ಎಐ ಮೂಲಕ ಸೃಷ್ಟಿಸಿದ ಪ್ರಾತಿನಿಧಿಕ ಚಿತ್ರ: The Bengaluru Live.
ಬೆಂಗಳೂರು: ಬ್ಯಾಂಕ್ ನೌಕರರ ಒಕ್ಕೂಟವು ಸೆಪ್ಟೆಂಬರ್ 28ರಿಂದ 30ರವರೆಗೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೆಪ್ಟೆಂಬರ್ 27ರ ಭಾನುವಾರ ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಮಂಜುನಾಥ್ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಷ್ಕರಕ್ಕೂ ಮುನ್ನ ಗ್ರಾಹಕರು ತಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಪೂರ್ಣಗೊಳಿಸಲು ಅನುಕೂಲ ಮಾಡಿಕೊಡುವುದು ಮತ್ತು ಸಾರ್ವಜನಿಕರಿಗೆ ಉಂಟಾಗಬಹುದಾದ ಅಡಚಣೆಯನ್ನು ಕಡಿಮೆ ಮಾಡುವುದು ಈ ನಿರ್ಧಾರದ ಉದ್ದೇಶ ಎಂದು ಅವರು ಹೇಳಿದ್ದಾರೆ.
ಭಾನುವಾರ ಶಾಖೆಗಳು ಮತ್ತು ಎಟಿಎಂಗಳ ಸೇವೆ
ಸೆಪ್ಟೆಂಬರ್ 27ರಂದು ಬ್ಯಾಂಕ್ ಶಾಖೆಗಳು ಹಾಗೂ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರು ಈ ವ್ಯವಸ್ಥೆಯನ್ನು ಗಮನಿಸಿ ಭಾನುವಾರದ ಸೇವೆಯನ್ನು ತಮ್ಮ ಬ್ಯಾಂಕಿಂಗ್ ವ್ಯವಹಾರಗಳಿಗೆ ಬಳಸಿಕೊಳ್ಳಬಹುದು ಎಂದು ಮಂಜುನಾಥ್ ಮನವಿ ಮಾಡಿದ್ದಾರೆ.
ಮುಷ್ಕರದ ದಿನಗಳಲ್ಲೂ ಡಿಜಿಟಲ್ ಸೇವೆಗಳು
ಸೆಪ್ಟೆಂಬರ್ 28ರಿಂದ 30ರವರೆಗಿನ ಮುಷ್ಕರದ ದಿನಗಳಲ್ಲಿಯೂ ಎಟಿಎಂಗಳು, ಗ್ರಾಹಕ ಸೇವಾ ಕೇಂದ್ರಗಳು, ಡಿಜಿಟಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರಲಿವೆ ಎಂದು ಅವರು ತಿಳಿಸಿದ್ದಾರೆ.
