ಶಾಲೆಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವ ಆದೇಶಕ್ಕೆ ಸುಪ್ರೀಂ ಕೋರ್ಟ್ ಮುದ್ರೆ
ನವದೆಹಲಿ, ಮೇ 19: ಸಾರ್ವಜನಿಕರ ಸುರಕ್ಷತೆ ಹಾಗೂ ಜೀವಿಸುವ ಹಕ್ಕಿಗೆ ಅತ್ಯುನ್ನತ ಆದ್ಯತೆ ನೀಡಿರುವ ಸುಪ್ರೀಂ ಕೋರ್ಟ್, ದೇಶದಾದ್ಯಂತ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಕ್ರೀಡಾಂಗಣಗಳು ಹಾಗೂ ವಿಮಾನ ನಿಲ್ದಾಣಗಳಂತಹ ಸೂಕ್ಷ್ಮ ಸಾರ್ವಜನಿಕ ಪ್ರದೇಶಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವ ಕುರಿತ ತನ್ನ ಹಿಂದಿನ ಆದೇಶವನ್ನು ಪುನರುಚ್ಚರಿಸಿದೆ.
131 ಪುಟಗಳ ಮಹತ್ವದ ತೀರ್ಪಿನಲ್ಲಿ, 2025ರ ನವೆಂಬರ್ನಲ್ಲಿ ನೀಡಿದ್ದ ಆದೇಶವನ್ನು ಹಿಂಪಡೆಯಲು ಮತ್ತು ತಿದ್ದುಪಡಿ ಮಾಡಲು ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
“City Hounded by Strays, Kids Pay Price” ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ, ದೇಶಾದ್ಯಂತ ಹೆಚ್ಚುತ್ತಿರುವ ನಾಯಿ ಕಡಿತ ಪ್ರಕರಣಗಳು ಹಾಗೂ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಕುರಿತು ನ್ಯಾಯಾಲಯ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಶಾಲೆಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳ ಆವರಣದಲ್ಲಿ ಬೀದಿ ನಾಯಿಗಳ ಅತಿಯಾದ ಸಂಚಾರ ಮಕ್ಕಳು, ರೋಗಿಗಳು, ವೃದ್ಧರು ಮತ್ತು ಸಾರ್ವಜನಿಕರ ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದಕ್ಕೆ ಆಡಳಿತಾತ್ಮಕ ವೈಫಲ್ಯ ಹಾಗೂ ಇಲಾಖೆಗಳ ನಡುವಿನ ಸಮನ್ವಯ ಕೊರತೆಯೇ ಕಾರಣ ಎಂದು ಕೋರ್ಟ್ ಹೇಳಿದೆ.
4170620252026-05-19-674916ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ನಿರ್ದೇಶನಗಳು
ರಾಜ್ಯ ಸರ್ಕಾರಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಿತ ಇಲಾಖೆಗಳು ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ:
- ಶಾಲೆಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಹಾಗೂ ಕ್ರೀಡಾಂಗಣಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಬೇಕು,
- ನಾಯಿಗಳ ಲಸಿಕೆ ಹಾಗೂ ಶಸ್ತ್ರಚಿಕಿತ್ಸೆ (ಸ್ಟೆರಿಲೈಸೇಶನ್) ಖಚಿತಪಡಿಸಬೇಕು,
- ಅವುಗಳನ್ನು ನಿರ್ದಿಷ್ಟ ಶೆಲ್ಟರ್ ಕೇಂದ್ರಗಳಿಗೆ ಸ್ಥಳಾಂತರಿಸಬೇಕು,
- ಹಿಡಿದ ನಾಯಿಗಳನ್ನು ಮತ್ತೆ ಅದೇ ಸಂಸ್ಥಾ ಪ್ರದೇಶಗಳಿಗೆ ಬಿಡಬಾರದು,
- ಸಂಸ್ಥೆಗಳ ಭದ್ರತಾ ವ್ಯವಸ್ಥೆ, ಗೇಟ್, ಬೇಲಿ ಬಲಪಡಿಸಬೇಕು,
- ನಿಯಮಿತ ಪರಿಶೀಲನೆ ನಡೆಸಬೇಕು,
- ಆಸ್ಪತ್ರೆಗಳಲ್ಲಿ ಆಂಟಿ ರೇಬಿಸ್ ಲಸಿಕೆ ಲಭ್ಯತೆ ಖಚಿತಪಡಿಸಬೇಕು,
- ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಬೇಕು.
ಶಾಲೆಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು ಹಾಗೂ ಇತರೆ ಸೂಕ್ಷ್ಮ ಪ್ರದೇಶಗಳಿಂದ ಹಿಡಿಯಲ್ಪಟ್ಟ ಬೀದಿ ನಾಯಿಗಳನ್ನು “ಮತ್ತೆ ಅದೇ ಸ್ಥಳಕ್ಕೆ ಬಿಡಬಾರದು” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ.
ಇಂತಹ ಕ್ರಮ ಸಾರ್ವಜನಿಕ ಸುರಕ್ಷತೆ ಕಾಯ್ದುಕೊಳ್ಳುವ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಾಣಿ ಕಲ್ಯಾಣ ಸಂಘಟನೆಗಳ ವಾದ ತಿರಸ್ಕಾರ
ಪ್ರಾಣಿ ಕಲ್ಯಾಣ ಸಂಘಟನೆಗಳು Animal Birth Control (ABC) Rules, 2023 ಪ್ರಕಾರ ಶಸ್ತ್ರಚಿಕಿತ್ಸೆಗೊಂಡ ನಾಯಿಗಳನ್ನು ಅವುಗಳನ್ನು ಹಿಡಿದ ಅದೇ ಪ್ರದೇಶಕ್ಕೆ ಮರುಬಿಡಬೇಕು ಎಂದು ವಾದಿಸಿತ್ತು.
ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ತಳ್ಳಿಹಾಕಿ, ಶಾಲೆಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಕ್ರೀಡಾಂಗಣಗಳನ್ನು ಸಾಮಾನ್ಯ ರಸ್ತೆ ಪ್ರದೇಶಗಳಂತೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಬೀದಿ ನಾಯಿಗಳಿಗೆ ಪ್ರತಿಯೊಂದು ಸಾರ್ವಜನಿಕ ಸ್ಥಳದಲ್ಲೂ ನಿರ್ಬಂಧರಹಿತ ಹಕ್ಕು ಇರುವುದಿಲ್ಲ. ಸೂಕ್ಷ್ಮ ಸಂಸ್ಥಾ ಪ್ರದೇಶಗಳು ಸುರಕ್ಷಿತ ಹಾಗೂ ನಿಯಂತ್ರಿತವಾಗಿರಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಸಂವಿಧಾನದ ವಿಧಿ 21 ಉಲ್ಲೇಖ
ಸಂವಿಧಾನದ ವಿಧಿ 21 ಅಡಿಯಲ್ಲಿ ನಾಗರಿಕರ “ಜೀವನ ಹಕ್ಕು” ಎಂದರೆ:
- ಸುರಕ್ಷಿತ ಸಾರ್ವಜನಿಕ ಸ್ಥಳಗಳು,
- ಮುಕ್ತ ಸಂಚಾರ,
- ಆರೋಗ್ಯ ರಕ್ಷಣೆ,
- ಅಪಾಯಗಳಿಂದ ರಕ್ಷಣೆ
ಇವುಗಳನ್ನೂ ಒಳಗೊಂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬೀದಿ ನಾಯಿಗಳ ನಿಯಂತ್ರಣವಿಲ್ಲದ ಸಂಖ್ಯೆ ಈಗ ಸಾರ್ವಜನಿಕ ಸುರಕ್ಷತಾ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಆರ್ಥಿಕ ಹೊರೆ ಕುರಿತೂ ಚರ್ಚೆ
ಈ ಆದೇಶವನ್ನು ದೇಶಾದ್ಯಂತ ಜಾರಿಗೆ ತರಲು:
- 77,000ಕ್ಕೂ ಹೆಚ್ಚು ಶೆಲ್ಟರ್ಗಳ ಅಗತ್ಯ,
- ಸಾವಿರಾರು ಏಕರೆ ಜಾಗ,
- ವರ್ಷಕ್ಕೆ ₹22,000 ಕೋಟಿ ವೆಚ್ಚ,
- ದೊಡ್ಡ ಮಟ್ಟದ ವೈದ್ಯಕೀಯ ಮತ್ತು ಸಿಬ್ಬಂದಿ ವ್ಯವಸ್ಥೆ
ಅಗತ್ಯವಿದೆ ಎಂದು ಪ್ರಾಣಿ ಕಲ್ಯಾಣ ಸಂಘಟನೆಗಳು ಕೋರ್ಟ್ ಗಮನಕ್ಕೆ ತಂದವು.
ಈ ಹಣಕಾಸು ಹಾಗೂ ಆಡಳಿತಾತ್ಮಕ ಅಂಶಗಳನ್ನೂ ಕೋರ್ಟ್ ಪರಿಶೀಲಿಸಿದೆ.
ಹಿಂದಿನ ಆದೇಶ ಮುಂದುವರಿಸಿದ ಸುಪ್ರೀಂ ಕೋರ್ಟ್
ಅಂತಿಮ ತೀರ್ಪಿನಲ್ಲಿ, ಶಾಲೆಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಇತರೆ ಸಂಸ್ಥಾ ಪ್ರದೇಶಗಳನ್ನು Animal Birth Control Rules, 2023 ಅಡಿಯಲ್ಲಿ “ಸಾಮಾನ್ಯ ರಸ್ತೆ ಪ್ರದೇಶ” ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪಶು ಕಲ್ಯಾಣ ಕಾಯ್ದೆಗಳ ಜಾರಿಗೆ ಜೊತೆಗೆ ಸಾರ್ವಜನಿಕರ ಸುರಕ್ಷತೆ ಮತ್ತು ಸಂವಿಧಾನಬದ್ಧ ಹಕ್ಕುಗಳ ರಕ್ಷಣೆ ಅತ್ಯಂತ ಪ್ರಮುಖ ಎಂದು ನ್ಯಾಯಾಲಯ ಹೇಳಿದೆ.
