ಬೆಂಗಳೂರು: ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆ ಅವಕಾಶಗಳು ಮತ್ತು ಭವಿಷ್ಯದ ವಿಸ್ತರಣೆಯನ್ನು ಪರಿಶೀಲಿಸಲು ಜಪಾನ್ನ ಅಜಿನೊಮೊಟೊ ಕಂಪನಿ ಆಸಕ್ತಿ ವ್ಯಕ್ತಪಡಿಸಿದೆ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಮಂಗಳವಾರ ತಿಳಿಸಿದ್ದಾರೆ.
ಕಂಪನಿಯ ಬಯೋಫಾರ್ಮಾ ಸೊಲ್ಯೂಷನ್ ಗ್ರೂಪ್ ಮುಖ್ಯಸ್ಥ ಟೊಮೊ ಟಕಾಗಿ ಮತ್ತು ಬಯಾಲಜಿಕ್ಸ್ ಬಿಸಿನೆಸ್ ಯುನಿಟ್ ಮುಖ್ಯಸ್ಥ ಯಾರೋನ್ ಆರ್. ಸಿಲ್ಬರ್ಬರ್ಗ್ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಪಾಟೀಲ್ ತಿಳಿಸಿದ್ದಾರೆ.

ಕೌಶಲ್ಯ ಹೊಂದಿರುವ ಉದ್ಯೋಗಿಗಳ ಲಭ್ಯತೆ, ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಂಪರ್ಕ, ಭಾರತದಲ್ಲಿನ ಮಾನವ ಸಂಪನ್ಮೂಲ ಪದ್ಧತಿಗಳು ಹಾಗೂ ಕರ್ನಾಟಕದಲ್ಲಿ ಲಭ್ಯವಿರುವ ಹೂಡಿಕೆ ಪ್ರೋತ್ಸಾಹಗಳ ಕುರಿತು ಚರ್ಚೆ ನಡೆದಿದೆ ಎಂದು ಸಚಿವರು ಹೇಳಿದ್ದಾರೆ.
ಪ್ರಸ್ತಾವಿತ ಹೂಡಿಕೆಗೆ ಸರ್ಕಾರದ ಸಂಪೂರ್ಣ ಬೆಂಬಲ ನೀಡುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದು, ಕಂಪನಿಯ ಪ್ರಮುಖರನ್ನು 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಿರುವುದಾಗಿ ಪಾಟೀಲ್ ತಿಳಿಸಿದ್ದಾರೆ.
