ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ಮಂಗಳವಾರ ಚಿಕ್ಕಪೇಟೆ ವಿಭಾಗದ ಕನಕನಪಾಳ್ಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು, ಒಟ್ಟು 82 ಜನರ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಸಲಹೆ ನೀಡಲಾಯಿತು ಎಂದು ಪಾಲಿಕೆಯ ಆಯುಕ್ತ ಜಗದೀಶ್ ಜಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.
ತಪಾಸಣೆ ನಡೆಸಿದ ಸಮಸ್ಯೆಗಳು
ಶಿಬಿರದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ರಕ್ತಹೀನತೆ, ವಯೋಸಹಜ ಆರೋಗ್ಯ ಸಮಸ್ಯೆಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಜ್ವರ ಹಾಗೂ ಉಸಿರಾಟ ಸಂಬಂಧಿತ ಲಕ್ಷಣಗಳು ಮತ್ತು ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳ ಕುರಿತು ತಪಾಸಣೆ ನಡೆಸಲಾಯಿತು. ಪಾಲಿಕೆ ನೀಡಿರುವ ವಿವರ ಹೀಗಿದೆ:
- ಮಧುಮೇಹ: 31 ಜನರು
- ಅಧಿಕ ರಕ್ತದೊತ್ತಡ: 23 ಜನರು
- ರಕ್ತಹೀನತೆ: 12 ಜನರು
- ವಯೋಸಹಜ ಆರೋಗ್ಯ ತಪಾಸಣೆ: 51 ಜನರು
- ಮಾನಸಿಕ ಆರೋಗ್ಯ ಸಮಸ್ಯೆಗಳು: 12 ಜನರು
- ಜ್ವರ ಮತ್ತು ಉಸಿರಾಟ ಸಂಬಂಧಿತ ಲಕ್ಷಣಗಳು: 12 ಜನರು
- ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು: 23 ಜನರು
ಆರೋಗ್ಯ ಸಮಸ್ಯೆಗಳ ಆರಂಭಿಕ ಪತ್ತೆ, ಆರೋಗ್ಯದ ಕುರಿತು ಅರಿವು ಮೂಡಿಸುವುದು ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಶಿಬಿರದ ಉದ್ದೇಶ ಎಂದು ಪಾಲಿಕೆ ತಿಳಿಸಿದೆ.
