ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ ಸಚಿವ ರಿಜ್ವಾನ್ ಅರ್ಷದ್. ಚಿತ್ರ: ವಿಡಿಯೋ ಸ್ಕ್ರೀನ್‌ಶಾಟ್
ಬೆಂಗಳೂರು: ರಾಜ್ಯದ E20 ಇಂಧನ ಪರೀಕ್ಷಾ ಫಲಿತಾಂಶಗಳ ಕುರಿತು IOCL, BPCL ಮತ್ತು HPCL ಕಂಪನಿಗಳು ಜಂಟಿಯಾಗಿ ಬಿಡುಗಡೆ ಮಾಡಿರುವ ಹೇಳಿಕೆಯನ್ನು ಕರ್ನಾಟಕ ಸರ್ಕಾರ ಪರಿಶೀಲಿಸಿದೆ. ಕರ್ನಾಟಕ ಸರ್ಕಾರವು ತನ್ನ ಪರೀಕ್ಷಾ ಫಲಿತಾಂಶಗಳು ಮತ್ತು ಅವುಗಳ ಆಧಾರದ ಮೇಲೆ ವ್ಯಕ್ತಪಡಿಸಿರುವ ನಿಲುವಿಗೆ ಬದ್ಧವಾಗಿದೆ. ತೈಲ ಮಾರುಕಟ್ಟೆ ಕಂಪನಿಗಳ (OMCs) ಪ್ರಕಟಣೆಯಲ್ಲಿ ತಾಂತ್ರಿಕ ಅಂಶಗಳ ಕುರಿತು ಸುದೀರ್ಘ ವಿವರಣೆಗಳಿವೆಯೇ ಹೊರತು, ಅತ್ಯಂತ ಮುಖ್ಯವಾದ ಪ್ರಶ್ನೆಗೆ ಯಾವುದೇ ಉತ್ತರ ನೀಡಿಲ್ಲ. ಆ ಪ್ರಶ್ನೆಯೆಂದರೆ: ನಮ್ಮ ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಪ್ರಮಾಣದ ಎಥನಾಲ್ ಇದೆ?
E20 ಇಂಧನದ ಕುರಿತು ಕಳವಳ ವ್ಯಕ್ತಪಡಿಸಿರುವ ಪ್ರತಿಯೊಂದು ಧ್ವನಿಯನ್ನೂ ಹಿಂದೆ ಸರಿಯುವಂತೆ ಮಾಡಲಾಗಿದೆ. 2026ರ ಜುಲೈ 28ರಂದು Society of Indian Automobile Manufacturers (SIAM) ಸಂಸ್ಥೆಯು E20 ಇಂಧನದಲ್ಲಿರುವ ಕ್ಲೋರೈಡ್ ಮತ್ತು ಸಲ್ಫರ್ ಅಂಶಗಳು ಹಾಗೂ ಅವು ವಾಹನಗಳ ಬಿಡಿಭಾಗಗಳಿಗೆ ಉಂಟುಮಾಡುತ್ತಿರುವ ಹಾನಿಯ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಆದರೆ, ಕೇಂದ್ರ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ಕೇವಲ ಒಂದು ವಾರದೊಳಗೆ ಆ ಪತ್ರವನ್ನು ಹಿಂಪಡೆಯಲಾಯಿತು.
ACKO ವಿಮಾ ಸಂಸ್ಥೆಯು ಗ್ರಾಹಕರೊಬ್ಬರಿಗೆ, ‘ತಪ್ಪಾದ ಇಂಧನ ಬಳಕೆಯಿಂದ ಎಂಜಿನ್‌ಗೆ ಉಂಟಾಗುವ ಹಾನಿಗೆ ವಿಮಾ ರಕ್ಷಣೆ ಲಭ್ಯವಿರುವುದಿಲ್ಲ’ ಎಂದು ತಿಳಿಸಿತ್ತು. Hyundai, Toyota ಸೇರಿದಂತೆ ಇತರೆ ವಾಹನ ತಯಾರಿಕಾ ಕಂಪನಿಗಳು ತಮ್ಮ ವಾಹನಗಳ ಬಳಕೆದಾರರ ಕೈಪಿಡಿಗಳಲ್ಲಿ E10 ಹೊರತುಪಡಿಸಿ ಬೇರೆ ಇಂಧನವನ್ನು ಬಳಸಿದಲ್ಲಿ ವಾಹನದ ವಾರಂಟಿ ರದ್ದಾಗುತ್ತದೆ ಎಂದು ಉಲ್ಲೇಖಿಸಿದ್ದವು.
ಆದರೆ, ಪ್ರತಿಯೊಂದು ಸಂದರ್ಭದಲ್ಲಿಯೂ ಸಂಬಂಧಿತ ಹೇಳಿಕೆಗಳನ್ನು ಮೃದುಗೊಳಿಸಲಾಯಿತು ಅಥವಾ ಹಿಂಪಡೆಯಲಾಯಿತು. Automotive Research Association of India (ARAI) ಸಿದ್ಧಪಡಿಸಿರುವ ವರದಿಯನ್ನು ಇಂದಿಗೂ ಸಾರ್ವಜನಿಕರಿಗೆ ಬಹಿರಂಗಪಡಿಸಲಾಗಿಲ್ಲ.
E20 ಇಂಧನವು ಇನ್ನೂ ಪ್ರಯೋಗಾತ್ಮಕ ಹಂತದಲ್ಲಿದೆ ಎಂದು ಭಾರತದ ಅಟಾರ್ನಿ ಜನರಲ್ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಆದರೆ, ನಂತರ ಅವರ ಕಚೇರಿಯಿಂದ ಈ ಕುರಿತು ಸ್ಪಷ್ಟೀಕರಣ ಹೊರಡಿಸಲಾಯಿತು.
ಈ ಎಲ್ಲ ಬೆಳವಣಿಗೆಗಳು ಒಂದು ನಿರ್ದಿಷ್ಟ ಮಾದರಿಯನ್ನು ಸ್ಪಷ್ಟಪಡಿಸುತ್ತವೆ: ನೀತಿಯನ್ನು ಪ್ರಶ್ನಿಸಿದರೆ, ಅಂತಹ ಧ್ವನಿಯನ್ನು ಅಡಗಿಸಲಾಗುತ್ತದೆ. ಉದ್ಯಮ ಸಂಘಟನೆಗಳು ಮತ್ತು ಕಂಪನಿಗಳು ಒತ್ತಡಕ್ಕೆ ಮಣಿದು ಹಿಂದೆ ಸರಿಯಬಹುದು. ಆದರೆ, ಕರ್ನಾಟಕ ಸರ್ಕಾರ ಮಾತ್ರ ಈ ವಿಷಯದಲ್ಲಿ ಹಿಂದೆ ಸರಿಯುವುದಿಲ್ಲ.
ಮಾನ್ಯ ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ ಸಚಿವರಾದ ಶ್ರೀ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ತೈಲ ಮಾರುಕಟ್ಟೆ ಕಂಪನಿಗಳು ಮುಂದಿಟ್ಟಿರುವ ಪ್ರತಿಯೊಂದು ವಾದಕ್ಕೂ ಕೆಳಕಂಡಂತೆ ಪ್ರತಿಕ್ರಿಯಿಸುತ್ತದೆ.
1. ಮಾದರಿ ಸಂಗ್ರಹಣೆ (Sampling)
ತೈಲ ಮಾರುಕಟ್ಟೆ ಕಂಪನಿಗಳ ವಾದ: Motor Spirit and High Speed Diesel Order, 2005ರ ನಿಯಮಾವಳಿಗಳ ಪ್ರಕಾರ ಇಂಧನದ ಮಾದರಿಗಳನ್ನು ಸಂಗ್ರಹಿಸಿಲ್ಲ.
ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ:
ಮಾದರಿ ಸಂಗ್ರಹಣೆಯು ಕಾನೂನುಬದ್ಧವಾಗಿ ನಡೆದಿಲ್ಲ ಎಂಬ ತೈಲ ಮಾರುಕಟ್ಟೆ ಕಂಪನಿಗಳ ವಾದ ಸಂಪೂರ್ಣ ಸುಳ್ಳಾಗಿದೆ.
ಪ್ರತಿಯೊಂದು ಮಾದರಿಯನ್ನೂ Motor Spirit and High Speed Diesel (Regulation of Supply, Distribution and Prevention of Malpractices) Order, 2005ರ ಕಲಂ 7ರ ಅಡಿಯಲ್ಲಿ ಅಧಿಕಾರ ಪಡೆದ ಅಧಿಕಾರಿಗಳೇ ಸಂಗ್ರಹಿಸಿದ್ದಾರೆ.
ಸದರಿ ಆದೇಶದ ಕಲಂ 8(3)ರ ಪ್ರಕಾರ, ಪ್ರತಿಯೊಂದು ಮಾದರಿಯ ಲೇಬಲ್‌ಗೆ ಅಧಿಕೃತ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಡೀಲರ್ ಅಥವಾ ಅವರ ಪ್ರತಿನಿಧಿಗಳು ಜಂಟಿಯಾಗಿ ಸಹಿ ಮಾಡಿದ್ದಾರೆ.
ಮಾದರಿ ಸಂಗ್ರಹಿಸುವ ಸಮಯದಲ್ಲಿಯೇ ಇಂಧನದ ಸಾಂದ್ರತೆಯನ್ನು (Density) ದಾಖಲಿಸುವುದರೊಂದಿಗೆ, ನಿಗದಿತ ನಮೂನೆಯನ್ನು (Prescribed Proforma) ಸ್ಥಳದಲ್ಲಿಯೇ ಭರ್ತಿ ಮಾಡಲಾಗಿದೆ.
ಕರ್ನಾಟಕ ಸರ್ಕಾರವು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ಏಕೈಕ ಉದ್ದೇಶದಿಂದ, ಸಂಬಂಧಪಟ್ಟ ಆದೇಶದ ಪ್ರತಿಯೊಂದು ನಿಯಮವನ್ನೂ ಅದರ ಅಕ್ಷರಶಃ ಅರ್ಥದಲ್ಲಿ ಹಾಗೂ ಆಶಯಕ್ಕೆ ಅನುಗುಣವಾಗಿ ಪಾಲಿಸಿದೆ.
2. ಪರೀಕ್ಷಾ ವಿಧಾನ ಮತ್ತು ಪ್ರಯೋಗಾಲಯಗಳು (Testing Methodology and Laboratories)
ತೈಲ ಮಾರುಕಟ್ಟೆ ಕಂಪನಿಗಳ ವಾದ: ತಾಂತ್ರಿಕವಾಗಿ ನಿಗದಿತ ನಿಯಮಗಳನ್ನು ಪಾಲಿಸಿಲ್ಲ ಹಾಗೂ ಆದೇಶದಲ್ಲಿ ನಿರ್ದಿಷ್ಟಪಡಿಸಿರುವ ಪ್ರಯೋಗಾಲಯಗಳನ್ನು ಪರೀಕ್ಷೆಗೆ ಬಳಸಿಲ್ಲ.
ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ:
ಆರಂಭದಲ್ಲಿ ಸಂಗ್ರಹಿಸಲಾದ 63 ಮಾದರಿಗಳನ್ನು ಮೊದಲು IOCL, BPCL ಮತ್ತು HPCL ಕಂಪನಿಗಳ ಸ್ವಂತ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ನೀಡಲಾಗಿತ್ತು. ಆದರೆ, ಅವುಗಳ ಯಾವುದೇ ಪರೀಕ್ಷಾ ವರದಿಯಲ್ಲಿ ಎಥನಾಲ್‌ನ ಪ್ರಮಾಣವನ್ನು (Ethanol Percentage) ನಮೂದಿಸಿರಲಿಲ್ಲ.
ತೈಲ ಮಾರುಕಟ್ಟೆ ಕಂಪನಿಗಳೇ ಉಲ್ಲೇಖಿಸಿರುವ IS 17021:2018 ಮಾನದಂಡದಲ್ಲಿ ಎಥನಾಲ್ ಅಂಶವನ್ನು ಪರೀಕ್ಷಿಸುವ ವಿಧಾನವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಲಾಗಿದೆ. ಆದಾಗ್ಯೂ, ಯಾವುದೇ ಒಂದು ತೈಲ ಮಾರುಕಟ್ಟೆ ಕಂಪನಿಯ ಪರೀಕ್ಷಾ ವರದಿಯಲ್ಲಿಯೂ ಎಥನಾಲ್‌ನ ಪ್ರಮಾಣವನ್ನು ನಮೂದಿಸಿರಲಿಲ್ಲ.
ಅಗತ್ಯವಿರುವ ಪರೀಕ್ಷಾ ಫಲಿತಾಂಶವನ್ನು ಒದಗಿಸುವಲ್ಲಿ ತೈಲ ಮಾರುಕಟ್ಟೆ ಕಂಪನಿಗಳ ಪ್ರಯೋಗಾಲಯಗಳು ವಿಫಲವಾದುದೇ ಅನುಮಾನಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ನಡೆಸಿದ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಯಾವುದೇ ಆಧಾರದ ಮೇಲೆ ಪ್ರಶ್ನಿಸಲು ಸಾಧ್ಯವಿಲ್ಲ.
ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ, ನಂತರ ಈ ಮಾದರಿಗಳನ್ನು NABL ಮಾನ್ಯತೆ ಪಡೆದ ಹಾಗೂ ISO ಪ್ರಮಾಣೀಕೃತ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಯಿತು.
NABL ಎಂದರೇನು?
National Accreditation Board for Testing and Calibration Laboratories (NABL) ಎಂಬುದು Quality Council of India (QCI) ಸಂಸ್ಥೆಯ ಒಂದು ಅಂಗಸಂಸ್ಥೆಯಾಗಿದೆ.
1996ರಲ್ಲಿ ಕೇಂದ್ರ ಸಚಿವ ಸಂಪುಟದ ನಿರ್ಧಾರದ ಮೇರೆಗೆ QCIಯನ್ನು ರಾಷ್ಟ್ರೀಯ ಮಾನ್ಯತಾ ಸಂಸ್ಥೆಯಾಗಿ ಸ್ಥಾಪಿಸಲಾಯಿತು.
ಇದು ಭಾರತ ಸರ್ಕಾರ ಹಾಗೂ ಭಾರತೀಯ ಉದ್ಯಮ ವಲಯದ (ASSOCHAM, CII ಮತ್ತು FICCI) ಬೆಂಬಲ ಹೊಂದಿರುವ ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಯಾಗಿದೆ. ಇದರ ನೋಡಲ್ ಇಲಾಖೆಯು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ DPIIT (Department for Promotion of Industry and Internal Trade) ಆಗಿದೆ.
ಹೀಗಿರುವಾಗ, NABL ಮಾನ್ಯತೆ ಪಡೆದ ಪ್ರಯೋಗಾಲಯಗಳ ಪರೀಕ್ಷಾ ಫಲಿತಾಂಶಗಳನ್ನು ಪ್ರಶ್ನಿಸುವುದು ಎಂದರೆ, ಭಾರತ ಸರ್ಕಾರದ ಸ್ವಂತ ಮಾನ್ಯತಾ ವ್ಯವಸ್ಥೆಯಡಿ ಅನುಮೋದನೆ ಪಡೆದ ಪ್ರಯೋಗಾಲಯಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದಂತಾಗುತ್ತದೆ.
3. ಗುಣಮಟ್ಟದ ಮೇಲ್ವಿಚಾರಣೆ (Quality Monitoring)
ತೈಲ ಮಾರುಕಟ್ಟೆ ಕಂಪನಿಗಳ ವಾದ: ತಮ್ಮದೇ ಆದ ಗುಣಮಟ್ಟದ ಮೇಲ್ವಿಚಾರಣಾ ವ್ಯವಸ್ಥೆಯ ಪರೀಕ್ಷೆಗಳು ಇಂಧನವು ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿದೆ ಎಂಬುದನ್ನು ದೃಢಪಡಿಸಿವೆ.
ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ:
ತಮ್ಮದೇ ಆದ ಪ್ರಯೋಗಾಲಯಗಳಲ್ಲಿ 56 ಮಾದರಿಗಳನ್ನು ಪರೀಕ್ಷಿಸಿರುವುದು, ಗರಿಷ್ಠವಾಗಿ ಹೇಳುವುದಾದರೆ, ತೈಲ ಮಾರುಕಟ್ಟೆ ಕಂಪನಿಗಳು ತಮ್ಮದೇ ಗುಣಮಟ್ಟವನ್ನು ತಾವೇ ಮೇಲ್ವಿಚಾರಣೆ ಮಾಡಿಕೊಂಡಿರುವುದನ್ನು ಮಾತ್ರ ಸೂಚಿಸುತ್ತದೆ.
ಇಂಧನವು ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಸ್ವತಂತ್ರ ತೃತೀಯ ಸಂಸ್ಥೆಯ ಮೂಲಕ ದೃಢಪಡಿಸಬೇಕಾಗುತ್ತದೆ.
ಕರ್ನಾಟಕ ಸರ್ಕಾರವು ಎಲ್ಲಾ ನಿಗದಿತ ಪ್ರಕ್ರಿಯೆಗಳನ್ನು ಅನುಸರಿಸಿ ಇಂತಹ ಪರೀಕ್ಷೆ ನಡೆಸಿದಾಗ, ತೈಲ ಮಾರುಕಟ್ಟೆ ಕಂಪನಿಗಳ ಗುಣಮಟ್ಟದ ಮೇಲ್ವಿಚಾರಣೆಯು ತಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯುತ್ತಿರುವುದು ಬಹಿರಂಗವಾಗಿದೆ.
ಕರ್ನಾಟಕ ಸರ್ಕಾರವು ತಾಂತ್ರಿಕ ವಿವರಣೆಗಳ ಗೊಂದಲದಲ್ಲಿ ಸಿಲುಕಿಕೊಳ್ಳುವುದಿಲ್ಲ. ಕರ್ನಾಟಕದ ಜನರ ಹಿತಾಸಕ್ತಿಯ ದೃಷ್ಟಿಯಿಂದ ತೈಲ ಮಾರುಕಟ್ಟೆ ಕಂಪನಿಗಳನ್ನು ಯಾವಾಗಲೂ ಹೊಣೆಗಾರರನ್ನಾಗಿ ಮಾಡುತ್ತದೆ.
4. ಸಾಂದ್ರತೆಯ ದಾಖಲೆಗಳು ಮತ್ತು ಗುಣಮಟ್ಟದ ಮಾನದಂಡಗಳ ಪಾಲನೆ (Density Readings and Quality Compliance)
ತೈಲ ಮಾರುಕಟ್ಟೆ ಕಂಪನಿಗಳ ವಾದ: ಪರೀಕ್ಷಾ ಪ್ರಮಾಣಪತ್ರಗಳಲ್ಲಿರುವ ಸಾಂದ್ರತೆಯ ದಾಖಲೆಗಳು (Density Readings) ಅನುಮಾನಾಸ್ಪದವಾಗಿವೆ.
ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ:
ಈ ವಿಷಯದಲ್ಲಿ ಕರ್ನಾಟಕ ಸರ್ಕಾರದ ನಿಲುವು ಸ್ಪಷ್ಟವಾಗಿದೆ.
Motor Spirit and High Speed Diesel (Regulation of Supply, Distribution and Prevention of Malpractices) Order, 2005ರ ಪ್ರಕಾರ, ಪ್ರತಿಯೊಂದು ಮಾದರಿಯನ್ನು ಸಂಗ್ರಹಿಸುವ ಸಮಯದಲ್ಲಿಯೇ ಪೆಟ್ರೋಲ್‌ನ ಸಾಂದ್ರತೆಯನ್ನು ನಿಗದಿತ ನಮೂನೆಯಲ್ಲಿ ದಾಖಲಿಸಲಾಗುತ್ತದೆ.
ಆ ನಮೂನೆಗೆ ಸಂಬಂಧಪಟ್ಟ ಅಧಿಕೃತ ಅಧಿಕಾರಿಗಳು ಸಹಿ ಮಾಡಿದ್ದಾರೆ. ಪ್ರಯೋಗಾಲಯಗಳ ಪರೀಕ್ಷಾ ಫಲಿತಾಂಶಗಳಲ್ಲಿರುವ ಸಾಂದ್ರತೆಯ ಮೌಲ್ಯಗಳು ಮಾದರಿ ಸಂಗ್ರಹಿಸುವ ಸಮಯದಲ್ಲಿ ದಾಖಲಿಸಿ ಸಹಿ ಮಾಡಲಾದ ಸಾಂದ್ರತೆಯ ಮೌಲ್ಯಗಳಿಗೆ ಸಮಾನವಾಗಿವೆ ಅಥವಾ ಅವುಗಳಿಗೆ ಸಮೀಪವಾಗಿವೆ.
ತೈಲ ಮಾರುಕಟ್ಟೆ ಕಂಪನಿಗಳೇ ತಮ್ಮ ಹೇಳಿಕೆಯಲ್ಲಿ ಎಥನಾಲ್ ಮಿಶ್ರಣ ಪ್ರಕ್ರಿಯೆಯು ‘ನಿಯಂತ್ರಿತ ಮತ್ತು ಸ್ವಯಂಚಾಲಿತ ಪ್ರಕ್ರಿಯೆ’ಯಾಗಿದ್ದು, ತಮ್ಮ ಸಂಸ್ಕರಣಾಗಾರಗಳು ಮತ್ತು ಡಿಪೋಗಳಲ್ಲಿ ನಡೆಯುತ್ತದೆ ಎಂದು ತಿಳಿಸಿವೆ.
ಹಾಗಾದರೆ, ಕರ್ನಾಟಕ ರಾಜ್ಯಕ್ಕೆ ಸೇವೆ ಸಲ್ಲಿಸುತ್ತಿರುವ ತೈಲ ಮಾರುಕಟ್ಟೆ ಕಂಪನಿಗಳ ಆರು ಟರ್ಮಿನಲ್‌ಗಳಲ್ಲಿಯೇ ಪೆಟ್ರೋಲ್‌ನ ಪ್ರತಿಯೊಂದು ಲೀಟರ್‌ನಲ್ಲಿರುವ ಎಥನಾಲ್ ಮಿಶ್ರಣದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ; ಪೆಟ್ರೋಲ್ ಬಂಕ್‌ಗಳಲ್ಲಿ ಅಲ್ಲ.
ಪೆಟ್ರೋಲ್ ಬಂಕ್ ಡೀಲರ್‌ಗಳು ಟ್ಯಾಂಕರ್ ಮೂಲಕ ಪೂರೈಕೆಯಾಗುವ ಇಂಧನವನ್ನು ಮಾತ್ರ ಮಾರಾಟ ಮಾಡುತ್ತಾರೆ. ಇಂಧನದಲ್ಲಿನ ಎಥನಾಲ್ ಪ್ರಮಾಣವನ್ನು ನಿರ್ಧರಿಸುವಲ್ಲಿ ಅವರಿಗೆ ಯಾವುದೇ ಪಾತ್ರವಿರುವುದಿಲ್ಲ.
ಆದ್ದರಿಂದ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥನಾಲ್ ಪತ್ತೆಯಾಗಿರುವುದು ಇಂಧನ ಮಿಶ್ರಣದ ಮೂಲ ಹಂತದಲ್ಲಿನ ವೈಫಲ್ಯವನ್ನು ಸೂಚಿಸುತ್ತದೆ. ಇದರ ಜವಾಬ್ದಾರಿಯು ತೈಲ ಮಾರುಕಟ್ಟೆ ಕಂಪನಿಗಳ ಮೇಲೆಯೇ ಇರುತ್ತದೆ.
ಈ ಪರೀಕ್ಷಾ ಕಾರ್ಯಾಚರಣೆಯನ್ನು ಕೈಗೊಳ್ಳುವ ಮೂಲಕ ಹಾಗೂ ತೈಲ ಮಾರುಕಟ್ಟೆ ಕಂಪನಿಗಳ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಬಹಿರಂಗಪಡಿಸುವ ಮೂಲಕ ಕರ್ನಾಟಕ ಸರ್ಕಾರವು ದೇಶಾದ್ಯಂತ ಇಂತಹ ಲೋಪಗಳು ಮರುಕಳಿಸದಂತೆ ತಡೆಗಟ್ಟುವ ಎಚ್ಚರಿಕೆಯ ವಾತಾವರಣವನ್ನು ಸೃಷ್ಟಿಸಿದೆ.
ತೈಲ ಕಂಪನಿಗಳು ತಮ್ಮದೇ ಇಂಧನವನ್ನು ತಮ್ಮದೇ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ, ತಾವೇ ಗುಣಮಟ್ಟದ ಮಾನದಂಡಗಳನ್ನು ಪಾಲಿಸಿರುವುದಾಗಿ ಘೋಷಿಸಿಕೊಳ್ಳುವುದು ಎಂದರೆ, ಆರೋಪಿಯೇ ನ್ಯಾಯಾಧೀಶನಾಗಿ ವರ್ತಿಸಿದಂತಾಗಿದೆ.
ಇದು ಸ್ಪಷ್ಟವಾದ ಹಿತಾಸಕ್ತಿ ಸಂಘರ್ಷವಾಗಿದೆ. ಇಂತಹ ವ್ಯವಸ್ಥೆಯನ್ನು ಗ್ರಾಹಕರು ನಂಬಬೇಕೆಂದು ನಿರೀಕ್ಷಿಸುವುದು ನ್ಯಾಯಸಮ್ಮತವಲ್ಲ.
ಆದ್ದರಿಂದ, ಇಂಧನ ಪರೀಕ್ಷಾ ವ್ಯವಸ್ಥೆಯನ್ನು ತೈಲ ಮಾರುಕಟ್ಟೆ ಕಂಪನಿಗಳ ನಿಯಂತ್ರಣದಿಂದ ಹೊರತಂದು, ಸಾರ್ವಜನಿಕರಿಗೆ ಉತ್ತರದಾಯಿತ್ವ ಹೊಂದಿರುವ ಸ್ವತಂತ್ರ ಮತ್ತು ಪಾರದರ್ಶಕ ವ್ಯವಸ್ಥೆಯಡಿ ತರಬೇಕೆಂದು ಕರ್ನಾಟಕ ಸರ್ಕಾರ ಆಗ್ರಹಿಸುತ್ತದೆ.
ಮುಂದಿನ ಕ್ರಮಗಳು
ಈ ವಿಷಯದ ಕುರಿತು ಚರ್ಚಿಸಲು ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ನಿರ್ಧರಿಸಲು ಮಾನ್ಯ ಸಚಿವರು ಶೀಘ್ರದಲ್ಲಿಯೇ ಎಲ್ಲಾ ತೈಲ ಮಾರುಕಟ್ಟೆ ಕಂಪನಿಗಳ ಸಭೆಯನ್ನು ಕರೆಯಲಿದ್ದಾರೆ.
ಗ್ರಾಹಕರು ತಾವು ಹಣ ಪಾವತಿಸಿ ಖರೀದಿಸುವ ಇಂಧನದಲ್ಲಿ ನಿಗದಿತ ಗುಣಮಟ್ಟ ಮತ್ತು ಪ್ರಮಾಣವನ್ನು ಪಡೆಯುವಂತಾಗಲು ಕರ್ನಾಟಕ ಸರ್ಕಾರವು ಎಲ್ಲಾ ಅಗತ್ಯ ಪ್ರಯತ್ನಗಳನ್ನು ಮಾಡಲಿದೆ.
ಗ್ರಾಹಕರ ಹಿತಾಸಕ್ತಿಯ ರಕ್ಷಣೆ ಮತ್ತು ಅವರಿಗೆ ನ್ಯಾಯಯುತ ಸೇವೆ ಒದಗಿಸುವುದು ಕರ್ನಾಟಕ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.
ಇನ್ನಷ್ಟು ಸಂಬಂಧಿತ ಸುದ್ದಿಗಳನ್ನು ಓದಿ:
- ಇ20 ಪೆಟ್ರೋಲ್ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವವರು ಯಾರು? ಕರ್ನಾಟಕದ 56 ಮಾದರಿಗಳು ಮಾನದಂಡದಲ್ಲಿವೆ ಎಂದ ಇಂಡಿಯನ್ ಆಯಿಲ್; ಶೇ 31.2ರವರೆಗೆ ಎಥೆನಾಲ್ ಪತ್ತೆ ಎಂದಿದ್ದ ರಾಜ್ಯ
- ಪೆಟ್ರೋಲ್‌ನಲ್ಲಿ ಎಥೆನಾಲ್: ಹೊಣೆಯಿಂದ ನುಣುಚಿಕೊಳ್ಳಲು ಕೇಂದ್ರಕ್ಕೆ ಸಾಧ್ಯವಿಲ್ಲ ಎಂದ ಸಿಎಂ ಶಿವಕುಮಾರ್; ರಾಜ್ಯದ 67 ಕಡೆ ಮಾದರಿ ಪರೀಕ್ಷೆ
- ಶೇ 20ರ ಎಥೆನಾಲ್ ಮಿಶ್ರಣ ಸಮರ್ಥಿಸಿದ ಪ್ರಹ್ಲಾದ್ ಜೋಶಿ; ಇ20 ವಿರುದ್ಧ ಕಾಂಗ್ರೆಸ್ ವಿರೋಧ ‘ರೈತ ವಿರೋಧಿ’ ಎಂದು ಟೀಕೆ
- ಕರ್ನಾಟಕದ ಪೆಟ್ರೋಲ್ ಪರೀಕ್ಷೆಯಲ್ಲಿ ಶೇ. 31.2ರವರೆಗೆ ಎಥನಾಲ್, ಮಿತಿ ಮೀರಿದ ಮಿಶ್ರಣದ ವಿರುದ್ಧ ಕ್ರಮಕ್ಕೆ ಆಗ್ರಹ
