ಬೆಂಗಳೂರು: ವಸತಿ ಪ್ರದೇಶಗಳಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ 51 ವಾಣಿಜ್ಯ ಮಳಿಗೆಗಳನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮುಚ್ಚಿಸಿ ಬೀಗ ಮುದ್ರೆ ಹಾಕಿದೆ ಎಂದು ಪಾಲಿಕೆಯ ಆರೋಗ್ಯ ಅಧಿಕಾರಿಗಳು ನವೆಂಬರ್ 7ರಂದು ತಿಳಿಸಿದ್ದಾರೆ. ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರ ನಿರ್ದೇಶನದಂತೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಪಾಲಿಕೆ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು 22 ಮಳಿಗೆಗಳಿಗೆ ಬೀಗ ಹಾಕಲಾಗಿದ್ದು, ಜಯನಗರದಲ್ಲಿ 11, ಬೆಂಗಳೂರು ದಕ್ಷಿಣದಲ್ಲಿ 9, ಪದ್ಮನಾಭನಗರದಲ್ಲಿ 6 ಹಾಗೂ ಬಿಟಿಎಂ ಲೇಔಟ್ನಲ್ಲಿ 3 ಮಳಿಗೆಗಳಿಗೆ ಬೀಗ ಹಾಕಲಾಗಿದೆ.
ಬೊಮ್ಮನಹಳ್ಳಿ ವಲಯದಲ್ಲಿ ಜಂಟಿ ಆಯುಕ್ತ ಸತೀಶ್ ಬಾಬು ಅವರ ನೇತೃತ್ವದಲ್ಲಿ ಆರೋಗ್ಯ ಅಧಿಕಾರಿಗಳು ಮತ್ತು ಅರಕೆರೆ ಆರೋಗ್ಯ ಮೇಲ್ವಿಚಾರಕರ ತಂಡ ಅರಕೆರೆ ವಾರ್ಡ್ನ ವಸತಿ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ವ್ಯಾಪಾರಗಳ ವಿರುದ್ಧ ಕ್ರಮ ಕೈಗೊಂಡಿತು.
ಅನಧಿಕೃತವಾಗಿ ಸಂಗ್ರಹಿಸಿದ್ದ ಸುಮಾರು 23 ಗೃಹಬಳಕೆ ಸಿಲಿಂಡರ್ಗಳನ್ನು ಬಳಸಿ ವಾಣಿಜ್ಯ ಉದ್ದೇಶಕ್ಕೆ ನಡೆಯುತ್ತಿದ್ದ ಕ್ಯಾಟರಿಂಗ್ ಕೇಂದ್ರ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಹಾಗೂ ಸುತ್ತಮುತ್ತ ಧೂಮಪಾನಕ್ಕೆ ಅವಕಾಶ ನೀಡುತ್ತಿದ್ದ ಅಂಗಡಿಗಳು, ಫ್ಯಾಬ್ರಿಕೇಷನ್ (ಎಂಜಿನಿಯರಿಂಗ್) ಘಟಕ ಮತ್ತು ಕಾರ್ ವಾಶ್ ಕೇಂದ್ರಕ್ಕೆ ಸ್ಥಳದಲ್ಲೇ ಬೀಗ ಹಾಕಲಾಗಿದೆ.
ವಸತಿ ಪ್ರದೇಶಗಳ ನಿವಾಸಿಗಳ ಶಾಂತಿ, ನೈರ್ಮಲ್ಯ ಮತ್ತು ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ತಿಳಿಸಿದೆ. ವಸತಿ ಬಡಾವಣೆಗಳಲ್ಲಿ ಅನಧಿಕೃತ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ; ನಿಯಮ ಉಲ್ಲಂಘಿಸುವವರ ವಿರುದ್ಧ ಯಾವುದೇ ರಿಯಾಯಿತಿ ಇಲ್ಲದೆ ಕಠಿಣ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ಪಾಲಿಕೆ ಈ ಹಿಂದೆ ವಸತಿ ಪ್ರದೇಶಗಳಲ್ಲಿ 63 ಅಕ್ರಮ ಅಂಗಡಿಗಳಿಗೆ ಬೀಗ ಹಾಕಿತ್ತು.
