ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಆತಂಕ: ಇಂಡಿಗೋ ವಿಮಾನದಿಂದ ಪ್ರಯಾಣಿಕರ ತುರ್ತು ತೆರವು, ಸುಳ್ಳು ಎಚ್ಚರಿಕೆ ಎಂದು ಸ್ಪಷ್ಟನೆ
ಬೆಂಗಳೂರು: ದೆಹಲಿ ಕಡೆಗೆ ಹೊರಡಲಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಸಂದೇಶ ಪತ್ತೆಯಾಗಿರುವ ಹಿನ್ನೆಲೆ ಶನಿವಾರ ಸಂಜೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಸಂಜೆ ಸುಮಾರು 7 ಗಂಟೆ ವೇಳೆಗೆ ವಿಮಾನ ಹೊರಡಲು ಸಿದ್ಧವಾಗಿದ್ದಾಗ, ವಿಮಾನದ ಶೌಚಾಲಯದಲ್ಲಿ ಟಿಷ್ಯೂ ಪೇಪರ್ ಮೇಲೆ ‘ವಿಮಾನದಲ್ಲಿ ಬಾಂಬ್ ಇದೆ’ ಎಂಬ ಸಂದೇಶ ಕಂಡುಬಂದಿದ್ದು, ಪ್ರಯಾಣಿಕನೊಬ್ಬ ಈ ವಿಷಯವನ್ನು ಸಿಬ್ಬಂದಿಗೆ ತಿಳಿಸಿದ್ದಾನೆ.
ತಕ್ಷಣವೇ ನಿಯಮಿತ ತುರ್ತು ಕ್ರಮಗಳನ್ನು ಅನುಸರಿಸಿದ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ (ATC)ಗೆ ಮಾಹಿತಿ ನೀಡಿದರು. ಬಳಿಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಿ, ಭದ್ರತಾ ಪಡೆಗಳು ಸಂಪೂರ್ಣ ತಪಾಸಣೆ ನಡೆಸಿದವು.
ವಿಸ್ತೃತ ಪರಿಶೀಲನೆಯ ಬಳಿಕ ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗದ ಕಾರಣ, ಈ ಬೆದರಿಕೆ ಸುಳ್ಳು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ನಂತರ ವಿಮಾನವು ತನ್ನ ಪ್ರಯಾಣವನ್ನು ಪುನರಾರಂಭಿಸಿ ದೆಹಲಿಗೆ ಹೊರಟಿದೆ. ಈ ಘಟನೆಗೆ ಸಂಬಂಧಿಸಿದಂತೆ ಟಿಷ್ಯೂ ಮೇಲೆ ಸಂದೇಶ ಬರೆದ ವ್ಯಕ್ತಿಯನ್ನು ಪತ್ತೆಹಚ್ಚಲು ಭದ್ರತಾ ಸಂಸ್ಥೆಗಳು ತನಿಖೆ ಆರಂಭಿಸಿವೆ.
