ಸೂತಕ ಸಂಪ್ರದಾಯ ಆಚರಣೆಯಿಂದಾಗಿ ಇತ್ತೀಚೆಗಷ್ಟೇ ಮಲ್ಲೇನಹಳ್ಳಿ ಕುಗ್ರಾಮದಲ್ಲಿ ನವಜಾತ ಶಿಶುವೊಂದು ಸಾವನ್ನಪ್ಪಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜೆಎಂಎಫ್‌ಸಿ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ನೇತೃತ್ವದ ತಂಡ ಗೌರಿಪುರ ಮತ್ತು ನಲ್ಲೂರು ಗ್ರಾಮಗಳಲ್ಲಿ ತಾತ್ಕಾಲಿಕ ಟೆಂಟ್ ನಲ್ಲಿ ನೆಲೆಸಿದ್ದ ಬಾಣಂತಿ ಹಾಗೂ ಮಗುವನ್ನು ರಕ್ಷಣೆ ಮಾಡಿದ್ದಾರೆ. ತುಮಕೂರು: ಸೂತಕ ಸಂಪ್ರದಾಯ ಆಚರಣೆಯಿಂದಾಗಿ ಇತ್ತೀಚೆಗಷ್ಟೇ ಮಲ್ಲೇನಹಳ್ಳಿ ಕುಗ್ರಾಮದಲ್ಲಿ ನವಜಾತ ಶಿಶುವೊಂದು ಸಾವನ್ನಪ್ಪಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜೆಎಂಎಫ್‌ಸಿ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ನೇತೃತ್ವದ ತಂಡ ಗೌರಿಪುರ ಮತ್ತು ನಲ್ಲೂರು ಗ್ರಾಮಗಳಲ್ಲಿ ತಾತ್ಕಾಲಿಕ ಟೆಂಟ್ ನಲ್ಲಿ ನೆಲೆಸಿದ್ದ ಬಾಣಂತಿ ಹಾಗೂ ಮಗುವನ್ನು ರಕ್ಷಣೆ ಮಾಡಿದ್ದಾರೆ.
ಮಗು ಹುಟ್ಟಿದ ಕೂಡಲೇ ಸೂತಕದ ಸಂಪ್ರದಾಯವನ್ನು ಹಲವೆಡೆ ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಅವರನ್ನು ಮನೆಯಲ್ಲಿ ಇಟ್ಟುಕೊಂಡರೆ, ಮನೆಯಲ್ಲಿ ಹಾವು, ಚೇಳು ಬರುತ್ತವೆ ಎಂಬ ಮೂಢ ನಂಬಿಕೆಗಳಿವೆ. ಈ ಕಾರಣದಿಂದಲೇ ಸೂತಕದ ನೆಪದಲ್ಲಿ ಅವರನ್ನು ಹೊರಗಿಡಲು ಪುಟ್ಟ ಗುಡಿಸಲು ಸಿದ್ಧಪಡಿಸುತ್ತಾರೆ. ಆ ಚಿಕ್ಕ ಗುಡಿಸಿಲಿನಲ್ಲಿ ಬಾಣಂತಿ ಮತ್ತು ಆಕೆಯ ಮಗು ಮಾತ್ರ ಇರಿಸಲಾಗುತ್ತದೆ.
ಸುಮಾರು ಎರಡು-3 ತಿಂಗಳ ಕಾಲ ಊರಿನಿಂದ ಅವರನ್ನು ಹೊರಗೆ ಇಡಲಾಗುತ್ತದೆ. ಎರಡು-ಮೂರು ತಿಂಗಳು ಮುಗಿದ ಬಳಿಕವಷ್ಟೇ ತಾಯಿ ಮಗುವನ್ನು ಮನೆಯೊಳಗೆ ಸೇರಿಸುವ ಪದ್ಧತಿ ಅನುಸರಿಸಿಕೊಂಡು ಬರುತ್ತಿದ್ದಾರೆ.
ಗೌರಿಪುರ ಮತ್ತು ನಲ್ಲೂರು ಗ್ರಾಮಗಳಲ್ಲಿ ತಾತ್ಕಾಲಿಕ ಟೆಂಟ್‌ನಲ್ಲಿ ತಾಯಿ ಹಾಗೂ ಮಗು ಇರುವ ವಿಚಾರ ತಿಳಿದ ಜೆಎಂಎಫ್‌ಸಿ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ನೇತೃತ್ವದ ತಂಡ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ತಾಯಿ ಹಾಗೂ ಮಗುವನ್ನು ರಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ವೈದ್ಯರು ಮಗು ಹಾಗೂ ತಾಯಿಯ ಆರೋಗ್ಯವನ್ನು ಪರಿಶೀಲನೆ ನಡೆಸಿದರು. ಬಳಿಕ ಸಂಬಂಧಿಕರಿಗೆ ಮನವರಿಕೆ ಮಾಡಿ, ಶಿಶು ಹಾಗೂ ತಾಯಿಯನ್ನು ಮನೆಗೆ ಕಳುಹಿಸಿದರು.