ಮಳೆ ಅವಾಂತರ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲ; ಜನರ ಜೀವಕ್ಕೆ ಬೆಲೆ ಇಲ್ಲ: ಡಾ. ಸಿ.ಎನ್. ಅಶ್ವತ್ಥನಾರಾಯಣ
ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಅವಾಂತರಗಳನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ, ಜನರ ಜೀವಕ್ಕೆ ಯಾವುದೇ ಬೆಲೆ ನೀಡದ ಆಡಳಿತ ರಾಜ್ಯದಲ್ಲಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಮಳೆ ಬಂದರೆ ನಾಗರಿಕರು ಭಯದಲ್ಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಎಲ್ಲ ರೀತಿಯಲ್ಲೂ ವಿಫಲವಾಗಿದ್ದು, ಜನರ ಸುರಕ್ಷತೆಯ ಬಗ್ಗೆ ಯಾವುದೇ ಕಾಳಜಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.
ಇತ್ತೀಚೆಗೆ ಬೌರಿಂಗ್ ಆಸ್ಪತ್ರೆ ಸಮೀಪ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟ ಘಟನೆ ಹಾಗೂ ಗುರುವಾರ ಮತ್ತೊಬ್ಬರು ಗೋಡೆ ಕುಸಿತದಿಂದ ಸಾವನ್ನಪ್ಪಿರುವುದನ್ನು ಉಲ್ಲೇಖಿಸಿದ ಅವರು, ಇವು ಅಧಿಕೃತವಾಗಿ ದಾಖಲಾಗಿರುವ ಸಾವುಗಳು ಮಾತ್ರ. ಗುಂಡಿಗಳಲ್ಲಿ ಬಿದ್ದು, ಮರದ ಕೊಂಬೆಗಳು ಮುರಿದು ಬಿದ್ದು ಸಾವನ್ನಪ್ಪಿದವರ ಲೆಕ್ಕವೇ ಇಲ್ಲ ಎಂದು ಹೇಳಿದರು.
ಮಳೆಗಾಲಕ್ಕೂ ಮುನ್ನ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಯಾವುದೇ ಗಮನವಿಲ್ಲ. ಮಾರತಹಳ್ಳಿ, ಸಿಲ್ಕ್ ಬೋರ್ಡ್, ಕೆ.ಆರ್. ಸರ್ಕಲ್ ಸೇರಿದಂತೆ ಹಲವು ಪ್ರದೇಶಗಳು ಪ್ರತೀ ಮಳೆಯಲ್ಲೂ ಜಲಾವೃತಗೊಳ್ಳುತ್ತಿವೆ. ಆದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ ಎಂದು ದೂರಿದರು.
ಮನೆ ತೆರಿಗೆ, ಘನತ್ಯಾಜ್ಯ ತೆರಿಗೆ, ವಿವಿಧ ಬಳಕೆದಾರರ ಶುಲ್ಕ ಸೇರಿದಂತೆ ಹಲವು ರೂಪಗಳಲ್ಲಿ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸುತ್ತಿದೆ. ಆದರೆ ನಾಗರಿಕರಿಗೆ ಅಗತ್ಯ ಮೂಲಸೌಕರ್ಯ ಮತ್ತು ಸೇವೆಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
“ಮಳೆ ಬಂದರೆ ಇಡೀ ಬೆಂಗಳೂರು ಮುಳುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆಗಳನ್ನು ಪದೇ ಪದೇ ಗಮನಕ್ಕೆ ತಂದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು,” ಎಂದು ಅವರು ಒತ್ತಾಯಿಸಿದರು.
‘ಬ್ರ್ಯಾಂಡ್ ಬೆಂಗಳೂರು’ ಯೋಜನೆಯನ್ನು ಟೀಕಿಸಿದ ಅಶ್ವತ್ಥನಾರಾಯಣ, ಅದು ಕೇವಲ ಘೋಷಣೆಗೆ ಸೀಮಿತವಾಗಿದ್ದು, ವಾಸ್ತವದಲ್ಲಿ ಬೆಂಗಳೂರು ಅವ್ಯವಸ್ಥೆಯ ನಗರವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.
“ಜನರ ಸಮಸ್ಯೆಗಳಿಗಿಂತ ಅಧಿಕಾರದ ಒಳಜಗಳ ಮತ್ತು ಕುರ್ಚಿ ರಾಜಕಾರಣವೇ ಸರ್ಕಾರಕ್ಕೆ ಮುಖ್ಯವಾಗಿದೆ. ಇನ್ನೂ ಮಳೆಗಾಲ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಸ್ವಲ್ಪ ಮಳೆಯಲ್ಲೇ ನಗರ ಅಸ್ತವ್ಯಸ್ತವಾಗುತ್ತಿದೆ. ಮುಂಗಾರು ಆರಂಭಕ್ಕೂ ಮುನ್ನ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕಾಗಿತ್ತು,” ಎಂದು ಹೇಳಿದರು.
ಬೆಸ್ಕಾಂ, ಜಲಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳ ಮೂಲಕ ಸರ್ಕಾರಕ್ಕೆ ಸಾಕಷ್ಟು ಆದಾಯ ಬರುತ್ತಿದೆ. ಆದರೆ ಆ ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಸರ್ಕಾರ ನೂರಾರು ತೆರಿಗೆಗಳು ಹಾಗೂ ಸೆಸ್ಗಳನ್ನು ವಿಧಿಸಿ ಜನರನ್ನು ದೋಚುತ್ತಿದೆ. ಆದರೆ ಅಭಿವೃದ್ಧಿ ಮಾತ್ರ ಕಾಣಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಜನರು ಮಳೆ ನೀರು ಮತ್ತು ಕಣ್ಣೀರನ್ನೇ ನೋಡುತ್ತಿದ್ದಾರೆ ಎಂದು ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್. ಹರೀಶ್ ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ ಉಪಸ್ಥಿತರಿದ್ದರು.
