ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ವಿವಿಧ ಉಪವಿಭಾಗಗಳ ಸಹಾಯಕ ಕಂದಾಯ ಅಧಿಕಾರಿ (ಎಆರ್ಒ) ಕಚೇರಿಗಳಲ್ಲಿ ನವೆಂಬರ್ 7ರಂದು ನಡೆದ ಇ-ಖಾತಾ ಮೇಳದಲ್ಲಿ ಒಂದೇ ದಿನ 68 ಹೊಸ ಅರ್ಜಿಗಳು ಸ್ವೀಕಾರವಾಗಿದ್ದು, 55 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನ ಹಾಗೂ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ‘ನನ್ನ ಇ-ಖಾತಾ, ನನ್ನ ಹಕ್ಕು’ ಕಾರ್ಯಕ್ರಮದಡಿ ಈ ಮೇಳ ಆಯೋಜಿಸಲಾಗಿತ್ತು. ಇ-ಖಾತಾ, ಖಾತಾ ವರ್ಗಾವಣೆ, ಖಾತಾ ತಿದ್ದುಪಡಿ, ಬಿ-ಖಾತಾದಿಂದ ಎ-ಖಾತಾಕ್ಕೆ ಪರಿವರ್ತನೆ ಹಾಗೂ ಹೊಸ ಖಾತಾ ಸೇವೆಗಳನ್ನು ನಾಗರಿಕರಿಗೆ ಸುಲಭವಾಗಿ ತಲುಪಿಸುವುದು ಇದರ ಉದ್ದೇಶ.
ಪಾಲಿಕೆಯ ಅಂಕಿಅಂಶಗಳ ಪ್ರಕಾರ, ಅಂದು 24 ಇ-ಖಾತಾ ಅರ್ಜಿಗಳು ಸ್ವೀಕಾರವಾಗಿ 24 ವಿಲೇವಾರಿಯಾಗಿದ್ದು, 10 ಬಾಕಿ ಇವೆ. ಖಾತಾ ವರ್ಗಾವಣೆಗೆ 7 ಅರ್ಜಿಗಳು ಬಂದಿದ್ದು 6 ವಿಲೇವಾರಿಯಾಗಿ 1 ಬಾಕಿ ಇದೆ. ಖಾತಾ ತಿದ್ದುಪಡಿಗೆ 27 ಅರ್ಜಿಗಳು ಬಂದಿದ್ದು 20 ವಿಲೇವಾರಿಯಾಗಿ 10 ಬಾಕಿ ಇವೆ. ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ 8 ಅರ್ಜಿಗಳು ಬಂದಿದ್ದು 4 ವಿಲೇವಾರಿಯಾಗಿ 5 ಬಾಕಿ ಇವೆ. ಹೊಸ ಖಾತಾಗೆ 2 ಅರ್ಜಿಗಳು ಬಂದಿದ್ದು ಒಂದು ವಿಲೇವಾರಿಯಾಗಿ ಒಂದು ಬಾಕಿ ಇದೆ.
ಒಟ್ಟಾರೆ 26 ಅರ್ಜಿಗಳು ಬಾಕಿ ಇದ್ದು, ಮೇಳದಲ್ಲಿ 8 ಇ-ಟಿಕೆಟ್ಗಳನ್ನೂ ನೋಂದಾಯಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಕೆ.ಜಿ. ಹಳ್ಳಿ, ಪುಲಿಕೇಶಿನಗರ, ಮಾರುತಿ ಸೇವಾನಗರ, ಎಚ್ಬಿಆರ್ ಲೇಔಟ್, ದಾಸರಹಳ್ಳಿ, ಯಶವಂತಪುರ, ಶೆಟ್ಟಿಹಳ್ಳಿ, ಹೆಬ್ಬಾಳ, ಜೆ.ಸಿ. ನಗರ, ಯಲಹಂಕ ಮತ್ತು ಯಲಹಂಕ ನ್ಯೂ ಟೌನ್ ಸೇರಿದಂತೆ ವಿವಿಧ ಉಪವಿಭಾಗಗಳ ಎಆರ್ಒ ಕಚೇರಿಗಳಲ್ಲಿ ಮೇಳ ನಡೆಯಿತು. ಖಾತಾ ಸೇವೆಗಳ ಪ್ರಕ್ರಿಯೆ, ಬಾಕಿ ಅರ್ಜಿಗಳ ಸ್ಥಿತಿ ಹಾಗೂ ಅಗತ್ಯ ದಾಖಲೆಗಳ ಕುರಿತು ಅಧಿಕಾರಿಗಳು ನಾಗರಿಕರಿಗೆ ಮಾಹಿತಿ ನೀಡಿದರು.
ಆಸ್ತಿ ಸಂಬಂಧಿತ ಸೇವೆಗಳನ್ನು ಸುಲಭಗೊಳಿಸಿ ಅರ್ಜಿ ಪ್ರಕ್ರಿಯೆ ಕುರಿತು ಸ್ಪಷ್ಟತೆ ನೀಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಪಾಲಿಕೆ ತಿಳಿಸಿದೆ.
ನವೆಂಬರ್ 7ರಂದು ಎಆರ್ಒ ಕಚೇರಿಗಳಲ್ಲಿ ಇ-ಖಾತಾ ಮೇಳ ನಡೆಸುವುದಾಗಿ ಜಿಬಿಎ ಈ ಹಿಂದೆ ಪ್ರಕಟಿಸಿತ್ತು.
