ಜೆಪಿ ನಗರ ಠಾಣೆ ಬಳಿ ಲಾರಿ ಚಾಲಕ ಆತ್ಮಹತ್ಯೆ; ಕಾರಣ ಸ್ಪಷ್ಟವಿಲ್ಲ, ಪೊಲೀಸ್ ತನಿಖೆ ಮುಂದುವರಿಕೆ
ಬೆಂಗಳೂರು: ನಗರದ ಜೆಪಿ ನಗರ ಪೊಲೀಸ್ ಠಾಣೆ ಸಮೀಪ ಲಾರಿ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಲಾರಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತನ ಗುರುತು ಇನ್ನೂ ಸಂಪೂರ್ಣವಾಗಿ ದೃಢಪಟ್ಟಿಲ್ಲ. ಆದರೆ ಲಾರಿಗೆ ತಮಿಳುನಾಡು ನೋಂದಣಿ ಸಂಖ್ಯೆ ಇರುವುದರಿಂದ, ಚಾಲಕ ತಮಿಳುನಾಡಿನವನೇ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಮೃತ ಚಾಲಕನನ್ನು ಹಿಂದಿನ ದಿನ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಹಿಡಿದು ದಂಡ ವಿಧಿಸಲಾಗಿತ್ತು. ಈ ವೇಳೆ ನೋಟಿಸ್ ಕೂಡ ನೀಡಲಾಗಿದ್ದು, ಲಾರಿಯನ್ನು ಸೀಜ್ ಮಾಡಲಾಗಿತ್ತು.
ಈ ಕ್ರಮದಿಂದ ಬೇಸರಗೊಂಡು ಅಥವಾ ಮಾನಸಿಕ ಒತ್ತಡದಿಂದ ಚಾಲಕ ಠಾಣೆ ಸಮೀಪವೇ ಬಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಚಾಲಕನ ಹೆಸರು ಷಣ್ಮುಖ ಎಂದು ತಿಳಿದುಬಂದಿದ್ದು, ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಲಾರಿ ಚಾಲನೆ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಚಾಲಕನ ಹಿನ್ನೆಲೆ, ಆತ ಎಲ್ಲಿಂದ ಬಂದಿದ್ದ, ಮತ್ತು ಆತ್ಮಹತ್ಯೆಗೆ ಕಾರಣವಾದ ಅಂಶಗಳ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈ ಪ್ರಕರಣವು ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದ ಪರಿಣಾಮವೇನಾ ಅಥವಾ ಇನ್ನಾವುದೇ ಕಾರಣಗಳಿದೆಯೇ ಎಂಬುದನ್ನು ತಿಳಿಯಲು ಪೊಲೀಸರು ವಿವಿಧ ಕೋಣಗಳಿಂದ ತನಿಖೆ ನಡೆಸುತ್ತಿದ್ದಾರೆ.
