Home Uncategorized ಸಿಲಿಂಡರ್ ಸ್ಫೋಟ: ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಂಭೀರ ಗಾಯ

ಸಿಲಿಂಡರ್ ಸ್ಫೋಟ: ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಂಭೀರ ಗಾಯ

9
0

ಅಡುಗೆ ಮನೆಯಲ್ಲಿದ್ದ ಅಡುಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ಗಾಂಧಿನಗರ ಪ್ರದೇಶದ ಸುಭಾಷ್ ಗಲ್ಲಿಯಲ್ಲಿ ಶನಿವಾರ ನಡೆದಿದೆ. ಬೆಳಗಾವಿ: ಅಡುಗೆ ಮನೆಯಲ್ಲಿದ್ದ ಅಡುಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ಗಾಂಧಿನಗರ ಪ್ರದೇಶದ ಸುಭಾಷ್ ಗಲ್ಲಿಯಲ್ಲಿ ಶನಿವಾರ ನಡೆದಿದೆ.

ಗಾಯಗೊಂಡವರನ್ನು ಮಂಜುನಾಥ ನರಸಪ್ಪ ಅಥಣಿ (42), ಅವರ ಪತ್ನಿ ಲಕ್ಷ್ಮಿ (36), ಪುತ್ರಿ ವೈಷ್ಣವಿ (13), ಮಗ ಸಾಯಿಪ್ರಸಾದ್ (10) ಎಂದು ಗುರ್ತಿಸಲಾಗಿದೆ. ನಾಲ್ವರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಮಂಜುನಾಥ್ ಕೆಎಸ್ಆರ್’ಟಿಸಿ ಬಸ್ ಚಾಲಕರಾಗಿದ್ದು, ಕುಟುಂಬ ಸಮೇತ ಸುಭಾಷ್ ಗಲ್ಲಿಯಲ್ಲಿರುವ ಕಟ್ಟಡವೊಂದರಲ್ಲಿ ಮೊದಲ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಪತಿ ಕರ್ತವ್ಯ ನಿಮಿತ್ತ ಬೆಳಗ್ಗೆಯೇ ಹೊರಡುತ್ತಿದ್ದ ವೇಳೆ ಪತ್ನಿ ಲಕ್ಷ್ಮಿ ಅವರು, ಚಹಾ ತಯಾರಿಸಲು ಲೈಟರ್‌ ಹಚ್ಚಿದ್ದಾರೆ. ಈ ವೇಳೆ ಸಿಲಿಂಡರ್‌ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಬಹುತೇಕ ವಸ್ತುಗಳು ಚಲ್ಲಾಪಿಲ್ಲಿಯಾಗಿ, ಸುಟ್ಟು ಕರಕಲಾಗಿವೆ.

ಬೆಳಗ್ಗೆ 6 ಗಂಟೆಗೆ ಸ್ಫೋಟದ ದೊಡ್ಡ ಶಬ್ದ ಕೇಳಿಸಿತು. ಲಕ್ಷ್ಮೀ ಅವರು ಮನೆಯಿಂದ ಹೊರ ಬಂದಾಗ ಅವ ಬಟ್ಟೆ ಸುಟ್ಟು ಹೋಗಿತ್ತು. ಮಂಜುನಾಥ್, ಲಕ್ಷ್ಮೀ ಹಾಗೂ ಅವರ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಆ್ಯಂಬುಲೆನ್ಸ್’ಗೆ ಕರೆ ಮಾಡಿ ನಾಲ್ವರನ್ನೂ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಯಿತು. ಲಕ್ಷ್ಮೀ ಅವರಿಗೆ ಶೇ.75ರಷ್ಟು ಸುಟ್ಟ ಗಾಯಗಳಾಗಿದ್ದು, ಮಂಜುನಾಥ್ ಹಾಗೂ ಮಕ್ಕಳಿಗೆ ಶೇ.40ರಷ್ಟು ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಘಟನೆ ಬಳಿಕ ಗ್ಯಾಸ್ ಏಜೆನ್ಸಿ ವಿರುದ್ಧ ಸ್ಥಳೀಯ ನಿವಾಸಿಗಳು ಕಿಡಿಕಾರಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಗ್ಯಾಸ್ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಅಲ್ಲದೆ, ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಕ್ಕೆ ಸಹಾಯ ಮಾಡುವಂತೆ ಸರ್ಕಾರ ಮತ್ತು ಸಾರಿಗೆ ಇಲಾಖೆ ಬಳಿ ಮನವಿ ಮಾಡಿಕೊಂಡಿದ್ದಾರೆ.

ನಿನ್ನೆಯಷ್ಟೇ ರೀಫಿಲ್ ಮಾಡಿದ ಗ್ಯಾಸ್ ಸಿಲಿಂಡರ್‌ಗಳು ಬಂದಿದ್ದವು, ಸಿಲಿಂಡರ್ ಅನ್ನು ಮನೆಯಲ್ಲಿಟ್ಟಾಗ ಸೀಲ್‌ನಿಂದ ಗ್ಯಾಸ್ ಸೋರಿಕೆಯಾಗಿ ಇಡೀ ಕೋಣೆಯನ್ನು ಆವರಿಸಿರಬಹುದು. ಸಿಲಿಂಡರ್ ಸ್ಫೋಟವು ಎಷ್ಟು ತೀವ್ರವಾಗಿತ್ತು ಎಂದರೆ ಮನೆಯ ಮುಂಭಾಗದ ಕಿಟಕಿಯ ಗಾಜುಗಳೂ ಕೂಡ ಒಡೆದುಹೋಗಿತ್ತು ಎಂದು ನೆರೆಹೊರೆಯವರಾದ ಪ್ರದೀಪ್ ಪಾಟೀಲ್ ಹೇಳಿದ್ದಾರೆ.

ಈ ನಡುವೆ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ ಶಿವಕುಮಾರ್ ಅವರು ಮಾತನಾಡಿ, “ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿಲ್ಲ, ಸೋರಿಕೆಯಿಂದ ಸಂಭವಿಸಿದ್ದರೆ, ರೆಗ್ಯುಲೇಟರ್ ಸುಟ್ಟುಹೋಗುತ್ತಿತ್ತು, ಸಿಲಿಂಡರ್ ಸ್ಫೋಟಗೊಂಡಿದ್ದರೆ ಇಡೀ ಕಟ್ಟಡಕ್ಕೆ ಹಾನಿಯಾಗುತ್ತಿತ್ತು ಎಂದು ಹೇಳಿದ್ದಾರೆ.

ಘಟನೆ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here