Home ರಾಜಕೀಯ ಅಗತ್ಯಬಿದ್ದರೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಅಗತ್ಯಬಿದ್ದರೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ

44
0

ಬೆಂಗಳೂರು, ಜುಲೈ 13: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕರ್ನಾಟಕ ಬಿಟ್ಟು ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯಬಿದ್ದರೆ ಖಂಡಿತವಾಗಿಯೂ ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಡಾII ಬಾಬು ಜಗಜೀವನ ರಾಮ್ ಸಂಶೋಧನಾ ಸಂಸ್ಥೆ ವತಿಯಿಂದ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಭಾರತದ ಮಾಜಿ ಉಪ ಪ್ರಧಾನಿ ಡಾII ಬಾಬು ಜಗಜೀವನ ರಾಮ್ ಭವನದ ಉದ್ಘಾಟಿಸಿ ಮಾತನಾಡಿದರು.

ನಮಗೆ ಸಂಪ್ರದಾಯವಾದಿ ಧೋರಣೆಗಳಿಲ್ಲ ಬ್ಯಾಂಕ್ ಗಳಲ್ಲಿ, ಕೆ.ಎಸ್. ಎಫ್ .ಸಿ, ಉದ್ಯಮಿಗಳಿಗೆ 10 ಕೋಟಿವರೆಗೆ 4% ಬಡ್ಡಿಗೆ ಸಾಲ ದೊರೆಯಬೇಕೆಂಬ ಸೌಲಭ್ಯ ಒದಗಿಸಿದ್ದು ನಮ್ಮ ಸರ್ಕಾರ. ಎಸ್.ಸಿ.ಎಸ್ ಪಿ /ಟಿ. ಎಸ್.ಪಿ ಕಾಯ್ದೆಯಡಿ .7(ಡಿ) ಕೈಬಿಡಲು ಸಲಹೆ ಬಂದ ಮೇರೆಗೆ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ಕೈಬಿಡಲಾಗಿದೆ. ಇನ್ನೂ ಬದಲಾವಣೆಗಳು ಅಗತ್ಯವಿದ್ದರೆ ಮಾಡುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿಗಳು ನಮಗೆ ಯಾವುದೇ ಸಂಪ್ರದಾಯವಾದಿ ಧೋರಣೆಗಳಿಲ್ಲ ಎಂದರು. ಪರಿಶಿಷ್ಟರ, ಸಾಮಾಜಿಕ ನ್ಯಾಯದ ವಿರುದ್ಧವಾದ ನಿಲುವು ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭ
ದಲಿತ ಸಂಘಟನೆಗಳು 70 ರ ದಶಕದಲ್ಲಿ ಸಾರಾಯಿ ಅಂಗಡಿಗಳು ಬೇಡ, ವಸತಿ ಶಾಲೆಗಳು ಬೇಕು ಎಂದು ಬೇಡಿಕೆ ಸಲ್ಲಿಸಿದ್ದರಿಂದ ವಸತಿ ಶಾಲೆಗಳನ್ನು ಪ್ರಾರಂಭ ಮಾಡಲಾಗಿದೆ.94-95 ರಲ್ಲಿ ಹಣಕಾಸು ಸಚಿವರಾಗಿದ್ದಾಗ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದ್ದು ತಾವೇ ಎಂದು ಸ್ಮರಿಸಿದರು.

ಹೋಬಳಿಗೊಂದು ವಸತಿ ಶಾಲೆ ಇಂದು 821 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಹೋಬಳಿಗೊಂದು ವಸತಿ ಶಾಲೆ ತೆರೆಯುವ ನಿರ್ಧಾರ ಸರ್ಕಾರ ಮಾಡಿದೆ. 2024-25 ರಲ್ಲಿ 20 ವಸತಿ ಶಾಲೆಗಳನ್ನು ತೆರೆಯಲಾಗುವುದು. ಒಟ್ಟು 905 ವಸತಿ ಶಾಲೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸಲಿವೆ. ವಸತಿ ಶಾಲೆಗಳಲ್ಲಿ 211000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ದಲಿತರಿಗೆ ಸಾಮಾಜಿಕ ಆರ್ಥಿಕ ಶಕ್ತಿ ಬರಬೇಕು ಕ್ರೈಸ್ ವಸತಿ ನಿಲಯದ ವಿದ್ಯಾರ್ಥಿ 625 ಕ್ಕೇ 625 ಅಂಕಗಳನ್ನು ಗಳಿಸಿದ್ದನ್ನು ಸಿಎಂ ಸ್ಮರಿಸಿದರು. ದಲಿತರಿಗೆ ಸಾಮಾಜಿಕ ಆರ್ಥಿಕ ಶಕ್ತಿ ಬರಬೇಕು. ಆಗ ಮಾತ್ರ ಅವರು ಮುಂಚೂಣಿಗೆ ಬರಲು ಸಾಧ್ಯವಾಗುತ್ತದೆ. ಬಸವಣ್ಣ, ಬಾಬು ಜಗಜೀವನ್ ರಾಂ ಅವರು ಕಂಡಿದ್ದ ಕನಸು ನನಸಾಗಲು ಆರ್ಥಿಕ ಸಾಮಾಜಿಕ ಶಕ್ತಿ ಬರಬೇಕು ಎಲ್ಲರೂ ವಿದ್ಯಾವಂತರಾಗಬೇಕು. ಶಿಕ್ಷಣ, ಸಂಘಟನೆ ಹೋರಾಟಕ್ಕೆ ಕರೆ ಕೊಟ್ಟಿದ್ದ ಅಂಬೇಡ್ಕರ್, ಜಗಜೀವನ್ ರಾಂ ಅವರು ಜಾತಿ ವಿನಾಶವಾಗಬೇಕು.ಜಾತಿ ವಿನಾಶವಾಗದಿದ್ದರೆ ಸಮಾನತೆ ಬರುವುದಿಲ್ಲ ಎಂದಿದ್ದರು. ಹಂತ ಹಂತವಾಗಿ ಇದನ್ನು ನಾವು ಮಾಡಬೇಕು. ಮಾಡದೆ ಇರುವವರನ್ನು ಪ್ರಶ್ನಿಸುವ ನೈತಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಸಮ ಸಮಾಜ ನಿರ್ಮಾಣ ಮಾಡಬೇಕು ಸಂವಿಧಾನದ ವಿರುದ್ಧವಾಗಿರುವರನ್ನು ಪ್ರಶ್ನಿಸಬೇಕು. ಎಲ್ಲಾ ವ್ಯವಸ್ಥೆಗಳಲ್ಲಿ ಎಲ್ಲಾ ಜನಾಂಗದವರು ಬರಬೇಕು. ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುವ ಕೆಲಸ ನಾವು ಮಾಡುತ್ತೇವೆ. ಬಾಬು ಜಗಜೀವನ್ ರಾಂ ಸಂಶೋಧನಾ ಸಂಸ್ಥೆ ವತಿಯಿಂದ ಬೇರೆ ಬೇರೆ ಕೆಲಸಗಳು ಕೂಡ ಆಗಬೇಕು. ಪರಿಶಿಷ್ಟ ಜಾತಿಗೆ ಸೇರಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಬೇಕು. ವಸತಿ ಸೌಲಭ್ಯವನ್ನೂ ಕಲ್ಪಿಸಿದರೆ ಅನುಕೂಲವಾಗುತ್ತದೆ. ಬಾಬು ಜಗಜೀವನ್ ರಾಮ್ ಅವರ ದೂರದೃಷ್ಟಿಯಂತೆ ಸಂಸ್ಥೆಯ ಸದುಪಯೋಗವಾಗಬೇಕು. ಸಮ ಸಮಾಜ ನಿರ್ಮಾಣ ಮಾಡುವತ್ತ ನಾವು ಹೆಜ್ಜೆ ಇಡಬೇಕು ಎಂದರು.

ಪರಿಹಾರ ಕಂಡುಕೊಳ್ಳಲು ಪ್ರಯತ್ನ ಸಂವಿಧಾನವನ್ನು ಅರಿಯಲು ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸಲಾಗುತ್ತಿದೆ. ಇತಿಹಾಸವನ್ನು ಎಲ್ಲರೂ ಅರಿತು ಪರಿಹಾರಗಳನ್ನು ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದರು.

ಒಳಮೀಸಲಾತಿ ಬಗ್ಗೆ ಕೇಂದ್ರಕೆ ಶಿಫಾರಸ್ಸು
ನಮ್ಮ ಸರ್ಕಾರ ಒಳಮೀಸಲಾತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯ ಮಾಡಲಾಗುವುದು ಎಂದರು. ಈ ಭವ್ಯ ಭವನ ಎಲ್ಲರಿಗೂ ಸದುಪಯೋಗವಾಗಲಿ. ಅದಕ್ಕೆ ಅಗತ್ಯವಿರುವ ನೆರವನ್ನು ಸರ್ಕಾರ ನೀಡಲಿದೆ ಎಂದರು.

ಹೆಮ್ಮೆಯ ಸಂಗತಿ ಭವನದ ನಿರ್ಮಾಣಕ್ಕೆ ಮಾಜಿ ಸಚಿವರಾದ ಆಂಜನೇಯ ಅವರು ಪ್ರಮುಖ ಕಾರಣಕರ್ತರು.ಇಂತಹ ಬೃಹತ್‌ ಸಂಶೋಧನಾ ಭವನವನ್ನು 5 ಎಕರೆ ಪ್ರರ್ದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಜಗಜೀವನರಾಂ ಹೆಸರಿನಲ್ಲಿ ಬಹುಶಃ ದೇಶದಲ್ಲಿಯೇ ಇಂತಹ ಭವನ ನಿರ್ಮಾಣವಾಗಿರುವುದು ಇದೇ ಮೊದಲು. ಇದು ಹೆಮ್ಮೆಯ ವಿಷಯ ಎಂದರಲ್ಲದೆ ಇದರ ನಿರ್ವಹಣೆ ಮತ್ತು ಸದುಪಯೋಗವಾಗಬೇಕಿದೆ. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದುವೇ ನಾವು ಬಾಬು ಜಗಜೀವನ ರಾಂ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ, ಅವರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬಲು, ಅವರ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನವನ್ನು ಖರ್ಚು ಮಾಡಲು ನಾವು ಹಿಂದಿನ ಬಾರಿ ಅಧಿಕಾರದಲ್ಲಿದ್ದಾಗ ಕಾಯ್ದೆ ರೂಪಿಸಿದ್ದೆವು. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಟ್ಟು ಜನಸಂಖ್ಯೆ ಶೇ.24.01 ರಷ್ಟಿದೆ. ಈ ವರ್ಷ ಬಜೆಟ್‌ನಲ್ಲಿ ಅಭಿವೃದ್ಧಿಗಾಗಿ 1.60 ಲಕ್ಷ ಕೋಟಿ ಅನುದಾನವನ್ನು ಒದಗಿಸಿದ್ದು, ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 39,121 ಕೋಟಿ ಹಣವನ್ನು ಒದಗಿಸಿದ್ದೇವೆ. ಈ ಕುರಿತು ಕಾಯ್ದೆ ರಚಿಸದಿದ್ದರೆ, ಇಷ್ಟು ದೊಡ್ಡ ಅನುದಾನವನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ ಎಂದರು.

ಪ್ರಗತಿದಾಯಕವಾದ ಕಾನೂನು ಈ ಕಾಯ್ದೆ ಮಾಡಿರುವುದರಿಂದ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡಲು ಸಾಧ್ಯವಾಗಿದೆ. ಇಡೀ ದೇಶದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲಿ ಮಾತ್ರ ಈ ರೀತಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಒದಗಿಸುವ ವ್ಯವಸ್ಥೆಯಿದೆ. ಆದರೆ ಇಷ್ಟು ಪ್ರಗತಿದಾಯಕವಾದ ಕಾನೂನು ಬೇರೆಲ್ಲಿಯೂ ಇಲ್ಲ ಎಂದರು.

ಕೇಂದ್ರದಲ್ಲಿಯೂ ಇಂತಹ ಕಾಯ್ದೆಯನ್ನು ಜಾರಿಗೊಳಿಸಬೇಕು
ನಾವು ಒದಗಿಸಿರುವ ಅನುದಾನ ಅದೇ ವರ್ಷ ಶೇಕಡಾ ನೂರರಷ್ಟು ವೆಚ್ಚವಾಗಬೇಕು. ಯಾವುದೇ ಕಾರಣಕ್ಕೂ ಈ ಅನುದಾನ ಲೋಪವಾಗಲು ಅವಕಾಶ ನೀಡಬಾರದು. ಯಾವುದಾದರೂ ಸಕಾರಣದಿಂದ ಅನುದಾನ ಸಂಪೂರ್ಣ ವೆಚ್ಚವಾಗದೇ ಉಳಿದರೆ, ಆ ಅನುದಾನ ಮುಂದಿನ ವರ್ಷಕ್ಕೂ ಮುಂದುವರೆಯುತ್ತದೆ. ಕೇಂದ್ರದಲ್ಲಿಯೂ ಇಂತಹ ಕಾಯ್ದೆಯನ್ನು ಜಾರಿಗೊಳಿಸಲು ಎಲ್ಲರೂ ಒತ್ತಡ ಹೇರಬೇಕು ಎಂದರು.

ಸಾಮಾಜಿಕ ನ್ಯಾಯ ಸಾಧನೆಗೆ ಆರ್ಥಿಕ ಸಾಮಾಜಿಕ ಶಕ್ತಿ ಕೊಡುವ ಕಾರ್ಯಕ್ರಮ ಜಾರಿ ಮಾಡಬೇಕು ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಸಾರ್ಥಕ ಆಗಬೇಕಾದರೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿದಾಗ ಮಾತ್ರ ಈ ದೇಶದಲ್ಲಿ ಸಮಾನತೆ ಬರಲು ಸಾಧ್ಯವಾಗುತ್ತದೆ. ಸಾಮಾಜಿಕ ನ್ಯಾಯ ಸಾಧನೆಗೆ ಆರ್ಥಿಕ ಸಾಮಾಜಿಕ ಶಕ್ತಿ ಕೊಡುವ ಕಾರ್ಯಕ್ರಮ ಜಾರಿ ಮಾಡಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ. ಈ ಬಗ್ಗೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ನಮ್ಮನ್ನು ಎಚ್ಚರಿಸಿದ್ದರು ಎಂದರು.

ಸಂವಿಧಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕೆಂಬ ಬದ್ಧತೆ ಇದೆ ಅಂಬೇಡ್ಕರ್‌ ಅವರು ನೀಡಿದ ಸಂವಿಧಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕೆಂಬ ಬದ್ಧತೆ ಇರುವವನು. ಜಗಜೀವನ್‌ ರಾಮ್‌ ಅವರು ದಕ್ಷ ಆಡಳಿತಗಾರ, ಸಮಾನತೆ, ಜಾತಿ ವಿನಾಶದ ಕನಸು ಕಂಡವರು. ಸಮಾಜದಲ್ಲಿ ಅಸಮಾನತೆ ಇರುವ ವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ.
ಅವರು ಮಿತಭಾಷಿ ಆದರೆ ಉತ್ತಮ ಆಡಳಿತಗಾರ. ಅವರ ನಿಲುವು, ಬದ್ಧತೆಯಲ್ಲಿ ಬದಲಾವಣೆ ಇರಲಿಲ್ಲ. ಅವರು ಆಹಾರ, ರೈಲ್ವೆ, ರಕ್ಷಣಾ, ಕಾರ್ಮಿಕ ಮಂತ್ರಿಯಾಗಿ ಅವರದೇ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ.

ನವದೆಹಲಿಯಲ್ಲಿ ವಿವಿಧ ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ನೀಡಲಾಗುವ ನೆರವಿನ ಮೊತ್ತ 10 ಸಾವಿರ ರೂ. ಗಳಿಂದ 15 ರೂ. ಗಳಿಗೆ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರೊಂದಿಗೆ ನವದೆಹಲಿಯಲ್ಲಿ ಈ ಅಭ್ಯರ್ಥಿಗಳಿಗೆ ಹಾಸ್ಟೆಲ್‌ ನಿರ್ಮಿಸಲು ತೀರ್ಮಾನಿಸಲಾಗಿದೆ.

ಮುಂಬಡ್ತಿಯಲ್ಲಿ ಮೀಸಲಾತಿ ವಿರುದ್ಧ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ನಮ್ಮ ರಾಜ್ಯದಲ್ಲಿ ರತ್ನಪ್ರಭಾ ಎಂಬ ಅಧಿಕಾರಿಯ ನೇತೃತ್ವದಲ್ಲಿ ಸಮಿತಿ ರಚಿಸಿ, ವರದಿ ಆಧರಿಸಿ, ಕಾನೂನು ಜಾರಿ ಮಾಡಿ, ಮುಂಬಡ್ತಿ ನೀಡಲಾಯಿತು. ಸುಪ್ರೀಂ ಕೋರ್ಟ್‌ ಈ ಕಾನೂನನ್ನು ಎತ್ತಿ ಹಿಡಿಯಿತು ಎಂದು ಸ್ಮರಿಸಿದರು.

ಅವಕಾಶ ವಂಚಿತರಿಗೆ ಮುಂಚೂಣಿಗೆ ಬರಲು ಅವಕಾಶ ನೀಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಗುತ್ತಿಗೆದಾರರಿಗೆ ಒಂದು ಕೋಟಿ ರೂ. ವರೆಗಿನ ಕಾಮಗಾರಿಯಲ್ಲಿ ಮೀಸಲಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

LEAVE A REPLY

Please enter your comment!
Please enter your name here