ಬೆಂಗಳೂರು:
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾಕವಿ ಕುವೆಂಪು ರಸ್ತೆಯಲ್ಲಿರುವ ಮರಿಯಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಶನಿವಾರ ಉದ್ಯೋಗ ಮೇಳ ನಡೆಯಿತು. ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರೂ ಆಗಿರುವ ಕ್ಷೇತ್ರದ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಏರ್ಪಡಿಸಿದ್ದರು.
ಈ ಮೇಳದಲ್ಲಿ 44 ಕಂಪನಿಗಳು ಭಾಗವಹಿಸಿದ್ದು, ಒಟ್ಟು 1,085 ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರು ನೋಂದಾಯಿಸಿಕೊಂಡು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಇವರ ಪೈಕಿ 115 ಮಂದಿಗೆ ಸಂಜೆಯ ಹೊತ್ತಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದರ ಜತೆಗೆ, 535 ಅಭ್ಯರ್ಥಿಗಳು ಎರಡನೇ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಅಗತ್ಯವಿರುವ ಕೌಶಲ್ಯಗಳನ್ನು ಇಲಾಖೆಯ ವತಿಯಿಂದ ಉಚಿತವಾಗಿ ನೀಡಲಾಗುವುದು. ಇದರಲ್ಲಿ ಕಾರ್ಪೊರೇಟ್ ಜಗತ್ತಿನಲ್ಲಿ ಅಗತ್ಯವಿರುವ ಇಂಗ್ಲಿಷ್ ಭಾಷಾ ಸಂವಹನವನ್ನೂ ಕಲಿಸಲಾಗುವುದು. ಅಲ್ಲದೆ, ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಕಾಲೇಜುಗಳಲ್ಲಿ ಹಂತಹಂತವಾಗಿ ಮತ್ತು ವ್ಯವಸ್ಥಿತವಾಗಿ ಉದ್ಯೋಗ ಮೇಳಗಳನ್ನು ಏರ್ಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮೇಳದಲ್ಲಿ ಬೆಂಗಳೂರು ನಗರ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಎಲ್.ಕೃಷ್ಣಮೂರ್ತಿ, ಮರಿಯಪ್ಪ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಬಿ.ಲೋಕೇಶ್ ಮತ್ತು ಸಂಸ್ಥೆಯ ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.