ಬೆಂಗಳೂರು: ಪಾಲಿಕೆ ಆಡಳಿತದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಲಾಗಿದ್ದು, ನಾಡಿನಲ್ಲಿ ವಾಸಿಸುವ ಎಲ್ಲರೂ ಕನ್ನಡ ಬಳಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಹೇಳಿದರು.
ಜಿಬಿಎ ಕೇಂದ್ರ ಕಚೇರಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ನೌಕರರ ಕನ್ನಡ ಸಂಘದ ವತಿಯಿಂದ ನಡೆದ 71ನೇ ಕನ್ನಡ ರಾಜ್ಯೋತ್ಸವ ಹಾಗೂ ಕರುನಾಡು ಸಾಧಕರಿಗೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್, ನಟ-ನಿರ್ದೇಶಕರಾದ ಟಿ.ಎಸ್. ನಾಗಾಭರಣ ಮತ್ತು ಎಸ್. ನಾರಾಯಣ್, ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಮಹಾಪೌರ ಜೆ. ಹುಚ್ಚಪ್ಪ, ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್, ಕನ್ನಡಪರ ಹೋರಾಟಗಾರ ಎಂ. ತಿಮ್ಮಯ್ಯ, ಹಾಸ್ಯನಟ ಮೂ.ಗು. ಸುರೇಶ್, ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್, ಕನ್ನಡ ಸಂಘದ ಅಧ್ಯಕ್ಷ ಹೆಚ್. ನಂಜಪ್ಪ ಹಾಗೂ ಗೌರವ ಕಾರ್ಯದರ್ಶಿ ಪಿ. ದಯಾನಂದ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಆಡಳಿತ ಕಚೇರಿಗಳಲ್ಲಿ ಹಾಗೂ ನಾಡಿನಲ್ಲಿ ವಾಸಿಸುವ ಎಲ್ಲರೂ ಕನ್ನಡ ಬಳಸಬೇಕು; ಪಾಲಿಕೆಯಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಮಹೇಶ್ವರ ರಾವ್ ಹೇಳಿದರು. ಕಲೆ, ಸಾಹಿತ್ಯ ಕ್ಷೇತ್ರದ ಸಾಧಕರು ಹಾಗೂ ಪಾಲಿಕೆಯ ಅಧಿಕಾರಿ-ನೌಕರರಿಗೆ ಪುನೀತ್ ರಾಜ್ಕುಮಾರ್ ಪ್ರಶಸ್ತಿ ನೀಡಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಮತ್ತು ನೌಕರರು ಉತ್ತಮ ಕೆಲಸ ಮಾಡುತ್ತಿರುವುದರಿಂದ ಇಂದು ಬೆಂಗಳೂರು ವಿಶ್ವಮಾನ್ಯವಾಗಿದೆ ಎಂದರು.
ಕನ್ನಡ ನಿತ್ಯೋತ್ಸವವಾಗಬೇಕು, ಭವಿಷ್ಯದಲ್ಲಿ ಕನ್ನಡಿಗರು ಎದುರಿಸುವ ಸವಾಲುಗಳ ಬಗ್ಗೆ ಚಿಂತಿಸಬೇಕು ಎಂದು ಟಿ.ಎಸ್. ನಾಗಾಭರಣ ಹೇಳಿದರು. ಶಿಕ್ಷಣದಲ್ಲಿ ಕನ್ನಡ ಉಳಿಯಬೇಕು; ಪಾಲಿಕೆ ಶಾಲೆಗಳು ಉತ್ತಮವಾಗಿದ್ದರೂ ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚಾಗಿವೆ. ಪಾಲಿಕೆ ಮನಸ್ಸು ಮಾಡಿದರೆ ನಗರದಲ್ಲಿ ಕನ್ನಡ ಉಳಿಸಿ ಬೆಳೆಸಬಹುದು. ಅನ್ಯ ಭಾಷಿಕರಿಗೆ ಪ್ರೀತಿಯಿಂದ ಕನ್ನಡ ಕಲಿಸಿ, ಶಿಕ್ಷಣ, ಉದ್ಯೋಗ ಮತ್ತು ವ್ಯವಹಾರದಲ್ಲಿ ಕನ್ನಡ ಬಳಸಿ ಎಂದು ಸಲಹೆ ನೀಡಿದರು.
ಬೆಂಗಳೂರು ಸುಂದರ ಹಾಗೂ ಸ್ವಚ್ಛವಾಗಿರುವುದರ ಹಿಂದೆ ಪಾಲಿಕೆಯ ಶ್ರಮವಿದೆ, ಪೌರಕಾರ್ಮಿಕರು ಸ್ವಚ್ಛತಾ ವಾರಿಯರ್ಸ್ ಎಂದು ಎಸ್. ನಾರಾಯಣ್ ಹೇಳಿದರು. ಏಕೀಕರಣಕ್ಕೆ ಶ್ರಮಿಸಿದ ಹೋರಾಟಗಾರರನ್ನು ಸ್ಮರಿಸುವ ದಿನ ಇದಾಗಿದ್ದು, ಕನ್ನಡ ಬಳಸಿದರೆ ಸಾಕು, ಮನೆಯಲ್ಲಿಯೇ ಕನ್ನಡ ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು. ಪುನೀತ್ ರಾಜ್ಕುಮಾರ್ ಇನ್ನಷ್ಟು ಕಾಲ ಬದುಕಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಬೇಕಿತ್ತು ಎಂಬುದು ಕನ್ನಡಿಗರ ಆಶಯವಾಗಿತ್ತು ಎಂದು ಸ್ಮರಿಸಿದರು.
ಕನ್ನಡ ಸಂಘ ಸ್ಥಾಪನೆಯಾಗಿ 30 ವರ್ಷಗಳಾಗಿದ್ದು, ಸ್ವಂತ ವೆಚ್ಚದಲ್ಲಿ ನಡೆಯುತ್ತಿದೆ; ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸಂಘ ರಾಜ್ಯೋತ್ಸವ ಆಚರಿಸುತ್ತಿದೆ ಎಂದು ಜೆ. ಹುಚ್ಚಪ್ಪ ಹೇಳಿದರು. ಕನ್ನಡಕ್ಕೆ ಗೌರವ ನೀಡುವುದು ತಾಯಿಗೆ ಗೌರವ ನೀಡಿದಂತೆ, ಅನ್ಯ ಭಾಷಿಕರು ಕನ್ನಡ ಕಲಿಯಬೇಕು ಎಂದರು. ಪುನೀತ್ ರಾಜ್ಕುಮಾರ್ ಸ್ಮರಣೆಯಲ್ಲಿ ನಾಡು, ನುಡಿ, ಕಲೆ ಮತ್ತು ಸಾಹಿತ್ಯ ಸೇವೆ ಮಾಡಿದವರನ್ನು ಸಂಘ ಗುರುತಿಸಿ ಗೌರವಿಸುತ್ತಿದೆ ಎಂದು ಎ. ಅಮೃತ್ ರಾಜ್ ತಿಳಿಸಿದರು.
ನಟ ಬಾಲರಾಜ್, ಜಾನಪದ ಗಾಯಕ ಗುರುರಾಜ್ ಹೊಸಕೋಟೆ, ನಟ ಶರತ್ ಲೋಹಿತಾಶ್ವ, ನಟಿ ಭವಾನಿ ಪ್ರಕಾಶ್ ಸೇರಿದಂತೆ ಕನ್ನಡಪರ ಹೋರಾಟಗಾರರು, ಸಾಹಿತ್ಯ ಮತ್ತು ಸಂಗೀತ ಸೇವೆ ಸಲ್ಲಿಸಿದವರು, ಪತ್ರಕರ್ತರು ಹಾಗೂ ಪಾಲಿಕೆಯ ಅಧಿಕಾರಿ-ನೌಕರರಿಗೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
