ಅಕ್ಟೋಬರ್ 13ರಂದು ಬೆಂಗಳೂರಿನ ಜೆಪಿ ಭವನದಲ್ಲಿ ಎಚ್.ಡಿ. ಕುಮಾರಸ್ವಾಮಿ.
ಬೆಂಗಳೂರು: ನಾಗರಭಾವಿಯ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಒಂದೂವರೆ ವರ್ಷದ ಮಗುವಿಗೆ ಅನಸ್ತೇಶಿಯಾ ನೀಡಿದ ಪರಿಣಾಮ ಮಗು ತೀವ್ರ ಅನಾರೋಗ್ಯಕ್ಕೆ ಗುರಿಯಾಗಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಆಸ್ಪತ್ರೆಯೇ ಜವಾಬ್ದಾರಿ ವಹಿಸಿಕೊಂಡು ಮಗುವಿಗೆ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅವರ ಕಚೇರಿ ನವೆಂಬರ್ 7ರಂದು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಮಂಡ್ಯ ಜಿಲ್ಲೆಯ ಕಟ್ಟೆ ದೊಡ್ಡಿ ಗ್ರಾಮದ ಮಗುವನ್ನು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯದಿಂದ ಅನಸ್ತೇಶಿಯಾ ನೀಡಲಾಗಿದೆ ಎಂದು ಆರೋಪಿಸಿರುವ ಕುಮಾರಸ್ವಾಮಿ, ಮೂರೂವರೆ ತಿಂಗಳಿಂದ ಮಗು ಆಸ್ಪತ್ರೆಯಲ್ಲಿಯೇ ಇದೆ; ಆಸ್ಪತ್ರೆಯ ಆಡಳಿತ ಮಂಡಳಿ ಯಾವುದೇ ಜವಾಬ್ದಾರಿ ವಹಿಸಿಕೊಂಡಿಲ್ಲ ಎಂದು ದೂರಿದ್ದಾರೆ.
ರಾಜ್ಯದ ಆರೋಗ್ಯ ಸಚಿವರು ಇಂತಹ ಆಸ್ಪತ್ರೆಗಳ ಮೇಲೆ ನಿಗಾ ಇಡಬೇಕು; ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಸರ್ಕಾರ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
“ಕ್ಲೌಡ್ ನೈನ್ ಆಸ್ಪತ್ರೆಗೆ ಜವಾಬ್ದಾರಿ ಇಲ್ಲವಾ? ಆಸ್ಪತ್ರೆಯವರು ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಬೇಕು, ಇಲ್ಲವೇ ಸರ್ಕಾರವಾದರೂ ಮಗುವಿನ ಚಿಕಿತ್ಸೆಯ ಜವಾಬ್ದಾರಿ ವಹಿಸಿಕೊಳ್ಳಬೇಕು” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ; ಅವರ ಅಸಡ್ಡೆಯಿಂದ ಮಗುವಿನ ತಂದೆ-ತಾಯಿ ರಸ್ತೆಯಲ್ಲಿ ಮಲಗಿದ್ದಾರೆ ಎಂದು ಹೇಳಿರುವ ಅವರು, “ಕೂಡಲೇ ಸಮಸ್ಯೆ ಸರಿಪಡಿಸಿ, ಇಲ್ಲವಾದರೆ ನಾನೇ ಆಸ್ಪತ್ರೆಗೆ ಬರಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
