ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ‘ವಾರ್ಡ್ ಒನ್’ ಅಭಿಯಾನದ ಎರಡನೇ ಹಂತವನ್ನು ನವೆಂಬರ್ 7ರಿಂದ 50ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಆರಂಭಿಸಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಬುಧವಾರ ತಿಳಿಸಿದರು. ಅಭಿಯಾನವನ್ನು ಡಿಸೆಂಬರ್ ಮಧ್ಯದವರೆಗೆ ವಿಸ್ತರಿಸಲಾಗಿದೆ.
ಮುಂದಿನ ಹಂತದ ಕುರಿತ ವರ್ಚುವಲ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಸಚಿವರು, ಕೆಲಸದ ವೇಗಕ್ಕಿಂತ ಗುಣಮಟ್ಟ ಮತ್ತು ಪರಿಪೂರ್ಣತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆಲವು ವಾರ್ಡ್ಗಳಲ್ಲಿ ವಿವರವಾದ ಮೌಲ್ಯಮಾಪನ ಮತ್ತು ಹೆಚ್ಚಿನ ಸಮಯ ಬೇಕಿದ್ದು, ಅಭಿಯಾನವು ಕೇವಲ ಸಂಖ್ಯಾತ್ಮಕ ಗುರಿ ತಲುಪುವುದಕ್ಕಿಂತ ನಾಗರಿಕರಿಗೆ ಸುಸ್ಥಿರ ಫಲಿತಾಂಶ ನೀಡಬೇಕು ಎಂದು ಅವರು ಹೇಳಿದರು.
ಮೊದಲ ಹಂತ: 43 ವಾರ್ಡ್ಗಳು
ಮೊದಲ ಹಂತದಲ್ಲಿ ಐದು ನಗರ ಪಾಲಿಕೆಗಳ 43 ವಾರ್ಡ್ಗಳನ್ನು ಒಳಗೊಳ್ಳಲಾಗಿತ್ತು. ಜಿಬಿಎ ಪ್ರಕಟಣೆಯಲ್ಲಿ ನೀಡಿರುವ ಪ್ರಮುಖ ಅಂಕಿಅಂಶಗಳು:
- 357.41 ಕಿ.ಮೀ. ರಸ್ತೆ ಜಾಲದಲ್ಲಿ 704 ಗುಂಡಿಗಳ ದುರಸ್ತಿ.
- ಗುರುತಿಸಲಾದ 342 ಕಸದ ಬ್ಲ್ಯಾಕ್ಸ್ಪಾಟ್ಗಳಿಂದ 426.6 ಟನ್ ಕಸ ತೆರವು.
- 820 ಸ್ಥಳಗಳಿಂದ 1,141.2 ಟನ್ ಕಟ್ಟಡ ಮತ್ತು ಕೆಡವಿದ ತ್ಯಾಜ್ಯ ತೆರವು.
- 29.68 ಕಿ.ಮೀ. ಪಾದಚಾರಿ ಮಾರ್ಗ ದುರಸ್ತಿ.
- 455.15 ಕಿ.ಮೀ. ಪಾದಚಾರಿ ಮಾರ್ಗದ ಒತ್ತುವರಿ ತೆರವು.
ಸಚಿವರ ಸೂಚನೆಗಳು
- ಎರಡನೇ ಹಂತದಲ್ಲಿ ನಿವಾಸಿ ಕಲ್ಯಾಣ ಸಂಘಗಳು (ಆರ್ಡಬ್ಲ್ಯೂಎ) ಮತ್ತು ಸ್ಥಳೀಯ ನಾಗರಿಕ ಸಂಸ್ಥೆಗಳನ್ನು ತೊಡಗಿಸಿಕೊಳ್ಳಬೇಕು; ಸ್ವಚ್ಛತಾ ಕಾರ್ಯ ಮತ್ತು ಇತರ ಕಾಮಗಾರಿಗಳ ಬಗ್ಗೆ ಮುಂಚಿತವಾಗಿ ತಿಳಿಸಬೇಕು.
- ಮರ ನಿರ್ವಹಣೆ ಮತ್ತು ತೆರವಿಗೆ ಅರಣ್ಯ ಇಲಾಖೆಯೊಂದಿಗೆ ಹೆಚ್ಚಿನ ಸಮನ್ವಯ ಸಾಧಿಸಬೇಕು.
- ಖಾಲಿ ಬಿಡಿಎ ನಿವೇಶನಗಳಲ್ಲಿನ ಕಸವನ್ನು ತಕ್ಷಣ ತೆರವುಗೊಳಿಸಬೇಕು; ನಿವೇಶನ ಮಾಲೀಕರು ನಿರ್ವಹಣೆ ಮಾಡದಿದ್ದರೆ ಅಗತ್ಯ ಕ್ರಮ ಕೈಗೊಳ್ಳಬೇಕು.
- ಕಸದ ಸಮಸ್ಯೆ ಈಗ ಹತೋಟಿಗೆ ಬರುತ್ತಿರುವುದರಿಂದ ಪಾದಚಾರಿ ಮಾರ್ಗದ ಒತ್ತುವರಿ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಬೇಕು.
- ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿಯಲ್ಲಿ ಲೇನ್ ಮಾರ್ಕಿಂಗ್ ಮತ್ತು ರಿಫ್ಲೆಕ್ಟರ್ಗಳಂತಹ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು.
- ತಮ್ಮ ಬಡಾವಣೆಗಳಲ್ಲಿ ನಡೆಯುತ್ತಿರುವ ಸುಧಾರಣೆಗಳ ಬಗ್ಗೆ ನಿವಾಸಿಗಳಿಗೆ ತಿಳಿಯುವಂತೆ ಜನಸಂಪರ್ಕ ಕಾರ್ಯಕ್ರಮಗಳನ್ನು ಬಲಪಡಿಸಬೇಕು.
- ಮೊದಲ ಹಂತದಲ್ಲಿ ನಿವಾಸಿಗಳಿಂದ ಬಂದ ಸಲಹೆಗಳನ್ನು ಕ್ರೋಢೀಕರಿಸಿ ಎರಡನೇ ಹಂತದ ಯೋಜನೆಯಲ್ಲಿ ಅಳವಡಿಸಬೇಕು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಶಿಲ್ಪಾ ನಾಗ್, ಪೊಮ್ಮಲ ಸುನಿಲ್ ಕುಮಾರ್, ರಮೇಶ್ ಕೆ.ಎನ್. ಮತ್ತು ಜಗದೀಶ್ ಜಿ. ಹಾಗೂ ಹೆಚ್ಚುವರಿ ಆಯುಕ್ತರು, ಮುಖ್ಯ ಎಂಜಿನಿಯರ್ಗಳು, ಕಾರ್ಯನಿರ್ವಾಹಕ ಎಂಜಿನಿಯರ್ಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
