ಐದೇ ದಿನದಲ್ಲಿ ಕಾನ್ಸ್ಟೇಬಲ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ; ಸೆ.27ರವರೆಗೆ ಆಕ್ಷೇಪಣೆಗೆ ಅವಕಾಶ
ಬೆಂಗಳೂರು: ಕೆಎಸ್ಆರ್ಪಿ, ಕೆಎಸ್ಐಎಸ್ಎಫ್ ಮತ್ತು ಐಆರ್ಬಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗಾಗಿ ಸೆಪ್ಟೆಂಬರ್ 20ರಂದು ನಡೆದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೆಪ್ಟೆಂಬರ್ 25ರ ಶುಕ್ರವಾರ ಪ್ರಕಟಿಸಿದೆ.
ಅಭ್ಯರ್ಥಿಗಳು ಆಕ್ಷೇಪಣೆಗಳಿದ್ದಲ್ಲಿ ಸೆಪ್ಟೆಂಬರ್ 27ರೊಳಗೆ ನಿಗದಿತ ಲಿಂಕ್ ಮೂಲಕ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷೆ ನಡೆದ ಐದೇ ದಿನದಲ್ಲಿ ಫಲಿತಾಂಶ
ಪರೀಕ್ಷೆ ನಡೆದ ಕೇವಲ ಐದು ದಿನಗಳಲ್ಲಿಯೇ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ್ದು, ಇದು ದಾಖಲೆ ಅವಧಿಯಾಗಿದೆ ಎಂದು ಪ್ರಸನ್ನ ಹೇಳಿದ್ದಾರೆ. ಉಳಿಕೆ ಮೂಲ ವೃಂದದ 1,13,390 ಹಾಗೂ ಕಲ್ಯಾಣ ಕರ್ನಾಟಕ ವೃಂದದ 33,061 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಪರೀಕ್ಷೆ ನಡೆದ ದಿನವೇ ಎಲ್ಲ ಅಭ್ಯರ್ಥಿಗಳ ಓಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು ಎಂದು ಅವರು ವಿವರಿಸಿದ್ದಾರೆ.
