ ಅನುಮಾನದ ಹುತ್ತ: ಕಿಶೋರ್ ಸಾವಿನ ಸುತ್ತ ನೂರೆಂಟು ಅನುಮಾನಗಳು ಎದ್ದಿದ್ದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ನಲ್ಲಿ ಡ್ರಗ್ಸ್ ಮಾಫಿಯಾ, ಮೀಟರ್ ಬಡ್ಡಿ ದಂಧೆಗೆ ಕಿಶೋರ್ ಬಲಿಯಾಗಿದ್ದಾನಾ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ಕ್ಯಾಂಪಸ್ ಒಳಗೆ ಡ್ರಗ್ಸ್, ಬಡ್ಡಿ ಮಾಫಿಯಾ ಇತ್ಯಾದಿಗಳು ಅವ್ಯಾಹತವಾಗಿ ನಡೆಯುತ್ತಿವೆ ಎಂಬ ದೂರುಗಳು ಬರುತ್ತಿದ್ದು, ಅದಕ್ಕೆ ಕಿಶೋರ್ ಬಲಿಯಾದನಾ ಎಂಬ ಪ್ರಶ್ನೆ ಕಾಡತೊಡಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಮಗಳೂರು ನಗರ ಪೊಲೀಸರು ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿ ಸಾವಿಗೆ ನ್ಯಾಯ ಕೊಡಿಸಬೇಕೆಂಬುದು ಪೋಷಕರ ಆಗ್ರಹವಾಗಿದೆ.