ಹೊಸಕೋಟೆಯಲ್ಲಿ ಕ್ಯಾಟ್ಫಿಶ್ ಸಾಕಾಣಿಕೆ ವಿರುದ್ಧ ದಾಳಿ: 20 ಹೊಂಡಗಳ ನಾಶ, ಎಫ್ಐಆರ್ಗೆ ವಾಸಂತಿ ಅಮರ್ ಸೂಚನೆ
ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕಿನಲ್ಲಿ ನಿಷೇಧಿತ ಕ್ಯಾಟ್ಫಿಶ್ ಅನ್ನು ಅಕ್ರಮವಾಗಿ ಸಾಕಾಣಿಕೆ ಮಾಡಲಾಗುತ್ತಿತ್ತು ಎಂದು ಜಿಲ್ಲಾಡಳಿತ ತಿಳಿಸಿರುವ 20 ಹೊಂಡಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ವಾಸಂತಿ ಅಮರ್ ನೇತೃತ್ವದ ಕಾರ್ಯಾಚರಣೆಯಲ್ಲಿ ನಾಶಪಡಿಸಲಾಗಿದೆ.
ಸಾಕಾಣಿಕೆಯಲ್ಲಿ ತೊಡಗಿದ್ದವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅಮರ್ ಪೊಲೀಸರಿಗೆ ಸೂಚಿಸಿದರು.
ಹಲವೆಡೆ ಕ್ಯಾಟ್ಫಿಶ್ ಸಾಕಾಣಿಕೆ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯ ಆಧಾರದಲ್ಲಿ ಸೂಲಿಬೆಲೆ ಹೋಬಳಿಯ ನಾಲ್ಕು ಕಡೆ ದಾಳಿ ನಡೆಸಲಾಯಿತು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಕಂದಾಯ, ಗ್ರಾಮ ಪಂಚಾಯಿತಿ, ಮೀನುಗಾರಿಕೆ ಹಾಗೂ ಪೊಲೀಸ್ ಇಲಾಖೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.

ಜೆಸಿಬಿ ಬಳಸಿ ಹೊಂಡಗಳ ತೆರವು
ಸೂಲಿಬೆಲೆ ಮತ್ತು ಗಿಡ್ಡಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಳಗಳಲ್ಲಿ ನಿಷೇಧಿತ ಕ್ಯಾಟ್ಫಿಶ್ ಸಾಕಿ ಹೊರರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೆಸಿಬಿ ಯಂತ್ರಗಳನ್ನು ಬಳಸಿ 20 ಹೊಂಡಗಳನ್ನು ನಾಶಪಡಿಸಲಾಗಿದೆ.
ನಂದಗುಡಿ ಹೋಬಳಿಯ ವಿವಿಧ ಸ್ಥಳಗಳಲ್ಲೂ ಅಕ್ರಮವಾಗಿ ನಿರ್ಮಿಸಿದ್ದರೆನ್ನಲಾದ ಕ್ಯಾಟ್ಫಿಶ್ ಸಾಕಾಣಿಕೆ ಹೊಂಡಗಳ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿರುವುದಾಗಿ ಪ್ರಕಟಣೆ ತಿಳಿಸಿದೆ. ಸಾಕಾಣಿಕೆದಾರರ ಬೆದರಿಕೆ ಹಾಗೂ ಕಾರ್ಯಾಚರಣೆ ತಡೆಯುವ ಪ್ರಯತ್ನಗಳ ನಡುವೆಯೂ ತೆರವು ಮುಂದುವರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಕ್ಷಿಗಳ ಹಾರಾಟ ಕುರಿತು ವಿಮಾನ ನಿಲ್ದಾಣ ಅಧಿಕಾರಿಗಳ ದೂರು
ಈ ಪ್ರದೇಶದಲ್ಲಿ ಪಕ್ಷಿಗಳ ಹಾರಾಟ ಹೆಚ್ಚಾಗಿ ವಿಮಾನಗಳ ಹಾರಾಟಕ್ಕೆ ಆತಂಕ ಉಂಟಾಗುತ್ತಿರುವ ಕುರಿತು ವಿಮಾನ ನಿಲ್ದಾಣ ಅಧಿಕಾರಿಗಳಿಂದ ದೂರು ಬಂದಿತ್ತು ಎಂದು ಪ್ರಕಟಣೆ ತಿಳಿಸಿದೆ. ಈ ಸಾಕಾಣಿಕೆಯಿಂದ ಪರಿಸರಕ್ಕೂ ಹಾನಿಯಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಹಿಂದಿನ ಕಾರ್ಯಾಚರಣೆಗಳ ಬಳಿಕವೂ ಸಂಬಂಧಪಟ್ಟವರು ಮತ್ತೆ ಸಾಕಾಣಿಕೆ ಆರಂಭಿಸಿದ್ದರಿಂದ ಅದನ್ನು ತಡೆಯಲು ಕಠಿಣ ನಿಲುವು ತಳೆಯಲಾಗಿದೆ ಎಂದು ಅಮರ್ ತಿಳಿಸಿದರು. ಮೀನುಗಳ ಸಹಿತ ಹೊಂಡಗಳನ್ನು ಸಂಪೂರ್ಣ ನಾಶಪಡಿಸಲಾಗಿದ್ದು, ಯಾವುದೇ ಬೆದರಿಕೆಗೆ ಮಣಿದಿಲ್ಲ ಎಂದು ಹೇಳಿದರು.
ತಹಶೀಲ್ದಾರ್ ಶೀತಲ್, ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ, ಪೊಲೀಸ್ ಮತ್ತು ಮೀನುಗಾರಿಕೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
