ಬೆಂಗಳೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಹಾಗೂ 75 ವರ್ಷಗಳ ಸೇವಾ ಪಯಣದ ಸವಿನೆನಪಿನಲ್ಲಿ ಆಚರಿಸಲಾಗುತ್ತಿರುವ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ನವೆಂಬರ್ 7ರಂದು ಧ್ವಜ ಚೀಟಿಗಳನ್ನು ಬಿಡುಗಡೆಗೊಳಿಸಿದರು.
ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಧ್ವಜ ಚೀಟಿಗಳನ್ನು ಬಿಡುಗಡೆ ಮಾಡಿದ ಅವರು, ಸಂಸ್ಥೆಯ 75 ವರ್ಷಗಳ ಸೇವೆ ಮತ್ತು ಸಾಧನೆಯ ಮೈಲಿಗಲ್ಲಿಗೆ ಶುಭ ಹಾರೈಸಿದರು.
ಪ್ರತಿ ವರ್ಷ ನವೆಂಬರ್ 7ರಂದು ದೇಶಾದ್ಯಂತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ. ಶಿಸ್ತು, ಸೇವಾ ಮನೋಭಾವ, ನಾಯಕತ್ವ ಹಾಗೂ ದೇಶಪ್ರೇಮದ ಮೌಲ್ಯಗಳನ್ನು ಮಕ್ಕಳು ಮತ್ತು ಯುವಜನರಲ್ಲಿ ಬೆಳೆಸುವಲ್ಲಿ ಸಂಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಘಟಕದ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಡಾ. ಪಿ.ಜಿ.ಆರ್. ಸಿಂಧ್ಯಾ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
