ಆಗಸ್ಟ್ 15ರಿಂದ ‘ಬೆಂಗಳೂರು ಹಸಿರೂರು’ ಅಭಿಯಾನ: 64 ಸಾವಿರ ಸಸಿ ನೆಡುವ, 40 ಸಾವಿರ ಸಸಿ ವಿತರಿಸುವ ಗುರಿ
ಬೆಂಗಳೂರು, ಜುಲೈ 20: ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ನಗರದಾದ್ಯಂತ ‘ಬೆಂಗಳೂರು ಹಸಿರೂರು’ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಅವಧಿಯಲ್ಲಿ 64 ಸಾವಿರ ಸಸಿಗಳನ್ನು ನೆಡುವುದರ ಜೊತೆಗೆ 40 ಸಾವಿರ ಸಸಿಗಳನ್ನು ನಾಗರಿಕರಿಗೆ ವಿತರಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅರಣ್ಯ ವಿಭಾಗದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮರ ನೆಡುವ ಕಾರ್ಯಕ್ರಮ ಕೇವಲ ಕಾಗದದಲ್ಲೇ ಉಳಿಯಬಾರದು. ನೆಟ್ಟ ಪ್ರತಿಯೊಂದು ಸಸಿಯನ್ನೂ ಪೋಷಿಸಿ ಸಂರಕ್ಷಿಸಿ ಬೆಳೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ವರ್ಷದ ಅಭಿಯಾನಕ್ಕೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ, ಗುಣಮಟ್ಟದ ಆರು ಅಡಿ ಎತ್ತರದ ಸಸಿಗಳನ್ನಷ್ಟೇ ನೆಡುವಂತೆ ನಿರ್ದೇಶನ ನೀಡಿದರು.
ಸಾರ್ವಜನಿಕ-ಖಾಸಗಿ ಸಸಿ ನೆಡುವ ಕಾರ್ಯಕ್ರಮ (PPPP) ಮೂಲಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWAs), ನಾಗರಿಕ ಸಂಘಟನೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿಯಾನ ನಡೆಸಲಾಗುವುದು. ಮೊದಲ ಆದ್ಯತೆ ವಸತಿ ಬಡಾವಣೆಗಳಿಗೆ ನೀಡಲಾಗುತ್ತಿದ್ದು, ನಂತರ ರಸ್ತೆ ಬದಿಗಳು, ಕೆರೆಗಳ ಸುತ್ತಮುತ್ತ, ಉದ್ಯಾನಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗುವುದು.
ಮಹೊಗನಿ, ಟಬೆಬುಯಾ ರೋಸಿಯಾ, ಹೊಂಗೆ, ಬೇವು ಹಾಗೂ ನೇರಳೆ ಸೇರಿದಂತೆ ವಿವಿಧ ಜಾತಿಯ ಮರಗಳನ್ನು ನೆಡಲಾಗುವುದು. ಈ ಆರ್ಥಿಕ ವರ್ಷದಲ್ಲಿ ನೆಡುವ ಪ್ರತಿಯೊಂದು ಸಸಿಗೂ ಜಿಯೋ-ಟ್ಯಾಗ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಸಿ ನೆಡುವುದು ಹಾಗೂ ಮೂರು ವರ್ಷಗಳ ನಿರ್ವಹಣೆಗೆ ಒಟ್ಟು ₹9.64 ಕೋಟಿ ಮೀಸಲಿಡಲಾಗಿದೆ. ಸಸಿ ನೆಡುವಿಕೆ ಮತ್ತು ನಿರ್ವಹಣೆಯ ಯಶಸ್ಸಿನ ಆಧಾರದ ಮೇಲೆ ಪಾವತಿಗಳನ್ನು ಬಿಡುಗಡೆ ಮಾಡಲಾಗುವುದು.
ತಮ್ಮ ಪ್ರದೇಶದಲ್ಲಿ ಕನಿಷ್ಠ 30 ಸಸಿಗಳನ್ನು ನೆಡಲು ಅವಕಾಶವಿರುವ ನಿವಾಸಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕರು ಆಗಸ್ಟ್ 10ರೊಳಗೆ ನಿಗಮದ ವೆಬ್ಸೈಟ್ ಅಥವಾ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರಣ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆಯ ಬಳಿಕ ಸೂಕ್ತ ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗುತ್ತದೆ.
ಅಭಿವೃದ್ಧಿ ಕಾಮಗಾರಿಗಳಿಗಾಗಿ ನಿಗಮ, ಮೆಟ್ರೋ ಅಥವಾ ಇತರೆ ಸರ್ಕಾರಿ ಇಲಾಖೆಗಳು ಮರಗಳನ್ನು ತೆರವುಗೊಳಿಸುವ ಮೊದಲು ಪ್ರತಿ ಮರಕ್ಕೆ ಪ್ರತಿಯಾಗಿ 10 ಸಸಿಗಳನ್ನು ನೆಡುವ ವೆಚ್ಚವನ್ನು ಸಂಬಂಧಿತ ಸಂಸ್ಥೆಯೇ ಭರಿಸಬೇಕು ಎಂದು ಸಚಿವರು ನಿರ್ದೇಶಿಸಿದರು. ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.