ಬೆಂಗಳೂರು : ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್‍ನಲ್ಲಿ ನಡೆದಿದೆ ಎನ್ನಲಾದ 47 ಕೋಟಿ ರೂ. ಅಕ್ರಮ ಆರೋಪ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.
ರಾಮನಗರ ಜಿಲ್ಲೆಯ ಎಂ.ಎಸ್.ಹೊನ್ನಪ್ಪ(55) ಬಂಧಿತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಪ್ರಕರಣದಲ್ಲಿ ಈಗಾಗಲೇ ಬಂಧಿಸಲ್ಪಟ್ಟ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಉಪನಿರ್ದೇಶಕ ಎಸ್.ಶಂಕರಪ್ಪ ಅವರ ಸಹೋದರ ಎನ್ನಲಾಗಿದೆ.
ಆರೋಪಿ ಎಸ್.ಶಂಕರಪ್ಪ ಕಾಮಗಾರಿಗಳನ್ನು ಅನುಷ್ಠಾನಗೊಳಿಸದೆ, ಆ ಬಿಲ್‍ಗಳ ಹಿಂಭಾಗದಲ್ಲಿ ಕಾಮಗಾರಿ ತೃಪ್ತಿಕರವಾಗಿದೆ ಎಂದು 2.06 ಕೋಟಿ ರೂ.ನಲ್ಲಿ 8.75 ಲಕ್ಷ ರೂ. ಅನ್ನು ಜಿಎಸ್‍ಟಿ ತೆರಿಗೆ ಮತ್ತು ಉಪಕರ ಕಟ್ಟಿ ಉಳಿದಂತೆ 1.97 ಕೋಟಿ ರೂ. ಹಣವನ್ನು ಕಂಪೆನಿಯ ಬ್ಯಾಂಕ್ ಖಾತೆ ಮೂಲಕ ಎಸ್.ಎಸ್.ಎಂಟರ್‍ಪ್ರೈಸಸ್ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು. ಈ ಎಸ್.ಎಸ್.ಎಂಟರ್‍ಪ್ರೈಸಸ್ 2022ರ ಮಾ.17ರಂದು ದಂಕಾ ಟ್ರೇಡರ್ಸ್ ಆ್ಯಂಡ್ ಸೇಲ್ಸ್ ಎಂಬ ಮಧ್ಯವರ್ತಿ ವರ್ತಕನಿಗೆ 31.09 ಲಕ್ಷ ರೂ. ವರ್ಗಾವಣೆ ಮಾಡಿದೆ. ಮಧ್ಯವರ್ತಿ ವರ್ತಕರು, ಈ ಹಣದ ಪೈಕಿ 20 ಲಕ್ಷ ರೂ. ಅನ್ನು ಅದೇ ದಿನ ಎಂ.ಎಸ್.ಹೊನ್ನಪ್ಪ ಎಂಬವರ ಖಾತೆಗೆ ವರ್ಗಾಯಿಸಿದ್ದಾರೆ. ಹೀಗಾಗಿ ಹೊನ್ನಪ್ಪರನ್ನು ಬಂಧಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಈಗಾಗಲೇ ಬಿಜೆಪಿ ಮುಖಂಡ ವೀರಯ್ಯ ಹಾಗೂ ಇತರರನ್ನು ಬಂಧಿಸಲಾಗಿದೆ. ಈ ಸಂಬಂಧ ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.