ಬೆಂಗಳೂರು, ಮೇ 19: ಮುಂಗಾರು ಹಿನ್ನಲೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಹಾಗೂ ಪ್ರವಾಹ ತಡೆ ಕ್ರಮಗಳನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ಸೋಮವಾರ ಪೂರ್ವ ಬೆಂಗಳೂರಿನ ವಿವಿಧ ರಾಜಕಾಲುವೆ ಮತ್ತು ಮಳೆ ನೀರು ಕಾಲುವೆ ಅಭಿವೃದ್ಧಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.
ವಿಶ್ವ ಬ್ಯಾಂಕ್ ಅನುದಾನದಡಿ ನಡೆಯುತ್ತಿರುವ ಮಳೆ ನೀರು ಕಾಲುವೆ (SWD) ಅಭಿವೃದ್ಧಿ ಕಾಮಗಾರಿಗಳು ಹಾಗೂ ಈಗಾಗಲೇ ಅಭಿವೃದ್ಧಿಪಡಿಸಿರುವ ರಾಜಕಾಲುವೆಗಳ ನಿರ್ವಹಣಾ ಕಾಮಗಾರಿಗಳ ಪ್ರಗತಿಯನ್ನು ಆಯುಕ್ತರು ಪರಿಶೀಲಿಸಿದರು.
ಪ್ರಮುಖ ರಾಜಕಾಲುವೆಗಳ ಪರಿಶೀಲನೆ
ಪರಿಶೀಲನೆ ವೇಳೆ ಕೆಳಕಂಡ ಪ್ರಮುಖ ರಾಜಕಾಲುವೆ ಪ್ರದೇಶಗಳಿಗೆ ಭೇಟಿ ನೀಡಲಾಯಿತು: ಯಮಲೂರು ರಾಜಕಾಲುವೆ, ವರ್ತೂರು ರಾಜಕಾಲುವೆ, ಬೆಳ್ಳಂದೂರು ರಾಜಕಾಲುವೆ, ಕ್ರೋಮಾ ರಸ್ತೆ ಪ್ರದೇಶ, ಬಾಳಗೆರೆ ರಾಜಕಾಲುವೆ, ಕೈಕೊಂಡ್ರಹಳ್ಳಿ ರಾಜಕಾಲುವೆ, ಸೌಲುಕೆರೆ – ವಿಪ್ರೋ ಪ್ರದೇಶ.
ಈ ವೇಳೆ ರಾಜಕಾಲುವೆಗಳ ಅಭಿವೃದ್ಧಿ, ಹೂಳು ತೆರವು, ನೀರಿನ ಹರಿವು ವ್ಯವಸ್ಥೆ ಮತ್ತು ಪ್ರವಾಹ ನಿಯಂತ್ರಣ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.
ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಇನ್ನೂ ಅಭಿವೃದ್ಧಿಯಾಗದ “ಕಚ್ಚಾ ಕಾಲುವೆಗಳನ್ನು” ತಕ್ಷಣ ಸ್ವಚ್ಛಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ತಾತ್ಕಾಲಿಕ ಅಡ್ಡಿಗಳು, ಹೂಳು, ಕಸ ಮತ್ತು ತ್ಯಾಜ್ಯಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಸೂಚಿಸಿದರು.
ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಕೆಳಕಂಡ ಸೂಚನೆಗಳನ್ನು ನೀಡಲಾಯಿತು:
- ಅಭಿವೃದ್ಧಿಪಡಿಸಿದ ರಾಜಕಾಲುವೆಗಳ ನಿಯಮಿತ ನಿರ್ವಹಣೆ
- ಹೂಳು, ಕಸ ಮತ್ತು ಅಡ್ಡಿಗಳನ್ನು ತೆರವುಗೊಳಿಸುವುದು
- ಕಾಲುವೆಗಳ ನೀರು ಸಾಗಿಸುವ ಸಾಮರ್ಥ್ಯ ಕಾಪಾಡಿಕೊಳ್ಳುವುದು
- ಬಾಕಿ ಉಳಿದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸುವುದು
- ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು
- ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯನಿರ್ವಹಿಸುವುದು
ಪ್ರಾಜೆಕ್ಟ್ ಇಂಪ್ಲಿಮೆಂಟೇಶನ್ ಯೂನಿಟ್ ಹಾಗೂ ಸ್ಟಾರ್ಮ್ ವಾಟರ್ ಡ್ರೇನ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಯಿತು.
ಅಗ್ನಿಶಾಮಕ ಠಾಣೆಯಲ್ಲಿ ವಿಪತ್ತು ನಿರ್ವಹಣಾ ಸಾಧನಗಳ ಪರಿಶೀಲನೆ
ಇದೇ ಸಂದರ್ಭದಲ್ಲಿ ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿದ ಆಯುಕ್ತರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDMF) ಅಡಿಯಲ್ಲಿ ಒದಗಿಸಲಾದ ವಿಪತ್ತು ನಿರ್ವಹಣಾ ಸಾಧನಗಳನ್ನು ಪರಿಶೀಲಿಸಿದರು.
ಮಳೆಗಾಲದ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಅಗ್ನಿಶಾಮಕ ದಳದ ಸಿದ್ಧತೆ ಮತ್ತು ಉಪಕರಣಗಳ ಕಾರ್ಯಕ್ಷಮತೆಯನ್ನು ಅವಲೋಕಿಸಲಾಯಿತು.
ಎಲ್ಲಾ ತುರ್ತು ಉಪಕರಣಗಳು ಸದಾ ಕಾರ್ಯನಿರ್ವಹಣಾ ಸ್ಥಿತಿಯಲ್ಲಿರಬೇಕು ಹಾಗೂ ಮಳೆ ಸಂಬಂಧಿತ ತುರ್ತು ಪರಿಸ್ಥಿತಿಗಳಿಗೆ ಸಂಪೂರ್ಣ ಸಿದ್ಧತೆಯಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಪ್ರವಾಹ ನಿಯಂತ್ರಣ ಹಾಗೂ ಸಾರ್ವಜನಿಕ ಸುರಕ್ಷತೆಗೆ ಒತ್ತು
ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಿಸುವುದು, ಮಳೆ ನೀರು ಕಾಲುವೆಗಳ ಬಲವರ್ಧನೆ ಹಾಗೂ ಸಾರ್ವಜನಿಕ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಆಯುಕ್ತ ಡಿ.ಎಸ್. ರಮೇಶ್ ಸೂಚಿಸಿದರು.
ಪರಿಶೀಲನೆ ವೇಳೆ ಮುಖ್ಯ ಅಭಿಯಂತರ ಎಂ. ಲೋಕೇಶ್, ಪ್ರಾಜೆಕ್ಟ್ ಇಂಪ್ಲಿಮೆಂಟೇಶನ್ ಯೂನಿಟ್, ಸ್ಟಾರ್ಮ್ ವಾಟರ್ ಡ್ರೇನ್ ವಿಭಾಗ, ಕಾಡುಗೋಡಿ ಹಾಗೂ ಮಾರತಹಳ್ಳಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
