Home ಬೆಂಗಳೂರು ನಗರ ಬಿಜೆಪಿಗೆ ಶಾಶ್ವತ ತಳಹದಿ ಹಾಕಿಕೊಟ್ಟ ಉಪಾಧ್ಯಾಯರು- ಎನ್. ರವಿಕುಮಾರ್

ಬಿಜೆಪಿಗೆ ಶಾಶ್ವತ ತಳಹದಿ ಹಾಕಿಕೊಟ್ಟ ಉಪಾಧ್ಯಾಯರು- ಎನ್. ರವಿಕುಮಾರ್

39
0
deendayal upadhyaya laid foundation for BJP - Ravikumar

ಬೆಂಗಳೂರು:

ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ಬಿಜೆಪಿಗೆ ಶಾಶ್ವತ ತಳಹದಿಯನ್ನು ನೀಡಿದ್ದಾರೆ. ಅವರೊಬ್ಬ ಮೇರು ವ್ಯಕ್ತಿ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯರೂ ಆದ ಶ್ರೀ ಎನ್. ರವಿಕುಮಾರ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಶ್ರೀ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದು ಮಾಡಿದ ಬಿಜೆಪಿ ಕೇಂದ್ರ ಸರಕಾರದ ಮಹತ್ವದ ಕ್ರಮವನ್ನು ಶ್ಲಾಘಿಸಿದರು. ಉಪಾಧ್ಯಾಯರ ಸಿದ್ಧಾಂತದಡಿ ಜನಸಂಘದ ಚಿಹ್ನೆಯಾದ ದೀಪ ಮತ್ತು ಬಿಜೆಪಿ ಚಿಹ್ನೆಯಾದ ಕಮಲವು ದೇಶದಲ್ಲಿ ಬಹಳ ದೊಡ್ಡ ವಿಕಾಸವನ್ನು ಪಡೆದಿದೆ ಎಂದು ಅವರು ತಿಳಿಸಿದರು. ಆದರೆ, ಸಿದ್ಧಾಂತ ಎಲ್ಲೂ ಅಲುಗಾಡಿಲ್ಲ ಎಂದರು.

ಕಾಂಗ್ರೆಸ್ ಪಕ್ಷವು ಎಯಿಂದ ಜೆಡ್ ವರೆಗೆ ವಿಭಜನೆಯಾಗಿದೆ. ಬಿಜೆಪಿ ಹೊರತುಪಡಿಸಿ ಎಲ್ಲ ಪಕ್ಷಗಳು ವಿಭಜನೆಗೊಂಡಿವೆ. ಕಾಶ್ಮೀರದ ಕುರಿತ ನಮ್ಮ ನಾಯಕರ ಕನಸನ್ನು ನನಸು ಮಾಡಿದ ಕೀರ್ತಿ ಶ್ರೀ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ತಿಳಿಸಿ, ಆ ರಾಜ್ಯಕ್ಕೆ ಸಂಬಂಧಿಸಿ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ಮತ್ತು ಶ್ಯಾಮಪ್ರಸಾದ್ ಮುಖರ್ಜಿ ಅವರು ದೊಡ್ಡ ಹೋರಾಟ ಮಾಡಿದ್ದರು. ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಪ್ರಮುಖ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ತಿಳಿಸಿದರು.

ಇಡೀ ದೇಶ ಏಕಾತ್ಮಕತೆಯೊಂದಿಗೆ ಜೋಡಣೆಯಾಗಬೇಕು. ಜಾತಿ, ಮತ, ಪಂಥ, ಧರ್ಮ ಬೇರೆ ಇದ್ದರೂ ಆತ್ಮ ಎಲ್ಲರಿಗೂ ಒಂದೇ ಇರುತ್ತದೆ. ಭಾರತೀಯ ಸಿದ್ಧಾಂತ, ಭಾರತೀಯ ಅಧ್ಯಾತ್ಮದೊಂದಿಗೆ ನಾವೆಲ್ಲರೂ ಒಂದಾಗಬೇಕು ಎಂದು ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ಆಶಿಸಿದ್ದರು. ಅಂಥ ಏಕಾತ್ಮ ಮಾನವವಾದವನ್ನು ಅವರು ನೀಡಿದ್ದು, ಆ ಸಿದ್ಧಾಂತವನ್ನು ನಾವು ಪಾಲಿಸುತ್ತಿದ್ದೇವೆ ಎಂದರು.

ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ನಮ್ಮ ಭಾರತೀಯ ಜನಸಂಘದ ಮೊದಲನೇ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಜನಸಂಘ ಮತ್ತು ಭಾರತೀಯ ಜನತಾ ಪಾರ್ಟಿಗೆ ಅವರು ಸಿದ್ಧಾಂತವನ್ನು ಹಾಕಿಕೊಟ್ಟರು. ಅದೇ ಸಿದ್ಧಾಂತದಡಿ ಬಿಜೆಪಿ ಮುನ್ನಡೆಯುತ್ತಿದೆ ಎಂದು ವಿವರಿಸಿದರು.

ಸ್ವದೇಶಿ ಆರ್ಥಿಕ ಚಿಂತನೆ ಅಥವಾ ಗಾಂಧಿ ಪ್ರಣೀತವಾದ ಆರ್ಥಿಕವಾದ, ಗಾಂಧಿ ಪ್ರಣೀತವಾದ ನೈಜ ಪ್ರಜಾಪ್ರಭುತ್ವ ಮತ್ತು ನಿಜವಾದ ಜಾತ್ಯತೀತವಾದದ ತತ್ವ ಪಾಲಿಸಿಕೊಂಡು ಪಕ್ಷ ಮುಂದೆ ಸಾಗುತ್ತಿದೆ. ಯಾವತ್ತೂ ನಾವು ಭಾರತದ ಏಕತೆಯೊಂದಿಗೆ ರಾಜಿ ಮಾಡಿಕೊಂಡಿಲ್ಲ ಎಂದು ತಿಳಿಸಿದರು.

ಬಡ ವ್ಯಕ್ತಿಗೆ ನ್ಯಾಯದ ಚಿಂತನೆ ಉಪಾಧ್ಯಾಯರ ಪರಿಕಲ್ಪನೆ ಆಗಿತ್ತು. ಅದಕ್ಕಾಗಿ ಕೊನೆಯ ಬಡ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಉಜ್ವಲ, ಕಿಸಾನ್ ಸಮ್ಮಾನ್, ಜನ್‍ಧನ್ ಮತ್ತಿತರ ಯೋಜನೆಗಳನ್ನು ರೂಪಿಸಲಾಗಿದೆ. ಗ್ರಾಮೀಣ ಬಡವರನ್ನು ಗಮನದಲ್ಲಿ ಇಟ್ಟುಕೊಂಡೇ ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ.

ಕಾಂಗ್ರೆಸ್ ನೇತೃತ್ವದಲ್ಲಿ ಹಲವು ದಶಕದ ದೇಶದ ಆಡಳಿತದಲ್ಲಿ ವಿದ್ಯುತ್ ಸಿಗದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ತಿಳಿಸಿದರು. ಕೋವಿಡ್ ಹಿನ್ನೆಲೆಯಲ್ಲಿ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗುತ್ತಿದೆ ಎಂದರು.

ಪಂಡಿತ್ ಉಪಾಧ್ಯಾಯರು ಹಾಕಿಕೊಟ್ಟ ಪಥದಲ್ಲಿ ಬಿಜೆಪಿ ವಿಜಯಪತಾಕೆಯೊಂದಿಗೆ ದೇಶದಲ್ಲಿ ಮುನ್ನಡೆಯುತ್ತಿದೆ. ಎಲ್ಲರೂ ಬಿಜೆಪಿಯನ್ನು ಒಪ್ಪಿಕೊಂಡಿದ್ದಾರೆ ಎಂದರು.

ದೀನ್‍ದಯಾಳ್ ಉಪಾಧ್ಯಾಯರು ಮತ್ತು ಶ್ಯಾಮಪ್ರಸಾದ್ ಮುಖರ್ಜಿ ಅವರು ಸೇರಿಕೊಂಡು ಡಾ. ಅಂಬೇಡ್ಕರ್ ಅವರನ್ನು ಸಂಸದರನ್ನಾಗಿ, ಸಚಿವರನ್ನಾಗಿ ಮಾಡಿದ್ದರು. ಬಿಜೆಪಿ ರಾಷ್ಟ್ರೀಯ ಪಕ್ಷ, ಜಗತ್ತಿನ ನಂಬರ್ ವನ್ ಪಕ್ಷವಾಗಿ ಹೊರಹೊಮ್ಮಲು ಉಪಾಧ್ಯಾಯರು ಹಾಕಿಕೊಟ್ಟ ಭದ್ರ ತಳಪಾಯ ಕಾರಣ ಎಂದು ವಿವರಿಸಿದರು. ಅವರ ಚಿಂತನೆಗಳಿರುವ ಪುಸ್ತಕಗಳನ್ನು ಓದಿಕೊಂಡು ಅವರ ಜೀವನಾದರ್ಶಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕು ಎಂದು ಶ್ರೀ ರವಿಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗಳಾದ ಶ್ರೀ ಲೋಕೇಶ್ ಅಂಬೆಕಲ್ಲು, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಶ್ರೀ ಎಸ್.ಎಸ್. ಮಿಟ್ಟಲ್‍ಕೋಡ್, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಾಲಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here