ಬೆಂಗಳೂರು: ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಬಳಿಕ 397 ಹೆಸರುಗಳಿಗೆ 803 ಮತದಾರರ ಗುರುತಿನ ಚೀಟಿಗಳು ಜೋಡಣೆಯಾಗಿವೆ ಎಂಬ ಮಾಧ್ಯಮ ವರದಿಯಲ್ಲಿನ ಅಂಶಗಳು ದತ್ತಾಂಶ ಸಂಸ್ಕರಣೆಯ ವೇಳೆ ಉಂಟಾದ ಎರಡು ಪ್ರತ್ಯೇಕ ಪ್ರಕ್ರಿಯಾ ಸನ್ನಿವೇಶಗಳಿಂದಾಗಿವೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿ ಸ್ಪಷ್ಟಪಡಿಸಿದ್ದು, ಈ ಪ್ರಕರಣಗಳನ್ನು ಪರಿಶೀಲನೆ ಹಾಗೂ ಪರಿಹಾರ ಕ್ರಮಕ್ಕಾಗಿ ಚುನಾವಣಾ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದೆ.
“803 Voter IDs Linked to 397 Names After SIR” ಶೀರ್ಷಿಕೆಯ ವರದಿಯನ್ನು ಗಮನಿಸಿರುವುದಾಗಿ ನವೆಂಬರ್ 7ರ ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿರುವ ಸಿಇಒ ಕಚೇರಿ, ಅದರ ಹಿನ್ನೆಲೆಯನ್ನು ವಿವರಿಸಿದೆ.
ಕಚೇರಿಯ ಪ್ರಕಾರ, ಎಸ್ಐಆರ್ ವೇಳೆ ಕೆಲವು ಅರ್ಜಿದಾರರು ನಾಗರಿಕ ಸೇವಾ ಪೋರ್ಟಲ್ ಮೂಲಕ ಹಲವು ಬಾರಿ ನಮೂನೆ-6 ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳನ್ನು ಪ್ರತ್ಯೇಕವಾಗಿ ಸಂಸ್ಕರಿಸಿದ್ದರಿಂದ ಒಂದೇ ವ್ಯಕ್ತಿಗೆ ಅಚಾತುರ್ಯದಿಂದ ಹಲವು ಮತದಾರರ ಫೋಟೋ ಗುರುತಿನ ಚೀಟಿ (ಎಪಿಕ್) ಸಂಖ್ಯೆಗಳು ಸೃಷ್ಟಿಯಾಗಿವೆ.
ಇನ್ನು ಕೆಲವು ಪ್ರಕರಣಗಳಲ್ಲಿ, ವಾಸಸ್ಥಳ ಬದಲಾವಣೆಗೆ ಸಲ್ಲಿಸಿದ ನಮೂನೆ-8 ಅರ್ಜಿಗಳು ಅನುಮೋದನೆಗೊಂಡು ಮತದಾರರ ಹೆಸರು ಹೊಸ ವಿಧಾನಸಭಾ ಕ್ಷೇತ್ರದ ಪಟ್ಟಿಗೆ ಸೇರ್ಪಡೆಯಾಗಿದ್ದರೂ, ಹಿಂದಿನ ಕ್ಷೇತ್ರದಿಂದ ಹೆಸರು ತೆಗೆಯಲು ಸಲ್ಲಿಸಿದ್ದ ನಮೂನೆ-7 ಅರ್ಜಿಗಳು ಬಾಕಿ ಉಳಿದಿದ್ದವು. ಅಂತಿಮ ಮತದಾರರ ಪಟ್ಟಿ ಪ್ರಕಟಣೆಗಾಗಿ ಕಾನೂನಿನ ಪ್ರಕಾರ ಮತದಾರರ ಪಟ್ಟಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದರಿಂದ ಹೀಗಾಗಿದೆ ಎಂದು ಕಚೇರಿ ತಿಳಿಸಿದೆ.
ಒಬ್ಬರೇ ಮತದಾರರಿಗೆ ಹಲವು ಎಪಿಕ್ ಸಂಖ್ಯೆಗಳು ಇರುವುದು ಹಾಗೂ ಎರಡು ಕ್ಷೇತ್ರಗಳಲ್ಲಿ ಒಂದೇ ಎಪಿಕ್ ಕಾಣಿಸಿಕೊಂಡಿರುವುದು ಈ ಅರ್ಜಿ ಸಂಸ್ಕರಣಾ ಪ್ರಕ್ರಿಯೆಯ ನೇರ ಪರಿಣಾಮ ಎಂದು ಅದು ಹೇಳಿದೆ.
ಈ ಪ್ರಕರಣಗಳನ್ನು ಈಗಾಗಲೇ ಸಂಬಂಧಿತ ಜಿಲ್ಲಾ ಚುನಾವಣಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಪರಿಶೀಲನೆ ಮತ್ತು ಕಾನೂನಿನ ಪ್ರಕಾರ ಅಗತ್ಯ ಪರಿಹಾರ ಕ್ರಮಕ್ಕಾಗಿ ಕಳುಹಿಸಲಾಗಿದೆ. ಮತದಾರರ ಪಟ್ಟಿಯ ನಿಖರತೆ, ಪಾರದರ್ಶಕತೆ ಮತ್ತು ಸಮಗ್ರತೆ ಕಾಪಾಡಲು ಚುನಾವಣಾ ಆಯೋಗ ಬದ್ಧವಾಗಿದೆ ಎಂದು ಪತ್ರಿಕಾ ಟಿಪ್ಪಣಿ ತಿಳಿಸಿದೆ.
ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27ರಂದು 4.55 ಕೋಟಿ ಮತದಾರರೊಂದಿಗೆ ಪ್ರಕಟವಾಗಿತ್ತು.
