ಅಮೃತಹಳ್ಳಿಯಲ್ಲಿ ರಸ್ತೆಗಿಂತ ಎತ್ತರದ ಕಲ್ವರ್ಟ್: ರಸ್ತೆ ಮಟ್ಟಕ್ಕೆ ಸರಿಪಡಿಸಲು ಸೂಚನೆ
ಬೆಂಗಳೂರು, ಅ. 5: ಅಮೃತಹಳ್ಳಿ 18ನೇ ಕ್ರಾಸ್ನಲ್ಲಿ ನಿರ್ಮಾಣವಾಗುತ್ತಿರುವ ರಾಜಕಾಲುವೆ ಕಲ್ವರ್ಟ್ ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿರುವುದನ್ನು ಗಮನಿಸಿದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಅದನ್ನು ರಸ್ತೆ ಮಟ್ಟಕ್ಕೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಕಾಮಗಾರಿಗಳು ಹಾಗೂ ಸಂಚಾರ ದಟ್ಟಣೆ ಇರುವ ಸ್ಥಳಗಳನ್ನು ಸೋಮವಾರ ಪರಿಶೀಲಿಸಿದ ಅವರು, ಕಲ್ವರ್ಟ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಅಮೃತಹಳ್ಳಿ 18ನೇ ಕ್ರಾಸ್ನಲ್ಲಿ 700 ಮೀಟರ್ ರಸ್ತೆಯ ವೈಟ್ಟಾಪಿಂಗ್ನ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದೆ. ಬೆಸ್ಕಾಂ ವಿದ್ಯುತ್ ಸೌಲಭ್ಯಗಳ ಸ್ಥಳಾಂತರ, ಬಫರ್ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ಇದೇ ವೇಳೆ ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿರುವುದನ್ನು ಗಮನಿಸಿದ ಮಹೇಶ್ವರ್ ರಾವ್, ಜಲಮಂಡಳಿ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಕೊಳಚೆ ನೀರು ಹರಿದುಬರುವ ಮೂಲವನ್ನು ಪತ್ತೆಹಚ್ಚಿ, ಅಲ್ಲಿಯೇ ತಡೆಗಟ್ಟುವಂತೆ ಸೂಚಿಸಿದರು.
ದಿಣ್ಣೂರು ರಸ್ತೆಯ ಕಿರಿದಾದ ಭಾಗಗಳ ಅಗಲೀಕರಣಕ್ಕೆ ಪರಿಶೀಲನೆ
ದಿಣ್ಣೂರು ಮುಖ್ಯ ರಸ್ತೆಯಲ್ಲಿ ಅಂಬೇಡ್ಕರ್ ಮೆಡಿಕಲ್ ಕಾಲೇಜಿನಿಂದ ದೇವೇಗೌಡ ವೃತ್ತದವರೆಗಿನ ಭಾಗವನ್ನು ಪರಿಶೀಲಿಸಿದಾಗ, ಕೆಲವೆಡೆ ರಸ್ತೆ ಅಗಲ 9–10 ಮೀಟರ್ ಇದ್ದರೆ, ಇನ್ನು ಕೆಲವೆಡೆ 6–7 ಮೀಟರ್ ಮಾತ್ರ ಇರುವುದು ಕಂಡುಬಂದಿತು.
ಹೆಚ್ಚಿನ ವಾಹನ ದಟ್ಟಣೆಯಿರುವ ಈ ರಸ್ತೆಯಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಸಂಚಾರಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.
ಕಿರಿದಾದ ಭಾಗಗಳಲ್ಲಿ ಅಗತ್ಯ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡು ರಸ್ತೆ ಅಗಲೀಕರಣ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯ ಅಭಿಯಂತರರಿಗೆ ನಿರ್ದೇಶನ ನೀಡಿದರು. ದೇವೇಗೌಡ ವೃತ್ತದಲ್ಲಿ ಫ್ರೀ ಲೆಫ್ಟ್ ನಿರ್ಮಿಸಲು ಖಾಸಗಿ ಅಪಾರ್ಟ್ಮೆಂಟ್ ಬಳಿಯ ಹಾಗೂ ಎದುರಿನ ಕಟ್ಟಡದ ಜಾಗವನ್ನು ಪರಿಶೀಲಿಸಿ ಯೋಜನೆ ರೂಪಿಸುವಂತೆಯೂ ಸೂಚಿಸಿದರು.
ಜಕ್ಕೂರಿನಲ್ಲಿ ಫ್ರೀ ಲೆಫ್ಟ್ಗೆ ಕ್ರಮ
ಜಕ್ಕೂರು ಬಳಿಯ ಕೆ.ವಿ. ಜಯರಾಮ್ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ 2.1 ಕಿ.ಮೀ. ವೈಟ್ಟಾಪಿಂಗ್ ಕಾಮಗಾರಿಯಲ್ಲಿ 250 ಮೀಟರ್ ಪೂರ್ಣಗೊಂಡಿದೆ. ಕೃಷ್ಣ ಸಾಗರ್ ಹೋಟೆಲ್ ಬಳಿ ವಾಹನಗಳು ಸುಗಮವಾಗಿ ಎಡಕ್ಕೆ ತಿರುಗಲು ಫ್ರೀ ಲೆಫ್ಟ್ ನಿರ್ಮಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಮಹೇಶ್ವರ್ ರಾವ್ ಸೂಚಿಸಿದರು.
ಟ್ಯಾನರಿ ರಸ್ತೆಯ ವೈಟ್ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಕಿರಿದಾದ ಭಾಗದಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಪಾಲಿಕೆಯ ಜಾಗವಿದ್ದು, ಅಲ್ಲಿ ರಸ್ತೆ ಅಗಲೀಕರಣದ ಸಾಧ್ಯತೆ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಿದರು.
ಪರಿಶೀಲನೆ ವೇಳೆ ಮುಖ್ಯ ಅಭಿಯಂತರರಾದ ಡಾ. ರಾಘವೇಂದ್ರ ಪ್ರಸಾದ್, ಸಂಜೀವ್ ರಾಜ್, ಮಹದೇಶ್ ಹಾಗೂ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
