ಬೆಂಗಳೂರು: ವಾರ್ಡ್ ಒನ್ ಅಭಿಯಾನದ ಮೊದಲ ವಾರದಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆ 84.5 ಕಿ.ಮೀ. ರಸ್ತೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ 145 ರಸ್ತೆ ಗುಂಡಿಗಳನ್ನು ದುರಸ್ತಿಪಡಿಸಿದ್ದು, 208 ಕಸದ ಬ್ಲ್ಯಾಕ್ ಸ್ಪಾಟ್ಗಳನ್ನು ತೆರವುಗೊಳಿಸಿ 797 ಟನ್ ನಿರ್ಮಾಣ ತ್ಯಾಜ್ಯವನ್ನು ವಿಲೇವಾರಿ ಮಾಡಿದೆ ಎಂದು ಪಾಲಿಕೆ ನವೆಂಬರ್ 7ರಂದು ತಿಳಿಸಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನ ಹಾಗೂ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನವೆಂಬರ್ 1ರಂದು ಆರಂಭವಾದ ಅಭಿಯಾನ, ನಗರದ ಸ್ವಚ್ಛತೆ, ಪಾದಚಾರಿ ಮಾರ್ಗಗಳ ಸುಧಾರಣೆ, ರಸ್ತೆಗಳ ಸ್ಥಿತಿ, ಕಸದ ಬ್ಲ್ಯಾಕ್ ಸ್ಪಾಟ್ ತೆರವು ಮತ್ತು ಸಾರ್ವಜನಿಕ ಸೌಲಭ್ಯಗಳ ನಿರ್ವಹಣೆಗೆ ಆದ್ಯತೆ ನೀಡಿದೆ. ನವೆಂಬರ್ 1ರಿಂದ 7ರವರೆಗೆ ಪಾಲಿಕೆಯ ವಿವಿಧ ವಿಭಾಗಗಳಲ್ಲಿ ರಸ್ತೆ ನಿರ್ವಹಣೆ, ಕಸ ಮತ್ತು ನಿರ್ಮಾಣ ತ್ಯಾಜ್ಯ ತೆರವು, ಪಾದಚಾರಿ ಮಾರ್ಗ ಸುಧಾರಣೆ, ಚರಂಡಿ ಹೂಳೆತ್ತುವಿಕೆ, ಬೀದಿದೀಪ ನಿರ್ವಹಣೆ, ಉದ್ಯಾನಗಳ ಸ್ವಚ್ಛತೆ ಹಾಗೂ ಸಾರ್ವಜನಿಕ ಸ್ಥಳಗಳ ಸುಧಾರಣೆ ಕಾರ್ಯ ನಡೆಸಲಾಗಿದೆ.
ಮೊದಲ ವಾರದಲ್ಲಿ ನಡೆದ ಕಾಮಗಾರಿಗಳ ವಿವರಗಳನ್ನು ಪಾಲಿಕೆ ಹೀಗೆ ನೀಡಿದೆ:
- 84.5 ಕಿ.ಮೀ. ರಸ್ತೆಯಲ್ಲಿ ಕಾರ್ಯಾಚರಣೆ
- 145 ರಸ್ತೆ ಗುಂಡಿಗಳ ದುರಸ್ತಿ
- 208 ಕಸದ ಬ್ಲ್ಯಾಕ್ ಸ್ಪಾಟ್ಗಳ ತೆರವು
- 182 ಟನ್ ಕಸ ತೆರವು
- 762 ನಿರ್ಮಾಣ ತ್ಯಾಜ್ಯ ಸಂಗ್ರಹ ಸ್ಥಳಗಳ ತೆರವು ಹಾಗೂ 797 ಟನ್ ನಿರ್ಮಾಣ ತ್ಯಾಜ್ಯ ವಿಲೇವಾರಿ
- 173 ಕಡೆ ಪಾದಚಾರಿ ಮಾರ್ಗದ ಅಡೆತಡೆ ತೆರವು
- 20 ರಸ್ತೆ ಜಂಕ್ಷನ್ಗಳ ಸುಧಾರಣೆ
- 8.44 ಕಿ.ಮೀ. ರಸ್ತೆಬದಿ ಚರಂಡಿ ಹಾಗೂ 0.94 ಕಿ.ಮೀ. ಮಳೆನೀರು ಕಾಲುವೆ ಹೂಳೆತ್ತುವಿಕೆ
- 56 ಹೊಸ ಬೀದಿದೀಪ ಅಳವಡಿಕೆ ಹಾಗೂ 154 ಬೀದಿದೀಪಗಳ ದುರಸ್ತಿ
- 90 ಉದ್ಯಾನಗಳ ಸ್ವಚ್ಛತೆ ಹಾಗೂ 10 ಕಡೆ ಸಸಿ ನೆಡುವಿಕೆ
- 673 ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಪೋಸ್ಟರ್ಗಳ ತೆರವು
- 100 ಪರಿತ್ಯಕ್ತ ಹಾಗೂ ಅನಧಿಕೃತವಾಗಿ ನಿಲ್ಲಿಸಿದ್ದ ವಾಹನಗಳ ತೆರವು
- 190 ಮರದ ಕೊಂಬೆಗಳ ಕತ್ತರಿಸುವಿಕೆ ಹಾಗೂ 32.8 ಟನ್ ಮರದ ತ್ಯಾಜ್ಯ ತೆರವು
- 135 ಸಾರ್ವಜನಿಕ ದೂರುಗಳ ಸ್ಥಳದಲ್ಲೇ ಪರಿಹಾರ
ಈ ಅವಧಿಯಲ್ಲಿ 639 ವಾಣಿಜ್ಯ ಮಳಿಗೆಗಳನ್ನು ಪರಿಶೀಲಿಸಲಾಗಿದ್ದು, 261 ಮಳಿಗೆಗಳು ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ. ಘನತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ, ಸ್ವಚ್ಛತೆ ಮತ್ತು ಉದ್ದಿಮೆ ಪರವಾನಗಿ ನಿಯಮ ಉಲ್ಲಂಘನೆಗೆ ಒಟ್ಟು ₹7,22,400 ದಂಡ ವಿಧಿಸಲಾಗಿದೆ.
ಬೆಸ್ಕಾಂ, ಬೆಂಗಳೂರು ಜಲಮಂಡಳಿ, ಅರಣ್ಯ ಮತ್ತು ತೋಟಗಾರಿಕೆ ಇಲಾಖೆಗಳು, ಪಾಲಿಕೆಯ ಆರೋಗ್ಯ ಮತ್ತು ಕೆರೆ ವಿಭಾಗಗಳು, ಬಿಎಂಆರ್ಸಿಎಲ್, ಬಿಡಿಎ ಹಾಗೂ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರ ಸಮನ್ವಯದಲ್ಲಿ ಅಭಿಯಾನ ನಡೆಯುತ್ತಿದೆ. ನೀರಿನ ಸೋರಿಕೆ, ಚೇಂಬರ್ ಮಟ್ಟ ಮತ್ತು ನೀರು ಪೂರೈಕೆ ಸಮಸ್ಯೆಗಳನ್ನು ಜಲಮಂಡಳಿ ಬಗೆಹರಿಸಿದ್ದು, ವಿದ್ಯುತ್ ಕಂಬಗಳು ಮತ್ತು ಇತರ ಅಡೆತಡೆಗಳನ್ನು ಬೆಸ್ಕಾಂ ತೆರವುಗೊಳಿಸಿದೆ.
ವಾರ್ಡ್ಗಳಲ್ಲಿನ ನಾಗರಿಕ ಸಮಸ್ಯೆಗಳನ್ನು ಸಂಬಂಧಿತ ಇಲಾಖೆಗಳ ಸಮನ್ವಯದಲ್ಲಿ ಸ್ಥಳದಲ್ಲೇ ಗುರುತಿಸಿ ಬಗೆಹರಿಸುವ ಕಾರ್ಯ ಮುಂದುವರಿಯಲಿದ್ದು, ಸ್ವಚ್ಛ, ಸುಂದರ ಮತ್ತು ಪಾದಚಾರಿ ಸ್ನೇಹಿ ನಗರ ನಿರ್ಮಾಣ ಉದ್ದೇಶ ಎಂದು ಪಾಲಿಕೆ ತಿಳಿಸಿದೆ.
ಬೆಂಗಳೂರು ಉತ್ತರದಲ್ಲಿ ವಾರ್ಡ್ ಒನ್ ಅಭಿಯಾನದ ದೈನಂದಿನ ಪ್ರಗತಿಯನ್ನು ಪಾಲಿಕೆ ಈ ಹಿಂದೆಯೂ ವರದಿ ಮಾಡಿತ್ತು.
